"ಸದಾ ನಿನ್ನೊಂದಿಗೆ"; ಸ್ಪೆಷಲ್ ಫೋಟೊ ಹಂಚಿಕೊಂಡ ಮೇಘನಾ ರಾಜ್
ಮಗ ರಾಯನ್ ಲಾಲನೆ ಪಾಲನೆ ಜೊತೆ ಜೊತೆಗೆ ನಟಿ ಮೇಘನಾ ರಾಜ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಫ್ರೆಂಡ್ಸ್, ಫ್ಯಾಮಿಲಿ ಅಂತ ಖುಷಿಯಾಗಿದ್ದಾರೆ. ಆದರೂ ಚಿರು ಸರ್ಜಾ ಅಗಲಿಕೆ ನೋವು ಕಾಡುತ್ತಲೇ ಇದೆ.
5 ವರ್ಷಗಳ ಹಿಂದೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ನಿಧನರಾಗಿದ್ದರು. ಆಗ ಮೇಘನಾ 5 ತಿಂಗಳ ಗರ್ಭಿಣಿ ಆಗಿದ್ದರು. ಸಾಕಷ್ಟು ನೋವಿನ ನಡುವೆಯೂ ಮಗುವಿನ ಮುಖ ನೋಡಿ ಜೀವನ ಸಾಗಿಸುತ್ತಿದ್ದಾರೆ. ಎರಡನೇ ಮದುವೆ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇರುತ್ತದೆ. ಇದಕ್ಕೆ ತಮ್ಮ ಅಭಿಪ್ರಾಯವನ್ನು ಮೇಘನಾ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಲೇ ಇದ್ದಾರೆ. ಇವರನ್ನು ಮದುವೆ ಆಗುತ್ತಾರೆ, ಅವರ ಜೊತೆ ಹೊಸ ಬಾಳಿಗೆ ಕಾಲಿಡುತ್ತಾರೆ ಅಂತೆಲ್ಲಾ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಅದಕ್ಕೆಲ್ಲಾ ಮೇಘನಾ ತಲೆ ಕೆಡಿಸಿಕೊಳ್ತಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು, ಫ್ಯಾಮಿಲಿ ಆಯ್ತು ಎಂದು ಸುಮ್ಮನಿದ್ದಾರೆ.
ಸದ್ಯ ಚಿರಂಜೀವಿ ಸರ್ಜಾ ಜೊತೆಗಿನ ಒಂದಷ್ಟು ಫೋಟೊಗಳನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. "ಪ್ರತಿ ಜೀವಿತಾವಧಿಯಲ್ಲಿ ನಿನ್ನೊಂದಿಗೆ" ಎಂದು ಅದಕ್ಕೆ ಕ್ಯಾಪ್ಷನ್ ಕೊಟ್ಟಿದ್ಧಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಚಿರು ಅಗಲಿಕೆ ಬಳಿಕ ಮೇಘನಾ ರಾಜ್ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾಗಿದೆ. 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಹಾಗೂ 'ತತ್ಸಮ ತದ್ಬವ' ಚಿತ್ರಗಳಲ್ಲಿ ಅವರು ನಟಿಸಿದ್ದರು. ಉಪೇಂದ್ರ ಜೊತೆ ನಟಿಸುತ್ತಿರುವ 'ಬುದ್ಧಿವಂತ'- 2 ಸಿನಿಮಾದಲ್ಲಿ ಆಕೆ ನಟಿಸಿದ್ದಾರೆ. ಕಾರಣಾಂತರಗಳಿಂದ ಆ ಸಿನಿಮಾ ಬಿಡುಗಡೆ ತಡವಾಗುತ್ತಿದೆ.
ನಟ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್ ದಂಪತಿ ಪುತ್ರಿ ಮೇಘನಾ ರಾಜ್ ಪೋಷಕರ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದಿದ್ದರು. ಪುನೀತ್ ರಾಜ್‌ಕುಮಾರ್ ಜೊತೆ 'ಆಕಾಶ್' ಚಿತ್ರದಲ್ಲಿ ನಟಿಸೋ ಅವಕಾಶ ಮಿಸ್ ಮಾಡಿಕೊಂಡಿದ್ದರು. ಬಳಿಕ ತೆಲುಗಿನ 'ಬೆಂಡು ಅಪ್ಪಾರಾವ್' ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಮುಂದೆ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದರು.
'ಆಟಗಾರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆ ಮೇಘನಾ ರಾಜ್ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಸ್ನೇಹ ಹುಟ್ಟಿ ಬಳಿಕ ಅದು ಪ್ರೀತಿಗೆ ತಿರುಗಿತ್ತು. ಬಳಿಕ ಪೋಷಕರ ಒಪ್ಪಿಗೆ ಪಡೆದು ಇಬ್ಬರೂ ಮದುವೆ ಆಗಿದ್ದರು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯಗಳಂತೆ ಮದುವೆ ಶಾಸ್ತ್ರಗಳು ನಡೆದಿದ್ದವು. 2018, ಮೇ 2ರಂದು ಹಸೆಮಣೆ ಏರಿದ್ದ ಜೋಡಿ ಎರಡು ವರ್ಷಗಳ ಕಾಲ ಬಹಳ ಖುಷಿಯಾಗಿ ಜೀವನ ಸಾಗಿಸಿತ್ತು.
ಅದೊಂದು ದಿನ ಚಿರು-ಮೇಘನಾ ಬಾಳಲ್ಲಿ ಬಿರುಗಾಳಿ ಎದ್ದಿತ್ತು. ಜೂನ್ 7, 2020ರಂದು ಹೃದಯಾಘಾತದಿಂದ ಚಿರು ಕೊನೆಯುಸಿರೆಳೆದಿದ್ದರು. ಇದು ಮೇಘನಾ ರಾಜ್ ಬದುಕಿಗೆ ಭಾರೀ ಆಘಾತ ತಂದಿತ್ತು. ಎಲ್ಲಾ ಮುಗಿದೇ ಹೋಯ್ತು ಎಂದುಕೊಳ್ಳುವ ಸಮಯದಲ್ಲಿ ಹೊಟ್ಟೆಯಲ್ಲಿದ್ದ ಮಗು ಹೊಸ ಭರವಸೆ ಮೂಡಿಸಿತ್ತು. ಆ ಮಗುವಿಗಾಗಿ ಎಲ್ಲಾ ನೋವು ನುಂಗಿ ಬದುಕಬೇಕಾದ ಅನಿವಾರ್ಯತೆ ಎದುರಾಯಿತು. ಎಲ್ಲಾ ಸಹಿಸಿಕೊಂಡು ಮೇಘನಾ ಬದುಕಲು ಆರಂಭಿಸಿದರು.
ಇನ್ನೆರಡು ದಿನಗಳಲ್ಲಿ ಮದುವೆಯ ವಾರ್ಷಿಕೋತ್ಸವ ಬರ್ತಿದೆ. ಹಾಗಾಗಿ ಮೇಘನಾ ರಾಜ್ ಇದೀಗ ಚಿರು ನೆನಪಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಇನ್ನು ಸಿನಿಮಾಗಳ ಕಡೆ ಮುಖ ಮಾಡಿರುವ ಮೇಘನಾ ಸಾಕಷ್ಟು ಕತೆಗಳನ್ನು ಕೇಳುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಹುಡುಕಾಟದಲ್ಲಿದ್ದಾರೆ. ಆದಷ್ಟು ಬೇಗ ಹೊಸ ಹೊಸ ಪಾತ್ರಗಳ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.


Click it and Unblock the Notifications











