ಅತ್ತಾಗ ಹೆಗಲು ಕೊಟ್ಟವರಿಗೆ ಕೈ ಮುಗಿದ ಚಿರು ಪತ್ನಿ ಮೇಘನಾ ರಾಜ್
ಚಿರಂಜೀವಿ ಸರ್ಜಾ ಅಗಲಿ ಇನ್ನೆರಡು ದಿನಕ್ಕೆ ಎರಡು ವಾರವಾಗುತ್ತದೆ. ಅಗಲಿಕೆಯ ನೋವು ಇನ್ನೂ ಕಡಿಮೆಯಾಗಿಲ್ಲ. ಚಿರು ಪತ್ನಿ ಮೇಘನಾ ರಾಜ್ ಅವರಿಗೆ ಚಿರು ಅಗಲಿಕೆ ಎಂದೂ ತೀರದ ನೋವು.
Recommended Video
ಇಂಥಹಾ ನೋವಿನ ಸಂದರ್ಭದಲ್ಲೂ ಮೇಘನಾ ರಾಜ್ ಅವರು ಕಷ್ಟಕಾಲದಲ್ಲಿ ಜೊತೆಗಿದ್ದು ಸಹಾಯ ಮಾಡಿದವರನ್ನು, ನೋವನ್ನು ಹಂಚಿಕೊಂಡರವನ್ನು ಮರೆತಿಲ್ಲ.
ಮೇಘನಾ ರಾಜ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಕಷ್ಟಕಾಲದಲ್ಲಿ ನೆರವಿಗೆ ಬಂದ, ಪ್ರೀತಿಯ ಮಳೆಗರೆದ, ನೋವನ್ನು ಹಂಚಿಕೊಂಡ ಎಲ್ಲರಿಗೂ ವಿಶೇಷವಾಗಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ನನ್ನ ಜೀವನದ ಕಠಿಣ ದಿನಗಳಿವು: ಮೇಘನಾ
'ಕಳೆದ ಕೆಲವು ದಿನಗಳು ನನ್ನ ಜೀವನದ ಅತ್ಯಂತ ಕಠಿಣ ದಿನಗಳು, ಅದ್ಭುತವಾಗಿದ್ದ ನನ್ನ ಸುಂದರ ಲೋಕ ಅಲ್ಲೋಲಕಲ್ಲೋಲವಾಗಿ ನನಗೆ ಏನೂ ಇಲ್ಲ ಎಲ್ಲವೂ ಕತ್ತಲೆ ಎಂದುಕೊಂಡಾಗ ಎಂದುಕೊಂಡಾಗ ಬೆಳಕಂತೆ ಕಂಡದ್ದು ನನ್ನ ಕುಟುಂಬ, ಸ್ನೇಹಿತರು, ಚಿತ್ರರಂಗದ ಸಹೋದ್ಯೋಗಿಗಳು, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳು ತೋರಿದ ಪ್ರೀತಿ, ವಾತ್ಸಲ್ಯ, ಮಮತೆ' ಎಂದು ಬರೆದಿದ್ದಾರೆ ಮೇಘನಾ ರಾಜ್.

ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಮೇಘನಾ
'ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ, ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು. ಆ ನಿಮ್ಮ ಪ್ರೀತಿಯೆ ನನಗೆ ಆಸರೆ ಮತ್ತು ರಕ್ಷಾ ಕವಚ' ಎಂದು ಅಭಿಮಾನಿಗಳ ಅಭಿಮಾನದ ಆಸರೆಯನ್ನು ನೆನೆದಿದ್ದಾರೆ ಮೇಘನಾ ರಾಜ್.

ನಾನು ಅತ್ತಾಗ ನೀವೂ ಕಣ್ಣೀರು ಸುರಿಸಿದ್ದೀರಿ: ಮೇಘನಾ
'ನಾನು ಅತ್ತಾಗ ನೀವು ಕಣ್ಣೀರು ಸುರಿಸಿದ್ದೀರಿ, ನನ್ನ ನೋವನ್ನೂ ನೀವೂ ಹಂಚಿಕೊಂಡಿದ್ದೀರಿ, ನನ್ನಷ್ಟೆ ಚಿರುವನ್ನು ನೀವು ಪ್ರೀತಿಸಿದ್ದೀರಿ, ಆ ಪ್ರೀತಿಗೆ ನಾನು ಚಿರರುಣಿ. ಇಂಥಹಾ ನೋವಿನ ಸಮಯದಲ್ಲಿ ನಿಮ್ಮ ಅಭಿಮಾನ ಚಿತ್ರರಂಗದ ಬೆಂಬಲ ಎಲ್ಲವೂ ಚಿರು ಸಂಪಾದಿಸಿದ್ದ ಪ್ರೀತಿಯ ರಾಶಿಯ ಗುರುತು. ನಿಮ್ಮ ಅಭಿಮಾನ ಗೆದ್ದ ಅವರಿಗಿಂತ ಸಿರಿವಂತ ಇನ್ಯಾರೂ ಇಲ್ಲ' ಎಂದಿದ್ದಾರೆ ಮೇಘನಾ ರಾಜ್.

ಪ್ರೀತಿಯಿಂದ ಮಹಾರಾಜನಂತೆ ಕಳಿಸಿಕೊಟ್ಟಿದ್ದೀರಿ: ಮೇಘನಾ
'ನಮ್ಮ ಮನೆಯಲ್ಲಿ ದೊಡ್ಡವರು ಎಂದು ಕರೆಯುತ್ತಿದ್ದ ಚಿರುವನ್ನು ನಿಮ್ಮ ಮನೆ ಮಗನಂತೆ ಭಾವಿಸಿ ಇದ್ದಷ್ಟು ದಿನ ರಾಜನಂತೆ ಬದುಕಿದ್ದ ಚಿರುವನ್ನು ಸಾಲು,ಸಾಲಾಗಿ ಬಂದು ಪ್ರೀತಿಯಿಂದ ಮಹಾರಾಜನಂತೆ ಕಳುಹಿಸಿಕೊಟ್ಟ ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು' ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ಮೇಘನಾ.

ನನ್ನ ಮಡಿಲಿಗೆ ಮತ್ತೆ ಬರುವನು ಚಿರು: ಮೇಘನಾ
'ಆ ಮಹಾರಾಜ ನನ್ನ ಮಡಿಲಿಗೆ ಪುಟ್ಟ-ಪುಟ್ಟ ಹೆಜ್ಜೆಗಳನ್ನಿಟ್ಟು ತಿರುಗಿ ಬರುವನು' ಎಂದು ಭಾವುಕ ಸಾಲಿನೊಂದಿಗೆ ಮೇಘನಾ ರಾಜ್ ತಮ್ಮ ಪೋಸ್ಟ್ ಅಂತ್ಯಗೊಳಿಸಿದ್ದಾರೆ. ಮೇಘನಾ ರಾಜ್ ಗರ್ಭಿಣಿ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ ಇಂಥಹಾ ಸಂತೋಶದ ಸಂದರ್ಭದಲ್ಲಿಯೇ ಚಿರು ಅವರನ್ನು ಅಗಲಿದ್ದಾರೆ.


Click it and Unblock the Notifications











