'ಮಿಷನ್ ಮಂಗಲ್' ನಿರ್ದೇಶಕನಿಗೆ ಕನ್ನಡದ ಈ ಇಬ್ಬರು ಡೈರೆಕ್ಟರ್ ಗಳು ಫೇವರೇಟ್
ಅಕ್ಷಯ್ ಕುಮಾರ್ ನಟನೆಯ 'ಮಿಷನ್ ಮಂಗಲ್' ಸಿನಿಮಾವನ್ನು ನಿರ್ದೇಶನ ಮಾಡಿರುವುದು ಜಗನ್ ಶಕ್ತಿ. ಜಗನ್ ಮೂಲತಃ ಕರ್ನಾಟಕದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಜಗನ್ ಬಾಲಿವುಡ್ ನಲ್ಲಿ ಬಹು ದೊಡ್ಡ ಹಿಟ್ ನೀಡಿದ್ದಾರೆ.
ಇತ್ತೀಚಿಗಷ್ಟೆ ನಿರೂಪಕಿ ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಜಗನ್ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕನ್ನಡದ ಇಬ್ಬರು ನಿರ್ದೇಶಕರು ನನಗೆ ಇಷ್ಟ ಎಂದು ತಿಳಿಸಿದ್ದಾರೆ. 'ಮಿಷನ್ ಮಂಗಲ್'ನಂತಹ ದೊಡ್ಡ ಸಿನಿಮಾ ಮಾಡಿರುವ ಜಗನ್ ಗೆ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳು ಬಹಳ ಇಷ್ಟ.
ಕಾಲೇಜ್ ದಿನಗಳಲ್ಲಿ ನವರಂಗ್ ಥಿಯೇಟರ್ ಹೋಗಿ ಸಿನಿಮಾ ನೋಡುತ್ತಿದ್ದು, ರಾಜ್ ಕುಮಾರ್ ಅವರ ಅನೇಕ ಚಿತ್ರಗಳನ್ನು ವೀಕ್ಷಿಸಿದ್ದಾರಂತೆ. ಇದರ ಜೊತೆಗೆ ಕನ್ನಡ ಚಿತ್ರರಂಗದ ಇಬ್ಬರು ನಿರ್ದೇಶಕರ ಕೆಲಸ 'ಮಿಷನ್ ಮಂಗಲ್' ನಿರ್ದೇಶಕರಿಗೆ ಬಹಳ ಇಷ್ಟವಂತೆ.

ಉಪೇಂದ್ರ ಮತ್ತೆ ನಿರ್ದೇಶನ ಮಾಡಬೇಕು
ಉಪೇಂದ್ರ ನಿರ್ದೇಶನ ಅಂದರೆ ಜಗನ್ ಶಕ್ತಿ ಅವರಿಗೆ ಬಹಳ ಇಷ್ಟವಂತೆ. ಅವರು 'ಉಪೇಂದ್ರ' ಸಿನಿಮಾ ನೋಡಿ ಸಿಕ್ಕಾಪಟ್ಟೆ ಖುಷಿ ಆಗಿದ್ದರಂತೆ. ಉಪೇಂದ್ರ ಸಿನಿಮಾದ ಒಂದು ಸೀನ್ (ಬೇರೆಯವರ ಮನೆಗೆ ನುಗ್ಗಿ ನೀನೆ ನನ್ನ ಅಪ್ಪ ಎನ್ನುವುದು) ಫೇವರೇಟ್ ಅಂತೆ. ಉಪೇಂದ್ರ ಬೋಲ್ಡ್ ನೆಸ್ ಜಗನ್ ಮೆಚ್ಚಿಕೊಂಡಿದ್ದಾರೆ. ಅವರ ನಿರ್ದೇಶನದ ಸಿನಿಮಾಗಾಗಿ ಕಾಯುತ್ತಿದ್ದೇನೆ ಎಂದು ಜಗನ್ ಹೇಳಿದ್ದಾರೆ.

ಸೂರಿಯ 'ಕೆಂಡಸಂಪಿಗೆ' ಇಷ್ಟ
ಉಪೇಂದ್ರ ಜೊತೆಗೆ ದುನಿಯಾ ಸೂರಿ ಬಗ್ಗೆಯೂ ಜಗನ್ ಶಕ್ತಿ ಮಾತನಾಡಿದ್ದಾರೆ. ದುನಿಯಾ ಸೂರಿ ಕೂಡ ಅವರಿಗೆ ಕನ್ನಡದಲ್ಲಿ ಇಷ್ಟ ಆಗುವ ನಿರ್ದೇಶಕರಂತೆ. ಸೂರಿ ಮೊದಲ ಸಿನಿಮಾ 'ದುನಿಯಾ' ನೋಡಿ ಜಗನ್ ಗೆ ಬಹಳ ಖುಷಿ ಆಗಿತಂತೆ. ಆದಾದ ನಂತರ 'ಕೆಂಡಸಂಪಿಗೆ' ಸಹ ನನಗೆ ತುಂಬ ಇಷ್ಟ ಎಂದು ಜಗನ್ ತಿಳಿಸಿದ್ದಾರೆ.

'ಕೆಜಿಎಫ್' ಬಗ್ಗೆ ಮೆಚ್ಚುಗೆ
ಕನ್ನಡದ ಸಿನಿಮಾಗಳ ಬೆಳವಣಿಗೆ ಬಗ್ಗೆ ಜಗನ್ ಶಕ್ತಿ ಸಂತಸ ವ್ಯಕ್ತ ಪಡಿಸಿದ್ದಾರೆ. 'ಕೆಜಿಎಫ್' ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿದೆ. ಆ ಸಿನಿಮಾ ಹಿಂದಿಯ ವಿತರಕರಿಗೆ 60 ಕೋಟಿ ಹಣ ಮಾಡಿಕೊಟ್ಟಿದೆ. ಬಾಲಿವುಡ್ ಚಿತ್ರರಂಗದ ಅನೇಕರು ಮೆಚ್ಚಿಕೊಂಡಿದ್ದಾರೆ. ಲೋಕಲ್ ಪಂಜಾಬಿ ಹುಡುಗರು ಕೂಡ ರಾಕಿ ಬಾಯ್ ಎಂದು ಫಾಲೋ ಮಾಡುತ್ತಾರೆ ಎಂದಿದ್ದಾರೆ.

'ಉಗ್ರಂ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ
ಜಗನ್ ಶಕ್ತಿ ಕನ್ನಡದ 'ಉಗ್ರಂ' ಸಿನಿಮಾದಲ್ಲಿ ಈ ಹಿಂದೆ ಕೆಲಸ ಮಾಡಿದ್ದರು. ಸುನೀಲ್ ಬಾಬು ಎಂಬುವವರು 'ಉಗ್ರಂ' ಚಿತ್ರದ ಕಲಾ ನಿರ್ದೇಶಕರಾಗಿದ್ದರು. ಕಾರಣಾಂತರಗಳಿಂದ ಅವರು ಒಂದು ತಿಂಗಳು ಬರಲು ಆಗಲಿಲ್ಲ. ಆಗ ಸ್ನೇಹಿತ ಜಗನ್ ಶಕ್ತಿಗೆ ಸುನೀಲ್ ಬಾಬು 'ಉಗ್ರಂ' ಸಿನಿಮಾದ ಕೆಲಸ ನೋಡಿಕೊಳ್ಳಲು ಹೇಳಿದರು. ಆಗ ಜಗನ್ 'ಉಗ್ರಂ' ಸಿನಿಮಾದಲ್ಲಿ ಕೆಲಸ ಮಾಡಿದರು.


Click it and Unblock the Notifications











