'ಶ್ರೀಮನ್ನಾರಾಯಣ'ನಿಗೆ ಮಸಿ ಬಳಿಯುವ ಪ್ರಯತ್ನ: ರಕ್ಷಿತ್ ಟಾರ್ಗೆಟ್ ಮಾಡಿದ ಕಿಡಿಗೇಡಿಗಳು!
Recommended Video
ಸಿನಿಮಾ ಪ್ರಚಾರಗಳಿಗೆ ಸಾಮಾಜಿಕ ಜಾಲತಾಣ ಬಹಳ ದೊಡ್ಡಮಟ್ಟದಲ್ಲಿ ಉಪಯುಕ್ತವಾಗುತ್ತಿದೆ. ಇದರಿಂದ ಇದರಿಂದ ದುಷ್ಪರಿಣಾಮವೂ ಆಗುತ್ತಿದೆ. ಉದ್ದೇಶಪೂರ್ವಕವಾಗಿ ಸಿನಿಮಾಗಳಿಗೆ ಅಪಪ್ರಚಾರ ಮಾಡುವುದು, ಸ್ಟಾರ್ ವಾರ್ ಹುಟ್ಟುಹಾಕುವುದು, ಅಭಿಮಾನಿಗಳ ಮಧ್ಯೆ ಜಗಳ ಸೃಷ್ಟಿಸುವುದು ಇಂತಹ ಘಟನೆಗಳು ಇತ್ತೀಚಿನ ದಿನದಲ್ಲಿ ಹೆಚ್ಚಾಗುತ್ತಿದೆ.
ಇದೀಗ, ಈ ಸಮಸ್ಯೆ 'ಅವನೇ ಶ್ರೀಮನ್ನಾರಾಯಣ' ಚಿತ್ರತಂಡಕ್ಕೂ ತಟ್ಟಿದೆ. ಐದು ಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿರುವ ಈ ಸಿನಿಮಾದ ಮೇಲೆ ದೊಡ್ಡ ಭರವಸೆ ಇದೆ. ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ತರಲಿದೆ ಎಂಬ ನಿರೀಕ್ಷೆ ಇಂಡಸ್ಟ್ರಿಯಲ್ಲಿದೆ.
ಆದರೆ, ಆ ನಿರೀಕ್ಷೆ, ಭರವಸೆ, ಆಸೆ, ಕನಸುಗಳಿಗೆ ಈಗಲೇ ಎಳ್ಳು-ನೀರು ಬಿಡುವ ಕೆಲಸಕ್ಕೆ ಮುಂದಾಗಿದ್ದಾರೆ ಕೆಲವು ಕಿಡಿಗೇಡಿಗಳು. ಇದರ ಬಗ್ಗೆ ಚಿತ್ರತಂಡ ಕೂಡ ಎಚ್ಚೆತ್ತುಕೊಂಡಿದ್ದು, ಅಭಿಮಾನಿಗಳ ಗಮನಕ್ಕೆ ತಂದಿದೆ. ಮುಂದೆ ಓದಿ....

'ಶ್ರೀಮನ್ನಾರಾಯಣ' ಹೆಸರಿಗೆ ಮಸಿ ಬಳಿಯುವ ಪ್ರಯತ್ನ
'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಡಿಪಿ ಮತ್ತು ಹೆಸರಿನಲ್ಲಿ ಕೆಲವು ಪೇಜ್ ಗಳು ಸಾಮಾಜಿಕ ತಾಲತಾಣದಲ್ಲಿ ಕ್ರಿಯೇಟ್ ಆಗಿವೆ. ಈ ಪೇಜ್ ಗಳ ಮೂಲಕ ಇತರೆ ಸ್ಟಾರ್ ನಟರ ಬಗ್ಗೆ ಅಸಭ್ಯವಾಗಿ ಪೋಸ್ಟ್ ಮಾಡುವುದು, ಅವರ ಅಭಿಮಾನಿಗಳನ್ನ ನಿಂದಿಸುವ ಕೆಲಸ ಆಗ್ತಿದೆ. ಕೆಟ್ಟದಾಗಿ ಸಂದೇಶಗಳನ್ನ ರವಾನಿಸುವ ಮೂಲಕ ಇಂಡಸ್ಟ್ರಿಯಲ್ಲಿ ಬಿರುಕು ಮೂಡಿಸುವ ಪ್ರಯತ್ನ ಆಗ್ತಿದೆ.

ಎಚ್ಚೆತ್ತುಕೊಂಡ ಚಿತ್ರತಂಡ
ಈ ಬಗ್ಗೆ ಅವನೇ ಶ್ರೀಮನ್ನಾರಾಯಣ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಅವರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು, ''ನಾವು ಒಳ್ಳೆಯ ಸಿನಿಮಾ ಮಾಡುವುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಕನ್ನಡ ಇಂಡಸ್ಟ್ರಿ ನಮ್ಮ ಮನೆ. ಸಿನಿಮಾ ನಮ್ಮ ದೇವರು, ನಮಗೆ ಯಾವುದೇ ಫ್ಯಾನ್ಸ್ ವಾರ್ ಬೇಡ'' ಎಂದು ತಿಳಿಸಿದ್ದಾರೆ.

3 ವರ್ಷದ ಜೀವನ ಇದು
''ಅವನೇ ಶ್ರೀಮನ್ನಾರಾಯಣ ಸಿನಿಮಾ ನಮ್ಮ ಜೀವನಕ್ಕಿಂತ ದೊಡ್ಡದು. ಕಳೆದ ಮೂರು ವರ್ಷಗಳಿಂದ ಸಾವಿರಾರು ಜನರ ಶ್ರಮ ಇದರಲ್ಲಿದೆ. ಇದು ನಮ್ಮ ಚಿತ್ರ. ಕನ್ನಡದ ಹೆಮ್ಮೆಯ ಚಿತ್ರ. ಒಗ್ಗಟ್ಟಾಗಿ ನಿಂತು ಒಳ್ಳೆಯ ಚಿತ್ರಗಳನ್ನ ಪ್ರೋತ್ಸಾಹಿಸೋಣ'' ಎಂದು ಪುಷ್ಕರ್ ಮನವಿ ಮಾಡಿದ್ದಾರೆ.

ಪೈಲ್ವಾನ್ ಚಿತ್ರಕ್ಕೆ ಸಮಸ್ಯೆ ಆಗಿತ್ತು
ಸುದೀಪ್ ನಟಿಸಿದ್ದ ಪೈಲ್ವಾನ್ ಸಿನಿಮಾ ಬಿಡುಗಡೆ ವೇಳೆ, ಉದ್ದೇಶಪೂರ್ವಕವಾಗಿ ಈ ಚಿತ್ರವನ್ನ ಅಪಪ್ರಚಾರ ಮಾಡಿದ್ದು ಗೊತ್ತಿರುವ ಸಂಗತಿ. ಅದಕ್ಕೂ ಮುಂಚೆ ಬಂದಿದ್ದ ಕೆಜಿಎಫ್, ಕುರುಕ್ಷೇತ್ರ ಸಿನಿಮಾಗಳಿಗೂ ಇಂತಹ ಅನುಭವ ಆಗಿದೆ. ಈಗ ಅವನೇ ಶ್ರೀಮನ್ನಾರಾಯಣ ಚಿತ್ರದ ಸರದಿ. ಬಹುಶಃ, ಕನ್ನಡ ಸಿನಿಮಾಗಳಿಗೆ ಅಥವಾ ದೊಡ್ಡ ಬಜೆಟ್ ಚಿತ್ರಗಳಿಗೆ ಅಪ್ರಚಾರ ಮಾಡುವ ತಂಡಗಳು ಇಂಡಸ್ಟ್ರಿಯಲ್ಲಿರಬಹುದು ಎಂಬ ಅನುಮಾನ ಕಾಡುತ್ತಿದೆ.

ಡಿಸೆಂಬರ್ 27ಕ್ಕೆ ಅವನು ಎಂಟ್ರಿ
ಡಿಸೆಂಬರ್ 27ಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರ ದೇಶಾದ್ಯಂತ ತೆರೆಕಾಣುತ್ತಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ, ಅಚ್ಯುತ್ ಕುಮಾರ್ ಸೇರಿದಂತೆ ಹಲವು ನಟಿಸಿದ್ದಾರೆ. ಸಚಿನ್ ರವಿ ಈ ಚಿತ್ರ ನಿರ್ದೇಶನ ಮಾಡಿದ್ದು, ಹೆಚ್.ಕೆ ಪ್ರಕಾಶ್ ಮತ್ತು ಪುಷ್ಕರ್ ಮಲ್ಲಿಕಾರ್ಜುನ ನಿರ್ಮಿಸಿದ್ದಾರೆ. ಸದ್ಯದ ಮಟ್ಟಿಗೆ ಇದು ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗಿದೆ.


Click it and Unblock the Notifications











