ಶಾಸಕ ಜಮೀರ್ ಪುತ್ರ ಝೈದ್ ಖಾನ್ ಹೊಸ ಸಿನಿಮಾ; 'ಬನಾರಸ್'-'ಉಪಾಧ್ಯಕ್ಷ' ಕಾಂಬೋ ಫಸ್ಟ್ ಲುಕ್ ಔಟ್
ಚಾಮರಾಜ ಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲನೇ ಸಿನಿಮಾ 'ಬನಾರಸ್' ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಾಣ ಮಾಡಲಾಗಿತ್ತು. ಆದರೆ, ಅಂದುಕೊಂಡಂತೆ ಸಿನಿಮಾ ಯಶಸ್ಸು ಕಾಣಲಿಲ್ಲ.
'ಬನಾರಸ್' ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಂದು ವಿಭಿನ್ನ ಸಿನಿಮಾ ಆಗಿತ್ತು. ಹಾಡುಗಳು ಸೂಪರ್ ಹಿಟ್ ಆಗಿದ್ದವು. ಹೀಗಿದ್ದರೂ, ಝೈದ್ ಖಾನ್ ಸಿನಿಮಾ ಗಳಿಕೆಯಲ್ಲಿ ಹಿಂದೆ ಉಳಿದಿತ್ತು. ಈಗ ಮತ್ತೊಂದು ಹೊಸ ಅವತಾರದಲ್ಲಿ ಬೆಳ್ಳಿ ಪರದೆ ಮೇಲೆ ಬರುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಎರಡನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿದೆ.

ಚಿಕ್ಕಣ್ಣನನ್ನು ಮೊದಲ ಬಾರಿಗೆ ಹೀರೊ ಮಾಡಿ ಗೆದ್ದಿರೋ 'ಉಪಾಧ್ಯಕ್ಷ' ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಕಾಂಬಿನೇಷನ್ ಸಿನಿಮಾ ಮೇಲೆ ಸ್ಯಾಂಡಲ್‌ವುಡ್ ಮಂದಿಯ ಕಣ್ಣು ಬಿದ್ದಿದೆ. ಸದ್ಯ ಇಬ್ಬರ ಕಾಂಬಿನೇಷನ್ ಅನೌನ್ಸ್ ಮಾಡುವ ಹೊಸ ಸಿನಿಮಾದ ಪೋಸ್ಟರ್ ಹೊರಬಿದ್ದಿದೆ. ಈ ಪೋಸ್ಟರ್ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಒಂದ್ಕಡೆ 'ಬನಾರಸ್' ಸಿನಿಮಾ ಝೈದ್ ಖಾನ್. ಇನ್ನೊಂದು ಕಡೆ 'ಉಪಾಧ್ಯಕ್ಷ' ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್. ಇಬ್ಬರ ಕಾಂಬಿನೇಷನ್ ಸಿನಿಮಾ ಮೋಡಿ ಮಾಡುವುದಕ್ಕೆ ಹೊರಟಿದೆ. ಸಿನಿಮಾ ಟೈಟಲ್ ಇನ್ನೂ ಅನೌನ್ಸ್ ಆಗಿಲ್ಲ. ಝೈದ್ ಖಾನ್ ಲುಕ್ ಹೇಗಿರುತ್ತೆ ಅನ್ನೋದನ್ನು ರಿವೀಲ್ ಮಾಡಿಲ್ಲ. ಆದರೆ, ಇದು ಪಕ್ಕಾ ರಗಡ್ ಲವ್‌ಸ್ಟೋರಿ ಅನ್ನುವ ಸುಳಿವನ್ನು ಬಿಟ್ಟುಕೊಟ್ಟಿದೆ.
ಸದ್ಯದಲ್ಲೇ ಝೈದ್ ಖಾನ್ ಹಾಗೂ ಅನಿಲ್ ಕುಮಾರ್ ಕಾಂಬಿನೇಷನ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗುತ್ತೆ. ಇದೇ ಸಂದರ್ಭದಲ್ಲಿ ಸಿನಿಮಾ ಟೈಟಲ್ ಹಾಗೂ ಝೈದ್ ಲುಕ್ ರಿವೀಲ್ ಆಗಲಿದೆ. ಅಂದ್ಹಾಗೆ ಇದು ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಎರಡನೇ ಸಿನಿಮಾವಿದು. ಆಶ್ರಿತ್ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅನಿಲ್ ಕುಮಾರ್ ನಿರ್ದೇಶನವಿದ್ದರೆ, ಜೆ.ಎಸ್ ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಎಡಿಟಿಂಗ್ ಇರಲಿದೆ. ಜೊತೆಗೆ ರವಿವರ್ಮ ಈ ಸಿನಿಮಾಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











