"ಸುಂಟರಗಾಳಿ' ಎದುರು 'ಮೈ ಆಟೋಗ್ರಾಫ್' ಸಿನಿಮಾ ರಿಲೀಸ್ ಮಾಡುವಂತೆ ಸುದೀಪ್ ಹಠ ಹಿಡಿದಿದ್ರು"
ಸ್ಯಾಂಡಲ್‌ವುಡ್‌ನಲ್ಲಿ ಕಳೆದೊಂದು ವಾರದಿಂದ ನಟ ಸುದೀಪ್ ವರ್ಸಸ್ ನಿರ್ಮಾಪಕ ಎಂ.ಎನ್ ಕುಮಾರ್ ಫೈಟ್ ತಾರಕ್ಕಕ್ಕೇರಿದೆ. ಆರೋಪ ಪ್ರತ್ಯಾರೋಪ ಮುಂದುವರೆದಿದೆ. 9 ಕೋಟಿ ರೂ. ಅಡ್ವಾನ್ಸ್ ಪಡೆದು ಸುದೀಪ್ 8 ವರ್ಷಗಳಿಂದ ಕಾಲ್‌ಶೀಟ್ ಕೊಡುತ್ತಿಲ್ಲ ಎಂದು ನಿರ್ಮಾಪಕ ಎಂ.ಎನ್ ಕುಮಾರ್ ಆರೋಪಿಸಿದ್ದಾರೆ. ಇದಕ್ಕೆ ಕಿಚ್ಚ ತಿರುಗೇಟು ನೀಡಿದ್ದಾರೆ. ಇನ್ನು ಸುದೀಪ್ ಪರ ಜಾಕ್ ಮಂಜು ಮಾತನಾಡುತ್ತಿದ್ದಾರೆ.
ಎಂ.ಎನ್ ಕುಮಾರ್ ಫಿಲ್ಮ್ ಚೇಂಬರ್‌ನಲ್ಲಿ ಸುದೀಪ್ ವಿರುದ್ಧ ಆರೋಪ ಮಾಡಿದ್ದರು. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಸುದೀಪ್ ತಮ್ಮ ವಕೀಲರ ಮೂಲಕ ಎಂ.ಎನ್ ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. "ನನ್ನ ಮೇಲೆ ಕುಮಾರ್ ಸುಳ್ಳು ಆರೋಪ ಮಾಡಿ ತೇಜೋವಧೆ ಮಾಡಿದ್ದಾರೆ. ಆ ಆರೋಪಗಳನ್ನು ಸಾಬೀತುಪಡಿಸಲಿ. ಮಾಧ್ಯಮದ ಮುಂದೆ ಕ್ಷಮೆ ಕೇಳಬೇಕು ಇಲ್ಲವಾದರೆ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹಣ ಸಲ್ಲಿಸಲಿ" ಎಂದಿದ್ದಾರೆ.

ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಎನ್ ಕುಮಾರ್ ತಿರುಗೇಟು ನೀಡಿದ್ದರು. ಈ ವೇಳೆ ತಮ್ಮ ಹಾಗೂ ಸುದೀಪ್ ಅವರ ಸಿನಿಮಾ ವ್ಯವಹಾರಗಳ ಬಗ್ಗೆ ಮಾತನಾಡಿದ್ದಾರೆ. ಕನ್ನಡದಲ್ಲಿ ಕೆಲ ಸಿನಿಮಾಗಳನ್ನು ಎಂ.ಎನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ವಿತರಕರಾಗಿ ಹಲವು ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ. ಇನ್ನು ಸುದೀಪ್ ನಟನೆಯ ಸಿನಿಮಾಗಳನ್ನು ನಿರ್ಮಿಸುವುದರ ಜೊತೆಗೆ ವಿತರಣೆ ಸಹ ಮಾಡಿದ್ದಾರೆ.

ಸುದೀಪ್ ಚಿತ್ರಗಳನ್ನು ವಿತರಣೆ ಮಾಡಿದ್ದೇನೆ
ತಮ್ಮ ಸಿನಿಮಾಗಳು ಯಾವಾಗ ರಿಲೀಸ್ ಆಗಬೇಕು ಎಂದು ಸುದೀಪ್ ಅವರೇ ನಿರ್ಧರಿಸುತ್ತಿದ್ದರು. ಬೇರೆ ಸಿನಿಮಾಗಳ ಎದುರು ಸಿನಿಮಾಗಳನ್ನು ರಿಲೀಸ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಎಂ.ಎನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. "ಸುದೀಪ್ ಅವರ ಹಲವು ಸಿನಿಮಾಗಳನ್ನು ನಾನು ವಿತರಣೆ ಮಾಡಿದ್ದೇನೆ. 'ಸ್ವಾತಿಮತ್ತು', 'ಶಾಂತಿ ನಿವಾಸ', 'ಮೈ ಆಟೋಗ್ರಾಫ್' ಅಷ್ಟೇ ಅಲ್ಲ ಅವರ ಆಪ್ತರ ಎರಡು ಸಿನಿಮಾಗಳನ್ನು ನಾನು ತೆರೆಗೆ ತಂದಿದ್ದೇನೆ."
'ಸುಂಟರಗಾಳಿ' ಎದುರು 'ಆಟೋಗ್ರಾಫ್'
"ಆಟೋಗ್ರಾಫ್ ಸಿನಿಮಾ ಇಂತಹ ದಿನವೇ ಬರಬೇಕು ಎಂದು ಹಠ ಮಾಡಿದರು. ಇನ್ನೊಂದು ಸಿನಿಮಾ ರಿಲೀಸ್ ಆಗ್ತಿತ್ತು. ಆದರೂ ಅದೇ ದಿನ ರಿಲೀಸ್ ಮಾಡಬೇಕು ಎಂದು ಹಠ ಹಿಡಿದರು. ಯಾವ ಸಿನಿಮಾ ಎಂದು ನೀವೇ ಚೆಕ್ ಮಾಡಿ ನೋಡಿ" ಎಂದಿದ್ದಾರೆ. ಕುಮಾರ್ ಹೇಳಿರುವ ಆ ಸಿನಿಮಾ ದರ್ಶನ್ ನಟನೆಯ 'ಸುಂಟರಗಾಳಿ'. 2006 ಫೆಬ್ರವರಿ 17ರಂದು 2 ಸಿನಿಮಾಗಳು ರಿಲೀಸ್ ಆಗಿದ್ದವು. 'ಆಟೋಗ್ರಾಫ್' ಸಿನಿಮಾ ಸೂಪರ್ ಹಿಟ್ ಆಗಿತ್ತು. 'ಸುಂಟರಗಾಳಿ' ಪರವಾಗಿಲ್ಲ ಎನಿಸಿಕೊಂಡಿತ್ತು.
'ಸಂತು'ಗೆ 'ಮುರಾರಿ' ಸವಾಲ್
ಮಾತು ಮುಂದುವರೆಸಿರುವ ಎಂ.ಎನ್ ಕುಮಾರ್ 'ಮುಕುಂದ ಮುರಾರಿ' ಆ ಡೇಟ್‌ಗೆ ರಿಲೀಸ್ ಮಾಡಿಸಿದ್ದು ಸುದೀಪ್ ಅವರು ನಾನಲ್ಲ" ಎಂದಿದ್ದಾರೆ. 'ಮುಕುಂದ ಮುರಾರಿ' ರಿಲೀಸ್ ಆಗಿದ್ದ ಅದೇ ದಿನ ಯಶ್ ನಟನೆಯ 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾ ರಿಲೀಸ್ ಆಗಿತ್ತು. ಕಾರಣಾಂತರಗಳಿಂದ 'ಸಂತು ಸ್ಟ್ರೈಟ್ ಫಾರ್ವಡ್' ಸಿನಿಮಾ ಕೂಡ ಸೋಲುಂಡಿತ್ತು. ಇದೀಗ 2 ಬಾರಿ ಈ ರೀತಿ ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಸುದೀಪ್ ಕಾರಣ ಎನ್ನುವಂತೆ ಎಂ.ಎನ್ ಕುಮಾರ್ ಮಾತನಾಡಿದ್ದಾರೆ. ಈ ವಿಡಿಯೋವನ್ನು ಯಶ್ ಹಾಗೂ ದರ್ಶನ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಜಾಕ್ ಮಂಜು ತಿರುಗೇಟು
ಸುದೀಪ್ ಪರವಾಗಿ ಅವರ ಆಪ್ತರಾದ ಜಾಕ್ ಮಂಜು ಸುದ್ದಿಗೋಷ್ಠಿ ನಡೆಸಿ ಎಲ್ಲಾ ಎಂ.ಎನ್ ಕುಮಾರ್ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ. "ಸುದೀಪ್ ಅವರಿಗೆ ಸಿನಿಮಾ ಮಾಡುವ ವಿಚಾರವಾಗಿ ಯಾವುದೇ ಸಂಭಾವನೆಯನ್ನು ಅಡ್ವಾನ್ಸ್ ರೂಪದಲ್ಲಿ ಎಂ.ಎನ್ ಕುಮಾರ್ ನೀಡಿಲ್ಲ ಕೊಟ್ಟಿಲ್ಲ" ಎಂದು ಜಾಕ್ ಮಂಜು ಹೇಳಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುದೀಪ್ ಆಪ್ತ ಕಳೆದ ಏಳೆಂಟು ವರ್ಷಗಳಿಂದ ಸುದೀಪ್ ಹಾಗೂ ಎಂ.ಎನ್ ಕುಮಾರ್ ನಡುವೆ ಏನೆಲ್ಲಾ ಮಾತುಕತೆ ಆಯಿತು ಎಂದು ವಿವರಿಸಿದ್ದಾರೆ.


Click it and Unblock the Notifications











