ಪುನೀತ್ ಅಂತಿಮ ದರ್ಶನ ಪಡೆದ ಜನರೆಷ್ಟು? ನಿಯೋಜಿತ ಪೊಲೀಸ್ ಸಿಬ್ಬಂದಿ ಎಷ್ಟು?
ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ಇಂದು ಬೆಳಿಗ್ಗೆಯಷ್ಟೆ ಮುಗಿದಿದೆ. ಕಳೆದ ಮೂರು ದಿನಗಳಿಂದಲೂ ಪುನೀತ್ ಜೊತೆಗೇ ಇದ್ದ ಕುಟುಂಬದವರು, ಸರ್ಕಾರ, ಪೊಲೀಸರು ಇಂದು ಅಪ್ಪು ಮಣ್ಣಾದ ಮೇಲೆ, 'ಅಂತೂ ಶಾಂತಿಯಿಂದ ಅಪ್ಪುವನ್ನು ಕಳಿಸಿಕೊಟ್ಟೆವಲ್ಲ' ಎಂದು ಸಣ್ಣ ನಿಟ್ಟುಸಿರೊಂದನ್ನು ಬಿಟ್ಟಿದ್ದಾರೆ.
Recommended Video

ಸತತ ಮೂರು ದಿನಗಳಿಂದಲೂ ಪುನೀತ್ ಅಂತಿಮ ದರ್ಶನ ಪಡೆಯಲು ರಾಜ್ಯದ ಮೂಲೆ-ಮೂಲೆಗಳಿಂದ ಮಾತ್ರವಲ್ಲ ಬೇರೆ ರಾಜ್ಯಗಳಿಂದಲೂ ಅಭಿಮಾನಿಗಳು ಬಂದಿದ್ದರು. ವಿದೇಶದಿಂದಲೂ ಕೆಲವು ಪುನೀತ್ ಆಪ್ತರು ಆಗಮಿಸಿ ಅಂತಿಮ ದರ್ಶನ ಪಡೆದರು.
ಜನ ಸಂದಣಿ ಅದ್ಯಾವ ಮಟ್ಟಿಗಿತ್ತೆಂದರೆ ಸರ್ಕಾರವು ಅಭಿಮಾನಿಗಳ ದಿಕ್ಕು ತಪ್ಪಿಸಿ ತಪ್ಪು ಸಮಯ ಪ್ರಕಟಿಸಿ ನಿಗದಿತ ಅವಧಿಗಿಂತಲೂ ಬೇಗನೆ ಅಪ್ಪುವಿನ ಅಂತ್ಯಕ್ರಿಯೆ ಮಾಡಬೇಕಾಯಿತು. ಆದರೆ ಎಲ್ಲವೂ ಬಹುತೇಕ ಶಾಂತಿಯಿಂದ ಮುಗಿದಿದ್ದು, ಪೊಲೀಸ್ ಇಲಾಖೆಯಂತೂ ದೊಡ್ಡ ನಿಟ್ಟುಸಿರನ್ನೇ ಬಿಟ್ಟಿದೆ.
ಪುನೀತ್ ಅಂತ್ಯಕ್ರಿಯೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ''ಸುಮಾರು 25 ಲಕ್ಕೂ ಹೆಚ್ಚು ಜನ ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ'' ಎಂದು ಹೇಳಿದ್ದಾರೆ.

25 ಲಕ್ಷಕ್ಕೂ ಹೆಚ್ಚು ಜನರಿಂದ ದರ್ಶನ
''ಇಂಥಹಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸರು ನಿರ್ವಹಿಸಿರುವ ಕರ್ತವ್ಯದ ಬಗ್ಗೆ ಹಲವರು ನನಗೆ ದೂರವಾಣಿ ಕರೆ ಮಾಡಿ ಅಭಿನಂದನೆ ಹೇಳುತ್ತಿದ್ದಾರೆ. ಸುಮಾರು 25 ಲಕ್ಷಕ್ಕಿಂತಲೂ ಹೆಚ್ಚು ಜನ ಎರಡು ಹಗಲು, ಎರಡು ರಾತ್ರಿ ಸತತವಾಗಿ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲವೂ ವ್ಯವಸ್ಥಿತವಾಗಿ ನಡೆದಿದೆ. ಇದರ ಹಿಂದೆ ಪೊಲೀಸರ ಶ್ರಮ ದೊಡ್ಡದು'' ಎಂದರು ಆರಗ ಜ್ಞಾನೇಂದ್ರ.

ಸಾವಿರಾರು ಮಂದಿ ಪೊಲೀಸರ ನಿಯೋಜನೆ
''ಸಾಮಾನ್ಯ ಕಾನ್‌ಸ್ಟೇಬಲ್, ಹೋಮ್‌ಗಾರ್ಡ್‌ನಿಂದ ಹಿಡಿದು ಆಫೀಸರ್ ವರೆಗೆ ಎಲ್ಲರೂ ಶ್ರಮ ಪಟ್ಟಿದ್ದಾರೆ. ಸುಮಾರು 20,000 ಬೆಂಗಳೂರಿನ ಪೊಲೀಸ್ ಸಿಬ್ಬಂದಿ, 1500 ಕ್ಕಿಂತಲೂ ಹೆಚ್ಚು ಜನ ಬೇರೆ ಜಿಲ್ಲೆಗಳಿಂದ ಆಗಮಿಸಿದ ಪೊಲೀಸರು. ಎರಡು ಕಂಪೆನಿ ಸೆಂಟ್ರಲ್ ಫೋರ್ಸ್, 50 ಪ್ಲಾಟೂನ್, ಕೆಎಸ್‌ಆರ್‌ಪಿ ಇವರೆಲ್ಲರೂ ಸೇರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ'' ಎಂದರು ಗೃಹ ಸಚಿವರು.

ನಿದ್ರೆ, ನೀರಡಿಕೆ ಬಿಟ್ಟು ಶ್ರಮಪಟ್ಟಿದ್ದಾರೆ: ಗೃಹ ಸಚಿವ
''ನಮ್ಮ ಪೊಲೀಸ್ ಬಳಕ ಹಗಲು ರಾತ್ರಿ, ನಿದ್ರೆ ನೀರಡಿಕೆ ಬಿಟ್ಟು ನಗರದ ಶಾಂತಿ, ಸುವ್ಯವಸ್ಥೆ ಕಾಪಾಡಿದ್ದಾರೆ ಅವರೆಲ್ಲರಿಗೂ ಕೂಡ ನಾನು ಅಭಿನಂದನೆಗಳನ್ನು ಹೇಳುತ್ತೇನೆ. ನಮ್ಮ ಸಿಎಂ ಸಹ ನಮ್ಮ ಜೊತೆಗೆ ಇದ್ದರು. ಇಲಾಖೆಯ ಹಿರಿಯ ಅಧಿಕಾರಿಗಳು ಸಹ ಸ್ಥಳದಲ್ಲಿಯೇ ಬೀಡು ಬಿಟ್ಟು ಕೆಲಸ ಮಾಡಿದರು. ಅವರೆಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ನಮ್ಮ ಸಾರ್ವಜನಿಕರು, ಪುನೀತ್ ಅವರ ಅಭಿಮಾನಿಗಳು ಭಾವುಕರಾಗಿದ್ದರು, ದುಃಖತಪ್ತರಾಗಿದ್ದರು ಆದರೆ ಎಲ್ಲೂ ಕೂಡ ಎಚ್ಚರ ತಪ್ಪದೆ ಶಾಂತಿ ಸುವ್ಯವಸ್ಥೆ ತಪ್ಪದೆ ಸರ್ಕಾರದೊಂದಿಗೆ ಸಹಕಾರ ನೀಡಿದ್ದಾರೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಮತ್ತು ರಾಜ್‌ಕುಮಾರ್ ಕುಟುಂಬಸ್ಥರು ಸಹ ಸರ್ಕಾರದೊಟ್ಟಿಗೆ ಬಹಳ ದೊಡ್ಡ ಸಹಕಾರವನ್ನು ನೀಡಿದ್ದಾರೆ. ಜೊತೆಗೆ ಮಾಧ್ಯಮದವರೂ ಸಹ ಹಗಲು ರಾತ್ರಿಯೆನ್ನದೆ ಕೆಲಸ ಮಾಡಿದ್ದೀರಿ, ಎಲ್ಲರಿಗೂ ಧನ್ಯವಾದ'' ಎಂದರು ಗೃಹ ಸಚಿವ.

ಧನ್ಯವಾದ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ಸಹ ಮಾತನಾಡಿದ್ದು, ''ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಬಿಬಿಎಂಪಿ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡಿ ಯಾರಿಗೂ ಏನೂ ಸಮಸ್ಯೆ ಆಗದಂತೆ ಸುವ್ಯವಸ್ಥಿತವಾಗಿ ನಡೆಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ರಾಜ್‌ಕುಮಾರ್ ಕುಟುಂಬದ ಸದಸ್ಯರು ಸಹ ಬಹಳಷ್ಟು ಸಹಕಾರ ಕೊಟ್ಟಿದ್ದಾರೆ. ಅಂತಿಮ ದರ್ಶನದಿಂದ ಹಿಡಿದು ಅಂತಿಮ ಕಾರ್ಯದ ವರೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ. ರಾಜ್ ಕುಟುಂಬದವರಿಗೆ ಹೃದಯಪೂರ್ವಕ ಧನ್ಯವಾದ'' ಎಂದಿದ್ದಾರೆ ಸಿಎಂ.

ದೊಡ್ಮನೆಯವರ ದೊಡ್ಡ ಗುಣ ತೋರಿಸುತ್ತದೆ: ಸಿಎಂ
''ಕನ್ನಡ ನಾಡಿನ ಜನತೆ, ಪುನೀತ್ ಅಭಿಮಾನಿಗಳು ಬಹಳಷ್ಟು ಶಾಂತಿಯಿಂದ ಅವರು ನಡೆದುಕೊಂಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಟ ಶಿವರಾಜ್ ಕುಮಾರ್ ಮಾತನಾಡುತ್ತಾ, ನಮ್ಮ ಸರ್ಕಾರಕ್ಕೆ, ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿರುವುದು ಗಮನಿಸಿದ್ದೇನೆ. ಇಂಥಹಾ ಘಟನೆಗಳು ನಡೆದಾಗ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರಗಳ ಕರ್ತವ್ಯ, ಹಾಗಿದ್ದರೂ ಅವರು ನಮಗೆ ಧನ್ಯವಾದ ಹೇಳಿರುವುದು ದೊಡ್ಮನೆಯವರ ದೊಡ್ಡ ಗುಣ ತೋರಿಸುತ್ತದೆ'' ಎಂದಿದ್ದಾರೆ ಬೊಮ್ಮಾಯಿ.


Click it and Unblock the Notifications











