ಈ ಐದು ಬಯೋಪಿಕ್ ಚಿತ್ರಗಳು ಮುಂದಿನ ವರ್ಷ ಧೂಳೆಬ್ಬಿಸಲಿವೆ.!
ಸಿನಿಮಾ ಇಂಡಸ್ಟ್ರಿಯಲ್ಲಿ ಬಯೋಪಿಕ್ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚಿಗಷ್ಟೆ ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನ ಕುರಿತು ರಣ್ಬೀರ್ ಕಪೂರ್ 'ಸಂಜು' ಎಂಬ ಸಿನಿಮಾ ಮಾಡಿದ್ರು. ರಾಜ್ ಕುಮಾರ್ ಹಿರಾನಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಬರೆಯಿತು.
ಅದಕ್ಕು ಮುಂಚೆ ತಮಿಳು ಹಾಗೂ ತೆಲುಗಿನಲ್ಲಿ 'ಮಹಾನಟಿ' ಸಿನಿಮಾ ಬಂತು. ಇದು ಲೆಜೆಂಡ್ ನಟಿ ಸಾವಿತ್ರಿಯ ಬಯೋಪಿಕ್ ಆಗಿತ್ತು. ಕೀರ್ತಿ ಸುರೇಶ್ ಈ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಬಯೋಪಿಕ್ ಚಿತ್ರಗಳು ಸೂಪರ್ ಹಿಟ್ ಆದ ನಂತರ ಮತ್ತಷ್ಟು ದೊಡ್ಡ ಬಯೋಪಿಕ್ ಸಿನಿಮಾಗಳು ಸಿದ್ಧವಾಗುತ್ತಿದೆ.
ಅದರಲ್ಲೂ ಈ ಐದು ಬಯೋಪಿಕ್ ಸಿನಿಮಾಗಳಂತೂ ಭಾರತದ ಸಿನಿಪ್ರೇಕ್ಷಕರಿಗೆ ಬಹುದೊಡ್ಡ ಮನರಂಜನೆಯಾಗಲಿದೆ. ಅಷ್ಟಕ್ಕೂ, ಬೆಳ್ಳಿತೆರೆಯಲ್ಲಿ ಮೂಡಿಬರಲಿರುವ ನಿರೀಕ್ಷೆಯ ಬಯೋಪಿಕ್ ಚಿತ್ರಗಳು ಯಾವುದು.? ಮುಂದೆ ಓದಿ..

ಎನ್.ಟಿ.ಆರ್ ಬಯೋಪಿಕ್
ಸೌತ್ ಸಿನಿಲೋಕದ ಬಹುದೊಡ್ಡ ಬಯೋಪಿಕ್ ಚಿತ್ರ 'ಎನ್.ಟಿ.ಆರ್'. ದಿವಂಗತ ನಟ ಎನ್.ಟಿ ರಾಮರಾವ್ ಅವರ ಜೀವನ ಆಧಾರಿತ ಕಥೆ ಇದಾಗಿದ್ದು, ಅವರ ಮಗ ಬಾಲಕೃಷ್ಣ ಈ ಚಿತ್ರದಲ್ಲಿ ಎನ್.ಟಿ.ಆರ್ ಆಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

ಶಕೀಲಾ ಬಯೋಪಿಕ್
ಭಾರತ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಶಕೀಲಾ ಅವರ ಜೀವನ ಕಥೆ ತೆರೆಮೇಲೆ ಬರ್ತಿದೆ. ಒಂದು ಕಾಲದಲ್ಲಿ ನೀಲಿ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದ ಶಕೀಲಾ ಕುರಿತ ಚಿತ್ರವನ್ನ ಕನ್ನಡ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ರಿಚಾ ಚಡ್ಡಾ ಸ್ಕ್ರೀನ್ ಮೇಲೆ ಶಕೀಲಾ ಪಾತ್ರವನ್ನ ನಿರ್ವಹಿಸುತ್ತಿದ್ದು, ಇದು ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ.

ಕಪಿಲ್ ದೇವ್ ಬಯೋಪಿಕ್
ಬಾಲಿವುಡ್ ನಟ ರಣ್ವೀರ್ ಸಿಂಗ್ ನಟನೆಯಲ್ಲಿ ಬಯೋಪಿಕ್ ಚಿತ್ರವೊಂದು ತಯಾರಾಗುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಪಾತ್ರದ ಮೂಲಕ 1983ರ ವಿಶ್ವಕಪ್ ಸನ್ನಿವೇಶದ ಸುತ್ತಾ ಬಯೋಪಿಕ್ ಮಾಡಲಾಗುತ್ತಿದೆ. 2019ರ ಏಪ್ರಿಲ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆ.

ಸಂಜಯ್ ದತ್ ಬಯೋಪಿಕ್
ರಾಜ್ ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದ 'ಸಂಜು' ಸಿನಿಮಾ ನೋಡಿ ಬೇಸರಗೊಂಡಿದ್ದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, 'ಸಂಜು ದಿ ರಿಯಲ್ ಸ್ಟೋರಿ' ಎಂದು ಸಂಜಯ್ ದತ್ ಕುರಿತು ಇನ್ನೊಂದು ಬಯೋಪಿಕ್ ಮಾಡುವುದಾಗಿ ಘೋಷಿಸಿಕೊಂಡಿದ್ದಾರೆ. ಇದು ಕೂಡ ಸಿನಿಲೋಕದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ.

ಜಯಲಲಿತಾ ಬಯೋಪಿಕ್
ಹೈದ್ರಾಬಾದ್ ಮೂಲಕ ಖ್ಯಾತ ನಿರ್ಮಾಣ ಸಂಸ್ಥೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕುರಿತು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಜಯಲಲಿತಾ ಅವರ ಹುಟ್ಟುಹಬ್ಬದಂದು ಸಿನಿಮಾ ಶುರುವಾಗಲಿದೆ. ಯಾರು ಈ ಚಿತ್ರದ ನಾಯಕಿಯಾಗಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.


Click it and Unblock the Notifications











