ವಿಡಿಯೋ : ನರೇಂದ್ರ ಮೋದಿಯಾಗಿ ಎಂಟ್ರಿ ಕೊಟ್ಟ ವಿವೇಕ್ ಓಬೆರಾಯ್
ಭಾರಿ ಕುತೂಹಲ ಮೂಡಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನಾಧಾರಿತ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. 'ಪಿ ಎಂ ನರೇಂದ್ರ ಮೋದಿ, ಬೇಸ್ಡ್ ಆನ್ ಟ್ರು ಸ್ಟೋರಿ' ಸಿನಿಮಾದ ಟ್ರೈಲರ್ ಈಗ ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಪ್ರಧಾನಿ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿವೇಕ್ ಓಬೆರಾಯ್ ಪ್ರೇಕ್ಷಕರ ಮನಸೆಳೆದಿದ್ದಾರೆ. ವಿವೇಕ್ ಇಲ್ಲಿ ತರಹೇವಾರಿ ಗೆಟಪ್ ನಲ್ಲಿ ಮಿಂಚಿದ್ದಾರೆ. ಚಾಯ್ ವಾಲ ಆಗಿದ್ದಾಗಿನಿಂದ ಪ್ರಧಾನಿ ಆಗುವವರೆಗೂ ನರೇಂದ್ರ ಮೋದಿ ಅವರ ಜೀವನವನ್ನು ಸೆರೆಹಿಡಿಯಲಾಗಿದೆ. ಆ ಎಲ್ಲಾ ಗೆಟಪ್ ನಲ್ಲೂ ಕಾಣಿಸಿಕೊಳ್ಳುವ ಮೂಲಕ ಪಾತ್ರಕ್ಕೆ ಜೇವ ತುಂಬಿದ್ದಾರೆ.
ಅಂದ್ಹಾಗೆ, ಖ್ಯಾತ ನಿರ್ದೇಶಕ ಓಮಂಗ್ ಕುಮಾರ್ ಮೋದಿ ಅವರ ಸಂಪೂರ್ಣ ಜೀವನವನ್ನು ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ. ಬಯೋಪಿಕ್ ಚಿತ್ರಗಳ ಸರದಾರ ಅಂತಾನೆ ಕರೆಸಿಕೊಳ್ಳುವ ಓಮಂಗ್ ಮೋದಿ ಅವರ ಜೀವನ ಚಿತ್ರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

ದೇಶದ ಬಗ್ಗೆ ಅಪಾರ ಭಕ್ತಿ ಇರುವ ಟೀ ಮಾರುವ ಹುಡುಗನೊಬ್ಬ ದೇಶದ ಪ್ರಧಾನಿ ಆಗುವ ಕನಸು ಕಂಡು ಆ ಕನಸನ್ನು ಬೆನ್ನತ್ತುವ ಕತೆ ರೋಚಕವಾಗಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಮೋದಿ ಭಕ್ತರನ್ನು ಅಚ್ಚರಿಗೊಳಿಸಿದೆ.
ಚಿತ್ರದಲ್ಲಿ ಮೋದಿ ತಂದೆ, ತಾಯಿ ಮತ್ತು ಪತ್ನಿಯ ಪಾತ್ರಗಳು ಸಹ ಗಮನ ಸೆಳೆಯುತ್ತಿವೆ. ಜೊತೆಗೆ ಅಮಿತ್ ಷಾ ಪಾತ್ರ ಕೂಡ ಚಿತ್ರದಲ್ಲಿದೆ. 2 ನಿಮಿಷದ 30 ಸೆಕೆಂಡ್ ನ ಈ ಟ್ರೈಲರ್ ನೋಡಿಯೇ ಮೋದಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಇನ್ನು ಸಿನಿಮಾ ನೋಡಿ ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರಲಿದೆ ಎನ್ನವುದು ಸದ್ಯದ ಕುತೂಹಲ. ಮುಂದಿನ ತಿಂಗಳು ಏಪ್ರಿಲ್ 5 ರಂದು 'ಪಿ ಎಂ ನರೇಂದ್ರ ಮೋದಿ' ಚಿತ್ರ ತೆರೆಗೆ ಬರಲಿದೆ.


Click it and Unblock the Notifications











