ಏನಿದು 'ಮೂವೀ ಮಾಫಿಯಾ'..? ಇವರೆಲ್ಲ ಯಾರು? ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಯಾಗುತ್ತಾ?
ಈಗ ಸಿನಿಮಾ ಮಾಡೋದು ಅಷ್ಟು ಸುಲಭ ಅಲ್ಲ ಅನ್ನೋದು ಗೊತ್ತಿದೆ. ಅದೆಷ್ಟೋ ಮಂದಿಗೆ ಸಿನಿಮಾ ಮಾಡ್ಬೇಕು. ಒಂದೊಳ್ಳೆ ನಿರ್ದೇಶಕನಾಗ್ಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ, ಇವರ ಮೇಲೆ ಹೂಡಿಕೆ ಮಾಡೋರು ಯಾರು? ಈಗಂತೂ ನಿರ್ಮಾಪಕರು ಹೊಸಬರ ಮೇಲೆ ಅಷ್ಟು ಸುಲಭಕ್ಕೆ ಹಣ ಹೂಡಿಕೆ ಮಾಡೋದಿಲ್ಲ. ಮತ್ತದೇ ಸ್ಕ್ರಿಪ್ಟ್ ಹಿಡ್ಕೊಂಡು ನಿರ್ಮಾಪಕರ ಕಚೇರಿ ಸುತ್ತಬೇಕು. ಅಲ್ಲಿಗೆ ಸಿನಿಮಾ ಮಾಡಬೇಕು ಅನ್ನೋ ಅರ್ಧ ಹುಮ್ಮಸ್ಸು ಹೊರಟೇ ಹೋಗಿರುತ್ತೆ.
ಅದೇ ಇನ್ನೊಂದು ಕಡೆ ಸಾಮಾನ್ಯ ಜನರಿಗೆ ಒಂದು ಸಿನಿಮಾ ನಿರ್ಮಾಣ ಮಾಡ್ಬೇಕು ಅನ್ನೋ ಆಸೆ ಇರುತ್ತೆ. ಆದರೆ, ಒಂದು ಸಿನಿಮಾ ಮಾಡೋಕೆ ಕೋಟಿಗಟ್ಟಲೆ ಹಣ ಬೇಕು. ಅದನ್ನು ಎಲ್ಲಿಂದ ತರೋದು? ಕೋಟಿ ಇದ್ದರೂ, ಸಿನಿಮಾ ಮಾಡೋದು ಹೇಗೆ? ರಿಲೀಸ್ ಮಾಡೋದು ಹೇಗೆ? ಇವೆಲ್ಲವೂ ದೊಡ್ಡ ತಲೆ ನೋವು.
ಈ ಎರಡೂ ಸನ್ನಿವೇಶಗಳನ್ನು ಒಂದು ಸಂಸ್ಥೆ ನಿಭಾಯಿಸುವುದಕ್ಕೆ ಮುಂದಾಗಿದೆ. ನಿರ್ದೇಶಕರ ಕಥೆ ಚೆನ್ನಾಗಿದ್ದರೆ ಇಲ್ಲಿ ಸಿನಿಮಾ ಆಗುತ್ತೆ. ಕಥೆ ಚೆನ್ನಾಗಿದ್ದರೆ ಸಾಮಾನ್ಯ ಜನರೂ ಹಣ ಹಾಕಬಹುದು. ಅಂತಹದ್ದೊಂದು ವೇದಿಕೆನೇ 'ಮೂವೀ ಮಾಫಿಯಾ'. ಇನ್ನೂ ಅರ್ಥ ಆಗಿಲ್ಲ ಅಂದ್ರೆ, ವಿವರವಾಗಿ ಹೇಳ್ತೀವಿ ಮುಂದೆ ಓದಿ.

ಏನಿದು 'ಮೂವಿ ಮಾಫಿಯಾ'? ಯಾರಿವರು?
ಮೂವಿ ಮಾಫಿಯಾ ಅನ್ನೋದು ಒಂದು ವಿನೂತನ ಪ್ರಯೋಗ. ಸಿನಿಮಾರಂಗ ವ್ಯವಸ್ಥಿತವಾಗಿ ಕೆಲಸ ಮಾಡಲ್ಲ. ವ್ಯವಹಾರಗಳಲ್ಲಿ ಪಾರದರ್ಶಕತೆ ಇರೋದಿಲ್ಲ. ಬಾಯಿ ಮಾತಲ್ಲಿ ವ್ಯವಹಾರ ನಡೆಯುತ್ತೆ. ಕೊನೆಗೆ ವಿವಾದದಲ್ಲಿ ಕೊನೆಯಾಗುತ್ತೆ. ನಿರ್ಮಾಪಕರು ನಷ್ಟ ಆಯ್ತು ಅಂತ ಕಣ್ಣೀರು ಹಾಕ್ತಾರೆ. ಇಂತಹ ಅವ್ಯವಸ್ಥಿತ ಸಿನಿಮಾ ಮೇಕಿಂಗ್‌ಗೆ ಹೊಸ ರೂಪ ಕೊಡುವುದಕ್ಕೆ ಶ್ರೀ ಹರ್ಷ ಹಾದಿಗಲ್ಲು ಮುಂದಾಗಿದ್ದಾರೆ. ಸಿನಿಮಾ ನಿರ್ಮಾಣ ಮಾಡಲು ಹೊಸ ಕಲ್ಪನೆಯನ್ನು ಹೊತ್ತು ಬಂದಿದ್ದಾರೆ.
ಶ್ರೀಹರ್ಷ ಹಾದಿಗಲ್ಲು ಸಿನಿಮಾ ಆಸಕ್ತರಿಗಾಗಿ ಹೊಸ ವೇದಿಕೆಯನ್ನು ನಿರ್ಮಾಣ ಮಾಡಿದ್ದಾರೆ. ಅದುವೇ ಮೂವಿ ಮಾಫಿಯಾ. ಈ ವೇದಿಕೆ ಮೂಲಕ ಸಾಮಾನ್ಯ ಜನರು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಬಹುದು. ಒಂದಲ್ಲ ಹಲವು ಪ್ರಾಜೆಕ್ಟ್‌ಗಳಿಗೆ ನಿಗದಿ ಪಡಿಸಿದ ಕನಿಷ್ಠ ಹಣದಿಂದ ಗರಿಷ್ಠ ಹಣದವರೆಗೂ ಹೂಡಿಕೆ ಮಾಡಬಹುದು. ಅಷ್ಟೇ ಅಲ್ಲ. ಆ ಸಿನಿಮಾಗೆ ನೀವು ಹೂಡಿಕೆ ಮಾಡಿದಷ್ಟು ಲೆಕ್ಕದಲ್ಲಿ ಓನರ್‌ಗಳಾಗಬಹುದು. ಸಿನಿಮಾಗೆ ಬಂದ ಲಾಭದ ಆಧಾರದ ಮೇಲೆ ಶೇ. ಇಂತಿಷ್ಟು ಅಂತ ನಿಮಗೆ ಖಾತೆಗೆ ಹಣ ಬರುತ್ತೆ ಅಂತಾರೆ ಮೂವಿ ಮಾಫಿಯಾದ ಸಿಇಓ ಶ್ರೀ ಹರ್ಷ.

ಫಿಲ್ಮ್‌ಮೇಕರ್‌ಗಳಿಗೆ ಹೇಗೆ ಲಾಭ?
ಈ ವೇದಿಕೆ ನಿರ್ಮಾಪಕರಿಗೂ ಹಾಗೂ ನಿರ್ದೇಶಕರಿಗೂ ಅನುಕೂಲ. ನಿರ್ಮಾಪಕರು ಕೋಟಿ ಕೋಟಿ ಹಣ ಹಾಕಬಹುದು. ಆದರೆ, ನಿರ್ಮಾಣ ಹಾಗೂ ಬಿಡುಗಡೆ ವೇಳೆ ನೀರಿನಂತೆ ಹರಿದು ಹೋಗುತ್ತೆ. ಅದರಲ್ಲೂ ಪ್ರಮೋಷನ್, ರೈಟ್ಸ್, ವಿತರಣೆ ವಿಚಾರದಲ್ಲಿ ನಿರ್ಮಾಪಕರು ನಷ್ಟ ಅನುಭವಿಸುತ್ತಾರೆ. ಅದನ್ನೆಲ್ಲ ಮೂವಿ ಮಾಫಿಯಾ ನೋಡಿಕೊಳ್ಳುತ್ತೆ. ಹೀಗಾಗಿ ನಿರ್ಮಾಪಕರು ನಿಶ್ಚಿಂತೆಯಿಂದ ಸಿನಿಮಾ ಮಾಡಬಹುದು.
ಇನ್ನೊಂದು ಕಡೆ ನಿರ್ದೇಶಕರು ಸ್ಕ್ರಿಪ್ಟ್ ಇಟ್ಟುಕೊಂಡು ಊರೆಲ್ಲ ಸುತ್ತಬೇಕಿಲ್ಲ. ಮೂವಿ ಮಾಫಿಯಾ ವೇದಿಕೆಯಲ್ಲಿ ಕಥೆಯ ಎಳೆಯನ್ನು ಅಪ್ಲೋಡ್ ಮಾಡಿದರೆ, ಅದನ್ನು ಓದಿ ಜನರು ಹಣ ಹೂಡಿಕೆ ಮಾಡುತ್ತಾರೆ. ಸಿನಿಮಾ ಬೇಕಿರೋ ಬಜೆಟ್ ಆ ಪ್ರಾಜೆಕ್ಟ್‌ಗೆ ಬರುತ್ತಿದ್ದಂತೆ ಸಿನಿಮಾ ಟೇಕ್ ಆಫ್ ಆಗುತ್ತೆ. ಹೀಗಾಗಿ ಜನರಿಗೂ ಕಥೆ ಬಗ್ಗೆ ಮಾಹಿತಿ ಇರುತ್ತೆ. ಇತ್ತ ನಿರ್ದೇಶಕರು ಅಲೆದಾಟನೂ ತಪ್ಪುತ್ತೆ. ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತೆ ಅನ್ನೋದು ಶ್ರೀ ಹರ್ಷ ಅಭಿಪ್ರಾಯ.
ಹೂಡಿಕೆ ಮಾಡುವುದು ಹೇಗೆ?
ಇಲ್ಲಿ ಹೂಡಿಕೆ ಮಾಡುವುದು ಸೇಫ್ ಎನ್ನುತ್ತಾರೆ ಶ್ರೀ ಹರ್ಷ. ಡಿಜಿಟಲ್ ಫ್ಲಾಟ್‌ಫಾರ್ಮ್ ಆಗಿದ್ದರಿಂದ ಹಣ ಹೂಡಿಕೆ ಸುಲಭ. ಈಗಾಗಲೇ ಕ್ರಿಷ್ಟೋ ಕರೆನ್ಸಿ ಕೊಂಡುಕೊಂಡಿದ್ದರೆ. ಅದನ್ನು ಬಳಕೆ ಮಾಡಲು ಸಾಧ್ಯವಾಗದೇ ಇದ್ದರೆ. ಇಲ್ಲಿ ಬಳಸಬಹುದು. ಅದಕ್ಕೂ ಅವಕಾಶವಿದೆ. ಹಾಗೇ ಜನರು ಹಣ ಇಲ್ಲಿ ಸೇಫ್. ಎಲ್ಲವೂ ಪಾರದರ್ಶಕವಾಗಿರುತ್ತೆ ಅಂತಾರೆ ಶ್ರೀಹರ್ಷ ಹಾದಿಗಲ್ಲು.
ಮೂವಿ ಮಾಫಿಯಾ ಚಿತ್ರರಂಗದಲ್ಲಿ ಹೊಸ ಕ್ರಾಂತಿಯನ್ನು ತರುವುದಕ್ಕೆ ಹೊರಟಿದೆ. ಇಂದಿನ ಡಿಜಿಟಲ್ ಜಮಾನದಲ್ಲಿ ಸಿನಿಮಾ ಮೇಕಿಂಗ್ ಕೂಡ ಡಿಜಿಟಲ್ ಆದರೆ ಹೇಗೆ? ಇಂತಹದ್ದೊಂದು ಕಲ್ಪನೆಯಂತೂ ಹುಟ್ಟಿಕೊಂಡಿದೆ. ಈಗಾಗಲೇ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡುವ ಜವಾಬ್ದಾರಿ ಇವರಿಗೆ ಮೇಲಿದೆ. ಪ್ರತಿ ಕ್ಷೇತ್ರದಲ್ಲೂ ಕ್ರಾಂತಿ ಆಗಬೇಕು. ಸಿನಿಮಾ ಮೇಕಿಂಗ್‌ನಲ್ಲೂ ಅಷ್ಟೇ.. ಆದರೆ, ಈ ಹೊಸ ಕಲ್ಪನೆ ಎಷ್ಟು ಪಾರದರ್ಶಕ? ಹೇಗೆ ಕೆಲಸ ಮಾಡುತ್ತೆ? ಅನ್ನೋದನ್ನು ಮತ್ತಷ್ಟು ತಿಳಿದುಕೊಳ್ಳಬೇಕಿದೆ.
ಸೂಚನೆ: ಇದೊಂದು ಹೊಸ ವೇದಿಕೆಯಾಗಿದ್ದು, ಹಣ ಹೂಡಿಕೆ ಮಾಡುವ ಮುನ್ನ ಸಂಪೂರ್ಣವಾಗಿ ಮಾಹಿತಿ ಪಡೆಯಿದೆ. ಈ ಲೇಖನ ಕೇವಲ ಮಾಹಿತಿಗಷ್ಟೇ.


Click it and Unblock the Notifications











