twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ಸಿನಿಮಾ ನಿರ್ಮಾಪಕ ಆನಂದ್ ಅಪ್ಪುಗೋಳ ಮತ್ತೆ ಬಂಧನ

    By ಫಿಲ್ಮಿಬೀಟ್ ಡೆಸ್ಕ್
    |

    ಸಂಗೊಳ್ಳಿ ರಾಯಣ್ಣ ಸಹಕಾರಿ ಬ್ಯಾಂಕ್‌ನ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸ್ಯಾಂಡಲ್‌ವುಡ್ ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ಅವರನ್ನು ಜಾರಿ ನಿದೇರ್ಶನಾಲಯ (ಇಡಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

    ಸುಮಾರು 250 ಕೋಟಿಗೂ ಅಧಿಕ ವಂಚನೆಯ ಈ ಪ್ರಕರಣವನ್ನು ಇಡಿ ಅಧಿಕಾರಿಗಳು ತನಿಖೆ ನಡೆಸಿ ಆನಂದ ಅಪ್ಪುಗೋಳ ವಿರುದ್ಧ ಪಿಎಂಎಲ್‌ಎ ಕಾಯ್ದೆಯಡಿ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯು ಗ್ರಾಹಕರು ಬ್ಯಾಂಕ್‌ನಲ್ಲಿ ಇಟ್ಟಿದ್ದ ಠೇವಣಿ ಹಣವನ್ನು ತನ್ನ ಸ್ವಂತ ಬಳಕೆಗೆ ಉಪಯೋಗಿಸಿಕೊಂಡಿದ್ದು, ಹಣವನ್ನು ಹಿಂತಿರಿಗಿಸಿದೆ ವಂಚನೆ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿತ್ತು. ಹೀಗಾಗಿ ಗುರುವಾರ ಇಡಿ ಅಧಿಕಾರಿಗಳು ಆನಂದ ಅಪ್ಪುಗೋಳ ಅವರನ್ನು ಬಂಧಿಸಿದ್ದಾರೆ.

    ಚಿತ್ರ ನಿರ್ಮಾಪಕರಾಗಿದ್ದ ಆನಂದ ಅಪ್ಪುಗೋಳ ಮಾಲೀಕತ್ವದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಬೆಳಗಾವಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದರು. ಸಿಐಡಿ ಡಿವೈಎಸ್‌ಪಿ ಪುರುಷೋತ್ತಮ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಎರಡು ದಿನಗಳ ಹಿಂದೆ ಬರೋಬ್ಬರಿ 2063 ಪುಟಗಳ ಚಾರ್ಜ್‌ಶೀಟ್‌ ಅನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದೆ. ಪ್ರಕರಣದಲ್ಲಿಒಟ್ಟು 13 ಜನರು 275 ಕೋಟಿ ರೂ. ಠೇವಣಿ ಹಣ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    Movie Producer Anand Appugol Arrested By ED
    ಸಂಗೊಳ್ಳಿ ರಾಯಣ್ಣ ಸೊಸೈಟಿಯು ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ 35 ಶಾಖೆಗಳನ್ನು ಹೊಂದ್ದಿದ್ದು, 26 ಸಾವಿರ ಜನರಿಂದ ಠೇವಣಿ ಸಂಗ್ರಹಿಸಿತ್ತು. ಆನಂದ ಅಪ್ಪುಗೋಳ ಸೇರಿ ಸೊಸೈಟಿಯ 13 ನಿರ್ದೇಶಕರು ಠೇವಣಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು. ಈ ಕುರಿತು ಸಹಕಾರ ಇಲಾಖೆ ನಿಬಂಧಕರು 2017 ರಂದು ದೂರು ದಾಖಲಿಸಿದ್ದರು. ಪ್ರಕರಣವನ್ನು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಸಿಐಡಿಗೆ ವಹಿಸಿತ್ತು.

    ಆನಂದ ಅಪ್ಪುಗೋಳ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಗಮ, ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಸಹಕಾರಿ ಸಂಘ, ಗಜರಾಜ ಸೊಸೈಟಿಯಲ್ಲಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾವಿರಾರು ಜನರಿಂದ ಕೋಟ್ಯಂತರ ಹಣ ಠೇವಣಿ ಇಟ್ಟಿದ್ದರು. ಬೆಳಗಾವಿ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ ಶಾಖೆ ಹೊಂದಿದ್ದ ಸೊಸೈಟಿಯಲ್ಲಿ ಠೇವಣಿ ಇಟ್ಟ ಹಣವನ್ನು ಆನಂದ ಅಪ್ಪುಗೋಳ ಹಾಗೂ ಸೊಸೈಟಿಯ ನಿರ್ದೇಶಕರು ಸ್ವಂತ ಬಳಕೆಗೆ ಬಳಸಿಕೊಂಡ ಬಗ್ಗೆ 2017ರಲ್ಲಿ ಸಹಕಾರ ಇಲಾಖೆ ನಿಬಂಧಕರು ದೂರು ದಾಖಲಿಸಿದ್ದರು.

    ರಿಯಲ್ ಎಸ್ಟೇಟ್‌ ವ್ಯವಹಾರ ಸೇರಿದಂತೆ ಇತರ ಕಡೆಗಳಲ್ಲಿ ಅವರು ಹಣ ತೊಡಗಿಸಿದ್ದರಿಂದ ಸೊಸೈಟಿ ತೀರ ಆರ್ಥಿಕ ಹಿನ್ನಡೆ ಅನುಭವಿಸಿತ್ತು. ಬೆಳಗಾವಿಯಲ್ಲಿ ಮುಂಚೂಣಿಯಲ್ಲಿದ್ದ ಈ ಸೊಸೈಟಿ ತೀವ್ರ ಆರ್ಥಿಕ ಕುಸಿತದಿಂದ ಮುಚ್ಚಿತ್ತು. ಇದರಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರಿಗೆ ಸಾಕಷ್ಟು ಸಲ ಮನವಿ ಸಲ್ಲಿಸಿ ಹಣವನ್ನು ಮರಳಿಸುವಂತೆ ಮನವಿ ಮಾಡಿಕೊಂಡಿದ್ದರು. ಕಳೆದ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸೊಸೈಟಿಯು 40ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿತ್ತು. ಅಪ್ಪುಗೋಳ ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರು. ದರ್ಶನ್‌ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಲನಚಿತ್ರ ನಿರ್ಮಿಸಿ ಯಶಸ್ಸು ಕಂಡಿದ್ದರು. ಆದರೆ ಗ್ರಾಹಕರಿಗೆ ಹಣ ನೀಡದೆ ತಲೆಮರೆಸಿಕೊಂಡಿದ್ದ ಅಪ್ಪುಗೋಳ ವಿರುದ್ಧ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಇನ್ನು ಶ್ರೀ ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಬೆಳಗಾವಿ ಸೌಹಾರ್ದ ಸಹಕಾರಿ ನಿಗಮ ಸಾರ್ವಜನಿಕರಿಂದ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಿದ್ದು ಅವುಗಳ ನಿಗದಿತ ಅವಧಿ ಮುಗಿದ ನಂತರ ಅದರ ಹೂಡಿಕೆದಾರರಿಗೆ ಹಿಂತಿರುಗಿಸದೆ ವಂಚಿಸಿರುವ ಪ್ರಕರಣ ಸಂಬಂಧ ಸಂಸ್ಥೆಯ ಆಸ್ತಿಯನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತ ಸಂರಕ್ಷಣಾ ಕಾಯ್ದೆ 2004ರ ಅಡಿ ಮುಟ್ಟುಗೋಲು ಹಾಕಿಕೊಂಡಿದ್ದು ಹರಾಜು ಪ್ರಕ್ರಿಯೆಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು.

    2000 ಜ.30ರಂದು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಸ್ಥಾಪನೆಯಾಗಿತ್ತು. ಇದರ ಸಂಸ್ಥಾಪಕ, ಅಧ್ಯಕ್ಷ ಆನಂದ ಅಪ್ಪುಗೋಳ ಆಗಿದ್ದರು. ಈ ಸಂಸ್ಥೆಯು ಜನರ ವಿಶ್ವಾಸದಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 35 ಶಾಖೆಗಳನ್ನು ವಿಸ್ತರಿಸಿಕೊಂಡಿತು. ಇನ್ನು ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತದ 14 ಶಾಖೆಗಳು ಮತ್ತು ಗಜರಾಜ ಸೌಹಾರ್ಧ ಸಹಕಾರಿ ನಿಯಮಿತದ 2 ಶಾಖೆಗಳು ಕೂಡ ಇದೇ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಾ ಬಂದಿತ್ತು ‌

    ಈ ಎಲಾ ಶಾಖೆಗಳಲ್ಲಿ ನುರಿತ ಮತ್ತು ಅನುಭವಿ ನೌಕರರನ್ನು, ವಿವಿಧ ಇಲಾಖೆ ಬ್ಯಾಂಕ್ ಮತ್ತು ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಅನುಭವ ಹೊಂದಿದ ಸಿಬ್ಬಂದಿಯನ್ನು ಶಾಖಾ ವ್ಯವಸ್ಥಾಪಕರೆಂದು ನೇಮಿಸಿ ಪ್ರತಿಯೊಬ್ಬ ಶಾಖಾಧಿಕಾರಿಗೂ ಮಾಸಿಕ ವೇತನ ನೀಡಲಾಗುತ್ತಿತ್ತು. ಆದರೆ ಪ್ರತಿದಿನ ಸಂಜೆ 6ರ ವೇಳೆಗೆ ಆಯಾ ಶಾಖೆಗಳಲ್ಲಿ ಶೇಖರಿಸಲ್ಪಟ್ಟಿದ್ದ ಠೇವಣಿ ಮೊತ್ತವನ್ನು ಮುಖ್ಯ ಕಚೇರಿಗೆ ಜಮಾ ಮಾಡಿ ಅಲ್ಲಿಂದ ರಸೀತಿ ಪಡೆದುಕೊಳ್ಳಬೇಕಾಗಿತ್ತು.

    ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈ ಮೊತ್ತದ ರಸೀದಿಗೆ ಸಹಿ ಹಾಕಿ ಕೊಡುತ್ತಿದ್ದರು. ಇಷ್ಟಕ್ಕೆ ಶಾಖಾಧಿಕಾರಿಗಳ ಜವಾಬ್ದಾರಿ ಮುಗಿಯುತ್ತಿತ್ತು. ಆದರೆ ಇದೀಗ ಸಂಸ್ಥೆಯಲ್ಲಿ ಜಮಾ ಆದ ಹಣವನ್ನು ಸ್ಥಾಪಕಾಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ದುರುಪಯೋಗ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಠೇವಣಿದಾರರಿಗೆ ಠೇವಣಿ ಹಿಂದುರಿಗಿಸಿ ಕೊಡದೆ ಭಾರೀ ವಂಚನೆ ಮಾಡಲಾಗಿದೆ ಎಂಬ ಆರೋಪವಿದೆ.

    ಒಟ್ಟು 275 ಕೋಟಿ ಹಣ ಠೇವಣಿ ಹಣ ವಂಚನೆಯಾದ ಆರೋಪ ಕೇಳಿ ಬಂದ ಹಿನ್ನೆಲೆ ಅಂದಿನ ಸಿಎಂ ಹೆಚ್.ಡಿ‌.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪ್ರಕರಣದ ತನಿಖೆ ಸಿಐಡಿಗೆ ವಹಿಸಿತ್ತು. ಆದರೆ ಈವರೆಗೂ ಠೇವಣಿದಾರರಿಗೆ ಹಣ ಸಿಕ್ಕಿಲ್ಲ. ತಮ್ಮ ಜೀವಮಾನವೀಡಿ ದುಡಿದ ಹಣ ವಾಪಸ್ ಸಿಗದೇ ವಯೋವೃದ್ಧರು, ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.

    English summary
    Movie producer Anand Appugol arrested by ED in money cheating case. 250 crore rs cheating case registered on Anand Appugol.
    Friday, January 7, 2022, 13:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X