ಕಥೆ ಮೊದ್ಲೆ ಹೇಳಿ ಪ್ರೇಕ್ಷಕರಿಗೆ ಚಿತ್ರಮಂದಿರಕ್ಕೆ ಆಮಂತ್ರಣ; ಏನಿದು ಹೊಸ ಸ್ಟ್ಯಾಟರ್ಜಿ
ಯಾವುದೇ ಚಿತ್ರಕ್ಕೆ ಕಥೆ ಬಹಳ ಇಂಪಾರ್ಟೆಂಟ್. ಪ್ರೇಕ್ಷಕರಿಗೆ ಕುತೂಹಲ ಇದ್ದಷ್ಟು ಸಿನಿಮಾ ಮಜಾ ಕೊಡುತ್ತೆ. ಆದರೆ ಕಾಲ ಬದಲಾದಂತೆ ಕಥೆಯ ಕುತೂಹಲಕ್ಕಿಂತ ಸಿನಿಮಾ ಹೇಗಿದೆ ಎನ್ನುವುದು ಮುಖ್ಯ ಎನ್ನುವಂತಾಗಿದೆ. ಹಾಲಿವುಡ್ ಸಿನಿಮಾಗಳ ವಿಚಾರದಲ್ಲಿ ಮೊದಲಿನಿಂದಲೂ ಇದೇ ನಿಮಯ ಪಾಲಿಸುತ್ತಿದ್ದಾರೆ. ಸಿನಿಮಾ ಕಥೆಯ ಸಾರಾಂಶ ಮೊದ್ಲೆ ಹೇಳಿಬಿಡ್ತಾರೆ. ಸಿನಿಮಾ ಹೇಗೆ ಮಾಡಿದ್ದೀವಿ ಬಂದು ನೋಡಿ ಎನ್ನುತ್ತಾರೆ. ನಿಧಾನವಾಗಿ ಭಾರತೀಯ ಸಿನಿಮಾಗಳಲ್ಲಿ ಕೂಡ ಇದು ಶುರುವಾಗಿದೆ.
ಸೋಶಿಯಲ್ ಮೀಡಿಯಾ ಜಮಾನದಲ್ಲಿ ಗುಟ್ಟು ಉಳಿಸಿಕೊಳ್ಳುವುದು ಕಷ್ಟ ಎನ್ನುವಂತಾಗಿದೆ. ಮೇಕಿಂಗ್ ಹಂತದಲ್ಲೇ ಫೋಟೊ, ವಿಡಿಯೋ ಲೀಕ್ ಆಗುತ್ತಿದೆ. ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡುವುದಕ್ಕೂ ಮುನ್ನ ಟೈಟಲ್ ಏನು ಎನ್ನುವುದು ಜಗಜ್ಜಾಹೀರಾಗುತ್ತಿದೆ. ಸಿನಿಮಾ ರಿಲೀಸ್ ಹೊತ್ತಿಗೆ ಒನ್‌ಲೈನ್ ಸ್ಟೋರಿ ಕೂಡ ಗೊತ್ತಾಗುತ್ತಿದೆ. 'ಪೆದ್ದಿ' ಸಿನಿಮಾ ವಿಚಾರದಲ್ಲಿ ಅದು ಸಾಬೀತಾಗಿತ್ತು. ಟ್ರೈಲರ್ ನೋಡಿದಾಗಲೇ ಸಿನಿಮಾ ಕಥೆ ರಿವೀಲ್ ಆಗಿಬಿಟ್ಟಿತ್ತು. ಪ್ರೇಕ್ಷಕರು ಇದೇ ಕಥೆ ಎಂದು ಮೊದಲೇ ಮಾನಸಿಕವಾಗಿ ಸಿದ್ಧರಾಗಿದ್ದರು.

ಇತ್ತೀಚೆಗೆ 'ಡ್ರ್ಯಾಗನ್' ಸಿನಿಮಾ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿ ಹಿಟ್ ಆಗಿತ್ತು. ಸಿನಿಮಾ ಕಥೆ ಏನು? ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ? ಯಾರ ಪಾತ್ರ ಏನು? ಎನ್ನುವುದನ್ನು ರಿವೀಲ್ ಮಾಡಿಬಿಟ್ಟಿದ್ದಾರೆ ಪ್ರಶಾಂತ್ ನೀಲ್. ಈಗಾಗಲೇ 'ಟಾಕ್ಸಿಕ್' ಸಿನಿಮಾ ಕಥೆ ಏನು ಎನ್ನುವುದನ್ನು ಕೂಡ ಯಶ್ ಹೇಳಿಬಿಟ್ಟಿದ್ದಾರೆ. ಅಲ್ಲಿಗೆ ಪ್ರೇಕ್ಷಕರಿಗೆ ಕಥೆಯ ಬಗ್ಗೆ ಕುತೂಹಲ ಇರುವುದಿಲ್ಲ. ಆ ಕಥೆಯನ್ನು ಹೇಗೆ ತೆರೆಮೇಲೆ ತಂದಿದ್ದಾರೆ ಎನ್ನುವ ನಿರೀಕ್ಷೆ ಜೊತೆಗೆ ಚಿತ್ರಮಂದಿರಗಳಿಗೆ ಹೋಗುವಂತಾಗಿದೆ.
ಇವತ್ತಿಗೂ ಸಿನಿಮಾ ಕಥೆ ಏನು ಎನ್ನುವುದನ್ನು ತೆರೆಮೇಲೆ ಬಂದು ನೋಡಿ ಎಂದು ಚಿತ್ರತಂಡಗಳು ಪ್ರಚಾರದ ವೇಳೆ ಹೇಳುವುದನ್ನು ಕೇಳಿದ್ದೇವೆ. ಬಿಡುಗಡೆಗೂ ಮುನ್ನ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಬಾರದು ಎಂದು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ನಂಬಿದ್ದರು. ಎಲ್ಲಾ ಮೊದ್ಲೆ ಹೇಳಿಬಿಟ್ಟರೆ ಸಿನಿಮಾ ನೋಡುವ ಕುತೂಹಲ ಇರುವುದಿಲ್ಲ ಎನ್ನುತ್ತಿದ್ದರು. ಕಥೆಯ ಸುಳಿವು ಸಿಗದಂತೆ ಟೀಸರ್, ಟ್ರೈಲರ್ ಕಟ್ ಮಾಡುವ ಪ್ರಯತ್ನ ನಡೆಯುತ್ತಲೇ ಇದೆ. ಆದರೆ ನಿಧಾನವಾಗಿ ಫಿಲ್ಮ್ ಮೇಕರ್ಸ್ ಹೊಸ ಸ್ಟ್ಯಾಟರ್ಜಿ ಶುರು ಮಾಡಿದ್ದಾರೆ. ಸಿನಿಮಾ ಒನ್‌ಲೈನ್ ಸ್ಟೋರಿ ಮೊದ್ಲೆ ಹೇಳುತ್ತಿದ್ದಾರೆ.

ಇತ್ತೀಚೆಗೆ ಸೆನ್ಸಾರ್ ಕಾಪಿ, ಬುಕ್‌ಮೈ ಶೋದಲ್ಲಿ ಸಿನಿಮಾ ಕಥೆಯ ಸಾರಾಂಶ ಏನು ಎನ್ನುವುದನ್ನು ರಿವೀಲ್ ಆಗ್ತಿದೆ. ಹಾಗಾಗಿ ಕಥೆಯನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದೇ ವಿಚಾರವಾಗಿ ಗಲಾಟ ಪ್ಲಸ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದರು. "ಇವತ್ತು ಚಿತ್ರಮಂದಿರಕ್ಕೆ ಬರುವ ಮುನ್ನ ಪ್ರೇಕ್ಷಕರು ಸಿನಿಮಾ ಕಥೆ ಕೇಳಲು ಸಿದ್ಧರಿದ್ದಾರೆ. ಕಥೆಯನ್ನು ಗುಟ್ಟಾಗಿ ಇಟ್ಟುಕೊಳ್ಳುವುದು ಹಳೇ ಸಂಪ್ರದಾಯ. ಇವತ್ತು ನಾನು ಒಂದು ಕಥೆ ಹೇಳಿದ್ರೆ, ಅದನ್ನು ಹೇಗೆ ಮಾಡೋಕೆ ಸಾಧ್ಯ ಎನ್ನುವ ಕುತೂಹಲ ಇರುತ್ತೆ. ಹಾಲಿವುಡ್ ಮೊದಲಿನಿಂದ ಹೀಗೆ ಮಾಡ್ತಾ ಬರ್ತಿದೆ. ಸ್ಟೋರಿ, ಕೆಲ ದೃಶ್ಯಗಳನ್ನು ಮೊದ್ಲೆ ಹೇಳಿಬಿಡ್ತಾರೆ. ನಾನು ಕೂಡ ಅದೇ ರೀತಿ ಮಾಡ್ಬೇಕು ಅಂತ ಇದ್ದೀನಿ. ಅದ್ಧೂರಿ ಸಿನಿಮಾ ಮಾಡ್ತಿದ್ದೀವಿ ಎನ್ನುವುದಕ್ಕಿಂತ ಅದ್ಭುತ ಕಥೆ ಹೇಳ್ತಿದ್ದೀವಿ ಎಂದು ಪ್ರೇಕ್ಷಕರಿಗೆ ಗೊತ್ತಾಗಬೇಕು" ಎಂದಿದ್ದರು.
'ಟಾಕ್ಸಿಕ್' ಹಾಗೂ 'ವಾರಣಾಸಿ' ರೀತಿಯ ದೊಡ್ಡ ಸಿನಿಮಾಗಳ ಕಥೆಗಳ ಹಿನ್ನಲೆ, ಕಲಾವಿದರ ಪಾತ್ರಗಳು ಏನು ಎನ್ನುವುದು ಗೊತ್ತಾಗಿದೆ. ಬಾಲಿವುಡ್ ಮಂದಿ ಕೂಡ ಬಹಳ ದಿನಗಳಿಂದ ಇದೇ ಲೆಕ್ಕಾಚಾರ ಆರಂಭಿಸಿದ್ದಾರೆ. ನಿಧಾನವಾಗಿ ದಕ್ಷಿಣದ ಫಿಲ್ಮ್ ಮೇಕರ್ಸ್ ಕೂಡ ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇರೋದೇ 10ರಿಂದ 15 ಕಥೆ. ಅದನ್ನೇ ತಿರುವುಮುರುವು ಮಾಡಿ ಹೇಳ್ತಾರೆ. ಅದಕ್ಕೆ ಸೀಕ್ರೆಟ್ ಯಾಕೆ? ಎನ್ನುವ ಲೆಕ್ಕಾಚಾರ ಶುರುವಾದಂತೆ ಕಾಣ್ತಿದೆ. ಈ ಐಡಿಯಾ ಎಷ್ಟರಮಟ್ಟಿಗೆ ವರ್ಕ್ ಆಗುತ್ತದೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications