Ghost: ಘೋಸ್ಟ್ ಜತೆಗೆ ದಸರಾ ರೇಸ್‌ಗೆ ಇಳಿಯಲಿವೆ ಈ 5 ಚಿತ್ರಗಳು; ಗೆಲುವು ಯಾರಿಗೆ?
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ, ಬೀರ್ ಬಲ್ ಖ್ಯಾತಿಯ ಶ್ರೀನಿ ನಿರ್ದೇಶನ 'ಘೋಸ್ಟ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದು ಚಿತ್ರದಲ್ಲಿ ಶಿವಣ್ಣನ ಲುಕ್ ಕುತೂಹಲ ಕೆರಳಿಸಿದೆ. ಟೈಟಲ್‌ನಿಂದಲೇ ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ಘೋಸ್ಟ್ ಚಿತ್ರತಂಡ ಬಿಗ್ ಡ್ಯಾಡಿ ಟೀಸರ್ ಬಿಡುಗಡೆ ಮಾಡುವ ಮೂಲಕ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.
ನಿರ್ದೇಶಕ ಶ್ರೀನಿ ಘೋಸ್ಟ್ ಸಿನಿಮಾವನ್ನು ದಸರಾ ಪ್ರಯುಕ್ತ ಬಿಡುಗಡೆ ಮಾಡಲಿದ್ದೇವೆ ಎಂಬುದನ್ನು ಘೋಷಿಸಿದ್ದರು. ಆದರೆ ಯಾವ ದಿನಾಂಕದಂದು ಚಿತ್ರ ತೆರೆಗೆ ಬರಲಿದೆ ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ಮೂಲಗಳು ತಿಳಿಸಿರುವ ಮಾಹಿತಿಯ ಪ್ರಕಾರ ಘೋಸ್ಟ್ ಚಿತ್ರ ಅಕ್ಟೋಬರ್ 19ಕ್ಕೆ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

ಹೌದು, ದಸರಾ ಹಬ್ಬದ ಸಂಭ್ರಮ ಹಾಗೂ ಸಾಲು ಸಾಲು ರಜೆಗಳನ್ನು ತಲೆಯಲ್ಲಿಟ್ಟುಕೊಂಡು ಘೋಸ್ಟ್ ಚಿತ್ರವನ್ನು ಅಕ್ಟೋಬರ್ 19ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಈ ದಸರಾ ಪ್ರಯುಕ್ತ ಘೋಸ್ಟ್ ಮಾತ್ರವಲ್ಲದೇ ತೆಲುಗು, ತಮಿಳು ಹಾಗೂ ಕನ್ನಡದ ಹಲವಾರು ಚಿತ್ರಗಳು ಸಹ ಬಿಡುಗಡೆಯಾಗಲು ದಿನಾಂಕ ಘೋಷಿಸಿವೆ. ಹಾಗಾದರೆ ಈ ಬಾರಿಯ ದಸರಾ ರೇಸ್ ನಲ್ಲಿ ಯಾವ ಚಿತ್ರರಂಗದ ಯಾವ ಚಿತ್ರಗಳು ಬಿಡುಗಡೆಯಾಗಲಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
ಅಕ್ಟೋಬರ್ 19ಕ್ಕೆ ಘಟಾನುಘಟಿಗಳ ಗುದ್ದಾಟ
ಮೊದಲೇ ಹೇಳಿದಂತೆ ಸಾಲು ಸಾಲು ರಜಾ ದಿನಗಳನ್ನು ತಲೆಯಲ್ಲಿ ಇಟ್ಟುಕೊಂಡು ಘೋಸ್ಟ್ ಚಿತ್ರವನ್ನು ಅಕ್ಟೋಬರ್ 19 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ತಮಿಳಿನ ಲಿಯೊ ಹಾಗೂ ತೆಲುಗಿನ ಭಗವಂತ್ ಕೇಸರಿ ಚಿತ್ರಗಳೂ ಸಹ ತೆರೆಗೆ ಬರಲಿವೆ. ಹೌದು, ಲೋಕೇಶ್ ಕನಕರಾಜ್ ಹಾಗೂ ದಳಪತಿ ವಿಜಯ್ ಕಾಂಬಿನೇಶನ್ ನ ಲಿಯೋ ಸಹ ಅಕ್ಟೋಬರ್ 19ಕ್ಕೆ ತೆರೆಗೆ ಬರಲಿದೆ. ಅತ್ತ ತೆಲುಗಿನ ಬಾಲಕೃಷ್ಣ ನಟನೆಯ ಭಗವಂತ್ ಕೇಸರಿ ಚಿತ್ರ ಸಹ ಅಕ್ಟೋಬರ್ 19 ರಂದು ರಿಲೀಸ್ ಆಗಲಿದೆ.
ಅಕ್ಟೋಬರ್ 20ಕ್ಕೆ 3 ಚಿತ್ರಗಳು ಕನ್ಫರ್ಮ್
ಇನ್ನು ಘೋಸ್ಟ್ ಚಿತ್ರ ಬಿಡುಗಡೆಯಾದ ಮುಂದಿನ ದಿನ ಕನ್ನಡದ ಮತ್ತೊಂದು ಬಹು ನಿರೀಕ್ಷಿತ ಚಿತ್ರ ಸಪ್ತ ಸಾಗರದಾಚೆ ಎಲ್ಲೋ ಬಿಡುಗಡೆಯಾಗಲಿದೆ. ಹೌದು, ಸೆಪ್ಟೆಂಬರ್ 1 ರಂದು ಸಪ್ತ ಸಾಗರದಾಚೆ ಎಲ್ಲೋ ಚಿತ್ರ ಮೊದಲ ಭಾಗ ಬಿಡುಗಡೆಯಾಗಲಿದ್ದು, ಎರಡನೇ ಭಾಗ ಅಕ್ಟೋಬರ್ 20 ರಂದು ತೆರೆಗೆ ಬರಲಿದೆ. ಈ ಚಿತ್ರದ ಜತೆಗೆ ಅದೇ ದಿನ ತೆಲುಗಿನ ಮಾಸ್ ಮಹಾರಾಜ ರವಿತೇಜ ನಟನೆಯ ಟೈಗರ್ ನಾಗೇಶ್ವರ್ ರಾವ್ ಚಿತ್ರ ಬಿಡುಗಡೆಗೊಳ್ಳಲಿದ್ದು, ಟೈಗರ್ ಶ್ರಾಫ್ ನಟನೆಯ ಹಿಂದಿ ಚಿತ್ರ ಗಣಪತ್ ಮೊದಲ ಭಾಗವೂ ಇದೇ ದಿನ ಬಿಡುಗಡೆಗೊಳ್ಳಲಿದೆ.


Click it and Unblock the Notifications











