ಇಂದು ಬಿಡುಗಡೆ ಆಗಿರುವ ಟಾಪ್ ಸಿನಿಮಾಗಳಿವು: ನಿಮ್ಮ ಆಯ್ಕೆ ಯಾವುದು?
ಕಳೆದೆರಡು ವರ್ಷಗಳಿಂದ ಮಂಕಾಗಿದ್ದ ಚಿತ್ರಮಂದಿರಗಳು ಕಳೆದಾರು ತಿಂಗಳಿನಿಂದ ಚೈತನ್ಯ ಪಡೆದುಕೊಳ್ಳುತ್ತಿವೆ. ಕನ್ನಡದ 'ಕೆಜಿಎಫ್' ಸೇರಿದಂತೆ ದಕ್ಷಿಣದ ಎಲ್ಲ ರಾಜ್ಯಗಳಲ್ಲಿಯೂ ಕನಿಷ್ಟ ಒಂದೊಂದು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿ ಆಯಾ ರಾಜ್ಯದ ಚಿತ್ರಮಂದಿರಗಳಿಗೆ ಬಲ ತುಂಬಿವೆ.
ಕೋವಿಡ್ ನಿವಾರಣೆಯಾಗಲೆಂದು ಕಾದು ಕೂತಿದ್ದ ಹಲವು ಸಿನಿಮಾಗಳು ಸಾಲು-ಸಾಲಾಗಿ ಬಿಡುಗಡೆ ಆಗುತ್ತಿದ್ದು, ಒಂದರ ಮೇಲೊಂದು ಸಿನಿಮಾಗಳು ಸ್ಪರ್ಧೆಗೆ ಬೀಳದಂತೆ ಸಾವಕಾಶವಾಗಿ ಯೋಜಿಸಿ ಸಿನಿಮಾಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ವಾರವೂ ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಯಾವ ಸಿನಿಮಾ ಹಿಟ್ ಆಗಲಿದೆ, ಯಾವ ಸಿನಿಮಾ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕೆಲವು ಒಳ್ಳೆಯ ಸಿನಿಮಾಗಳು ಈ ವಾರ ಬಿಡುಗಡೆ ಆಗಲಿದ್ದು, ಈ ವಾರಾಂತ್ಯ ನಿಮ್ಮ ಆಯ್ಕೆ ಯಾವುದಾಗಿರಲಿದೆ?

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ'
ರಕ್ಷಿತ್ ಶೆಟ್ಟಿ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ '777 ಚಾರ್ಲಿ' ಇಂದು ಬಿಡುಗಡೆ ಆಗಿದೆ. ಸಿನಿಮಾದ ಪ್ರೀಇಯರ್ ಶೋಗಳು ಈಗಾಗಲೇ ಹಲವು ನಗರಗಳಲ್ಲಿ ಪ್ರದರ್ಶನ ಕಂಡಿದ್ದು, ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದು, ನಾಯಿ ಹಾಗೂ ನಾಯಕ ನಟ ರಕ್ಷಿತ್ ಶೆಟ್ಟಿ ನಡುವಿನ ಬಾಂಧವ್ಯವನ್ನು ತೋರಿಸುವ ಸಿನಿಮಾ ಇದಾಗಿದೆ. ಸಿನಿಮಾ ಪಕ್ಕಾ ಹಿಟ್ ಆಗುವ ಸೂಚನೆಗಳನ್ನು ಈಗಾಗಲೇ ನೀಡಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಂಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ.

ಶ್ರೀ ಅಲ್ಲಮಪ್ರಭು ಸಿನಿಮಾ ಬಿಡುಗಡೆ
ಶ್ರೀ ಅಲ್ಲಮಪ್ರಭು ಹೆಸರಿನ ಕನ್ನಡ ಸಿನಿಮಾ ಒಂದು ಇಂದು ಬಿಡುಗಡೆ ಆಗಿದೆ. ಶಂಕರ್ ಸಿಂಗ್ ಅವರ 'ಪ್ರಭು ಲಿಂಗ ಲೀಲಾ' ಕತೆ ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ಸಿನಿಮಾಗಳಿಗೆ ಇವರು ದುಡಿದಿದ್ದಾರಂತೆ. ಸಿನಿಮಾವನ್ನು ಮಾದವಾನಂದ ಹಾಗೂ ಮಹಾವೀರ್ ಪ್ರಭು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಸಚಿನ್ ಸುವರ್ಣ ಅಲ್ಲಮನ ಪಾತ್ರದಲ್ಲಿ ನಟಿಸಿದ್ದಾರೆ.

'ಅಂಟೆ ಸುಂದರಾನಿಕಿ' ಧರ್ಮಗಳ ನಡುವಿನ ಪ್ರೇಮಕತೆ
ತೆಲುಗಿನ ಸ್ಟಾರ್ ನಟ ನಾನಿ ಹಾಗೂ ಮಲಯಾಳಂನ ಸ್ಟಾರ್ ನಟಿ ನಾಜರಿಯ ಒಟ್ಟಿಗೆ ನಟಿಸಿರುವ 'ಅಂಟೆ ಸುಂದರಾನಿಕಿ' ಸಿನಿಮಾ ಇಂದು ಬಿಡುಗಡೆ ಆಗಿದೆ. ಬ್ರಾಹ್ಮಣ ಯುವಕ, ಕ್ರಿಶ್ಚಿಯನ್ ಹುಡುಗಿ ನಡುವಿನ ಪ್ರೇಮಕತೆಯನ್ನು ಸಿನಿಮಾ ಒಳಗೊಂಡಿದ್ದು, ಹಾಸ್ಯದ ಮೂಲಕ ಸಂದೇಶವನ್ನು ಸಾರುವ ಸಿನಿಮಾ ಇದಾಗಿದೆ. ಸಿನಿಮಾವನ್ನು ವಿವೇಕ್ ಆತ್ರೆಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ನರೇಶ್, ರೋಹಿಣಿ, ನಿಕ್ಕಿ ತಾಂಬೋಲಿ, ರೋಹಿಣಿ ಇನ್ನೂ ಕೆಲವರಿದ್ದಾರೆ.

'ದಿಯಾ' ರೀಮೇಕ್ 'ಡಿಯರ್ ದಿಯಾ' ಬಿಡುಗಡೆ
ಕನ್ನಡದಲ್ಲಿ ಸೂಪರ್ ಹಿಟ್ ಆಗಿದ್ದ 'ದಿಯಾ' ಸಿನಿಮಾದ ಹಿಂದಿ ರೀಮೇಕ್ 'ಡಿಯರ್ ದಿಯಾ' ಇಂದು ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಕನ್ನಡದ ಪೃಥ್ವಿ ಅಂಬರ್ ನಟಿಸಿದ್ದಾರೆ. ದಿಯಾ ಪಾತ್ರದಲ್ಲಿ ಮಿಹಿಕಾ ಕುಶ್ವಾ ನಟಿಸಿದ್ದಾರೆ. ಉಜ್ವಲ್ ಶರ್ಮಾ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡದ 'ದಿಯಾ' ನಿರ್ದೇಶನ ಮಾಡಿದ್ದ ಕೆಎಸ್ ಅಶೋಕ್ ಅವರೇ ಹಿಂದಿ ಸಿನಿಮಾವನ್ನೂ ನಿರ್ದೇಶನ ಮಾಡಿದ್ದಾರೆ.

'ಜನ್ ಹಿಟ್ ಮೆ ಜಾರಿ'
ನುಸ್ರತ್ ಬರೂಚಾ ನಟಿಸಿರುವ ಹಿಂದಿ ಸಿನಿಮಾ 'ಜನ್ ಹಿತ್ ಮೇ ಜಾರಿ' ಇಂದು ಬಿಡುಗಡೆ ಆಗಿದೆ. ಕಾಂಡೊಮ್ ಸಂಸ್ಥೆಯಲ್ಲಿ ಕೆಲಸ ಮಾಡುವ ಯುವತಿಯೊಬ್ಬಾಕೆ, ಮದುವೆಯಾದ ಮೇಲೆ ಉದ್ಯೋಗ ಬಿಡುವಂತೆ ತನ್ನ ಕುಟುಂಬದವರೊಡನೆ ಹೋರಾಡುವ ಹಾಗೂ ಸಮಾಜದ ಜೊತೆ ಹೋರಾಡುವ ಕತೆಯನ್ನು ಸಿನಿಮಾ ಹೊಂದಿದೆ. ಉಮಂಗ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

'ಜುರಾಸಿಕ್ ವರ್ಲ್ಡ್: ಡಾಮಿನಿಯೊನ್' ಬಿಡುಗಡೆ
ಹಾಲಿವುಡ್‌ನ ಜನಪ್ರಿಯ ಸಿನಿಮಾ ಸರಣಿ ಜುರಾಸಿಕ್ ಪಾರ್ಕ್‌ನ ಆರನೇ ಸಿನಿಮಾ 'ಜುರಾಸಿಕ್ ವರ್ಲ್ಡ್: ಡಾಮಿನಿಯೊನ್' ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಕಾಲಿನ್ ಟ್ರೆವಾರ್ವೊ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಕ್ರಿಸ್ ಪ್ರ್ಯಾಟ್, ಸ್ಯಾಮ್ ನೇಲ್, ಬ್ರೈಸಿ ಹಾವರ್ಡ್ ಇನ್ನೂ ಹಲವರು ನಟಿಸಿದ್ದಾರೆ. ಜುರಾಸಿಕ್ ಡಾಮಿನಿಯೊನ್' ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೇಗೆ ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











