ಸ್ಸಾರಿ ಎಂದ ಸಂಸದ, ದೂರು ಹಿಂಪಡೆದ ಶ್ವೇತಾ
ಮಲೆಯಾಳಂ ನಟಿ ಶ್ವೇತಾ ಮೆನನ್ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಕಾಂಗ್ರೆಸ್ ಸಂಸದ ಎನ್. ಪೀತಾಂಬರ ಕುರುಪ್ ಗೆ ರಿಲೀಫ್ ಸಿಕ್ಕಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಕುರುಪ್ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಪ್ರಕರಣ ಇತ್ಯರ್ಥವಾಗಿರುವ ಸುದ್ದಿಯೂ ಬಂದಿದೆ.
ಕುರುಪ್ ವಿರುದ್ಧ ನೀಡಿದ್ದ ದೂರನ್ನು ಶ್ವೇತಾ ಭಾನುವಾರ ತಡ ರಾತ್ರಿ ಹಿಂತೆಗೆದುಕೊಂಡಿದ್ದಾರೆ. ಬಾಹ್ಯ ಒತ್ತಡದಿಂದಾಗಿ ಪ್ರಕರಣ ಹಿಂತೆಗೆದುಕೊಂಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ಇದಕ್ಕೆ ನೀವು ಏನು ಹೇಳುತ್ತೀರಾ ಮೇಡಂ ಎಂಬ ಪ್ರಶ್ನೆಗೆ ಹಾಗೇನಿಲ್ಲ ಕುರುಪ್ ಅವರು ಕ್ಷಮೆಯಾಚಿಸಿದ್ದಾರೆ, ದೂರು ಹಿಂಪಡೆಯುವಲ್ಲಿ ಯಾವುದೇ ಒತ್ತಡ ಇಲ್ಲ ಎಂದು ಶ್ವೇತಾ ಪ್ರತಿಕ್ರಿಯಿಸಿದ್ದಾರೆ.
ಎರಡು ದಿನಗಳ ಹಿಂದೆ ಕೊಲ್ಲಂನಲ್ಲಿ ನಡೆದ ರಾಷ್ಟ್ರಪತಿಗಳ ಬೋಟ್ ರೇಸ್ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿತ್ತು. ಅದರಂತೆ ಭಾನುವಾರ ಬೆಳಗ್ಗೆ ಪೊಲೀಸರು ಶ್ವೇತಾ ಹೇಳಿಕೆಯನ್ನೂ ಪಡೆದುಕೊಂಡಿದ್ದರು. ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ಒಂದು ಹಂತದಲ್ಲಿ ನಟಿ ಕಣ್ಣೀರಿಟ್ಟಿದ್ದರು.

ಇದಕ್ಕೂ ಮೊದಲು ಶನಿವಾರ ಚಲನಚಿತ್ರ ಮಂಡಳಿ ಎದುರು ಈ ವಿಚಾರ ಪ್ರಸ್ತಾಪಿಸಿದ್ದ ಅವರು ಈ ಕುರಿತು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದರು.
ಆದರೆ, ಕುರುಪ್ ಅವರು ಶ್ವೇತಾ ಆರೋಪವನ್ನು ನಿರಾಕರಿಸಿದ್ದರು. ಇದು ರಾಜಕೀಯ ಪ್ರೇರಿತ ದೂರು ಎಂದು ಆರೋಪಿಸಿದ್ದರು. ಆದರೆ, ಕಾರ್ಯಕ್ರಮದ ವಿಡಿಯೋ ತುಣುಕುಗಳು ಕುರುಪ್ ಅವರು ಶ್ವೇತಾ ಮೆನನ್ ಅವರನ್ನು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿರುವುದು ಕಂಡು ಬಂದಿತ್ತು. ಇದರಿಂದ ಕುರುಪ್ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವಂತಾಗಿತ್ತು. ಈ ನಡುವೆ, ಶ್ವೇತಾ ಕೂಡ ಯಾವುದೇ ಕಾರಣಕ್ಕೂ ದೂರಿನಿಂದ ಹಿಂದೆ ಸರಿಯಲ್ಲ ಎಂದಿದ್ದರು. ಪೊಲೀಸರು ಕೂಡಾ ಐಪಿಸಿ ಸೆಕ್ಷನ್ 354 ಹಾಗೂ 354 (ಎ) ಅನ್ವಯ ದೂರು ದಾಖಲಿಸಿಕೊಂಡಿದ್ದರು. ಆದರೆ, ಎಫ್ ಐಆರ್ ದಾಖಲಿಸಿದ್ದರ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ.
ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಶ್ವೇತಾ ಮೆನನ್ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿ ಕೇರಳದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಪ್ಪಿತಸ್ಥ ಸಂಸದನ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿ ಚಿತ್ರೋದ್ಯಮಿಗಳು ಹಾಗೂ ಮಹಿಳಾಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ವ್ಯಕ್ತಪಡಿಸಿದ್ದರು.


Click it and Unblock the Notifications











