'ಕಾಂತಾರ' ಸಿನಿಮಾ ನೋಡಿ ಚಿತ್ರರಂಗಕ್ಕೆ ಸಲಹೆ ಕೊಟ್ಟ ಪ್ರಜ್ವಲ್ ರೇವಣ್ಣ
ರಿಷಬ್ ಶೆಟ್ಟಿ ನಿರ್ದೇಶನದ 'ಕಾಂತಾರ' ಸಿನಿಮಾ ದೊಡ್ಡ ಯಶಸ್ಸು ದಾಖಲಿಸಿದೆ. ಎಲ್ಲ ವರ್ಗದ ಪ್ರೇಕ್ಷಕರೂ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಪ್ರೇಕ್ಷಕರು ಮಾತ್ರವಲ್ಲದೆ ಸಿನಿಮಾ ಕರ್ಮಿಗಳು, ನಟರು, ಸಾಹಿತಿಗಳು, ಚಿಂತಕರು, ಕೆಲವು ರಾಜಕಾರಣಿಗಳು ಸಹ 'ಕಾಂತಾರ' ಸಿನಿಮಾ ವೀಕ್ಷಿಸಿ ವಿಮರ್ಶಿಸಿದ್ದಾರೆ, ವಿಮರ್ಶಿಸುತ್ತಿದ್ದಾರೆ.
ಕೆಲವು ರಾಜಕಾರಣಿಗಳು ಸಹ 'ಕಾಂತಾರ' ಸಿನಿಮಾ ವೀಕ್ಷಿಸಿ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದಾರೆ. ಇದೀಗ ಹಾಸನ ಕ್ಷೆತ್ರದ ಯುವ ಸಂಸದ ಪ್ರಜ್ವಲ್ ರೇವಣ್ಣ 'ಕಾಂತಾರ' ಸಿನಿಮಾ ವೀಕ್ಷಿಸಿದ್ದು, ಸಿನಿಮಾ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿ ಕನ್ನಡ ಚಿತ್ರರಂಗಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

ಕಾಂತಾರ' ಚಿತ್ರವನ್ನು ವೀಕ್ಷಿಸಿದ ಪ್ರಜ್ವಲ್ ರೇವಣ್ಣ
ಕನ್ನಡದ 'ಕಾಂತಾರ' ಚಿತ್ರವನ್ನು ವೀಕ್ಷಿಸಿದೆ, ರಿಷಬ್ ಶೆಟ್ಟಿ ಅವರು ಅದ್ಬುತವಾಗಿ ನಟಿಸಿದ್ದಾರೆ, ಕಾಡಿನ ಜನರ ಅಳಿವು ಉಳಿವಿನ ಹೋರಾಟ ಒಂದೆಡೆಯಾದರೆ, ನಾಡಿನ ಬಂಡವಾಳಶಾಹಿಗಳ ಕರಾಳತೆ ಮತ್ತೊಂದೆಡೆ ಇವೆಲ್ಲವನ್ನೂ ನಿರ್ದೇಶಕರು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದಿದ್ದಾರೆ.

ಸಂಸ್ಕೃತಿಯ ಪರಿಚಯ ಮಾಡಿಸಿದ್ದಾರೆ ರಿಷಬ್: ಪ್ರಜ್ವಲ್
''ಕರಾವಳಿಯ ದೈವಾರಾಧನೆ ಮತ್ತು ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಎಂತದ್ದು ಅನ್ನೋದನ್ನು ರಿಷಬ್ ಶೆಟ್ಟಿ ಅವರು ತೀರಾ ಸರಳವಾಗಿ ಅಚ್ಚುಕಟ್ಟಾಗಿ ವಿವರಿಸಿದ್ದಾರೆ, ವಿವಿಧತೆಯಲ್ಲಿ ಏಕತೆಯನ್ನು ಹೊತ್ತು ಸಾಗುತ್ತಿರುವ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಭಾರತಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ'' ಎಂದಿದ್ದಾರೆ ಪ್ರಜ್ವಲ್ ರೇವಣ್ಣ.

ನಾಡಿನ ಅಸ್ಮಿತೆಯನ್ನು ಬಿಂಬಿಸುವ ಕನ್ನಡದ ಚಿತ್ರ: ಪ್ರಜ್ವಲ್
''ಒಟ್ಟಾರೆಯಾಗಿ ಕಾಂತಾರ, ನಾಡಿನ ಅಸ್ಮಿತೆಯನ್ನು ಬಿಂಬಿಸುವ ಕನ್ನಡದ ಚಿತ್ರ ಎಂದರೆ ತಪ್ಪಾಗಲಾರದು. ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ಕರ್ನಾಟಕದಲ್ಲಿ ಇನ್ನೂ ಅದೆಷ್ಟೋ ವಿಭಿನ್ನ ಸಂಸೃತಿಗಳಿವೆ ಅವೆಲ್ಲವನ್ನೂ ಕನ್ನಡ ಚಿತ್ರರಂಗ ಬಳಸಿಕೊಂಡು ಚಲನಚಿತ್ರಗಳನ್ನು ರೂಪಿಸಿದರೆ ಕರ್ನಾಟಕದ ಭವ್ಯ ಸಾಂಸ್ಕೃತಿಕ ಪರಂಪರೆ ಇಡೀ ವಿಶ್ವಕ್ಕೇ ಪರಿಚಯವಾಗಲಿದೆ. ಕಾಂತಾರ ಚಿತ್ರತಂಡದವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಜೊತೆಗೆ ಚಿತ್ರ ಇನ್ನಷ್ಟು ಯಶಸ್ಸು ಕಂಡು ಜನರ ಮನ್ನಣೆಯನ್ನು ಗಳಿಸಲಿ ಎಂದು ಹಾರೈಸುತ್ತೇನೆ. '' ಎಂದಿದ್ದಾರೆ ಪ್ರಜ್ವಲ್ ರೇವಣ್ಣ.

ಇತರೆ ಭಾಷೆಗಳಿಗೆ ಡಬ್ ಮಾಡಲಾಗಿದೆ
'ಕಾಂತಾರ' ಸಿನಿಮಾವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ, ನಟನೆ ಸಹ ಮಾಡಿದ್ದಾರೆ. ತುಳು ನಾಡಿನ ಸಂಸ್ಕೃತಿಯನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾಕ್ಕೆ ಹೊಂಬಾಳೆ ಫಿಲಮ್ಸ್ ಬಂಡವಾಳ ಹೂಡಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ನಟ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ತೆಲುಗು, ಹಿಂದಿ ಭಾಷೆಗಳಿಗೂ ಡಬ್ ಮಾಡಿ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.


Click it and Unblock the Notifications











