ಕಿಚ್ಚ ಸುದೀಪ್‌ಗೆ ನರ್ತನ್ ಆಕ್ಷನ್ ಕಟ್, ಭೈರತಿ ರಣಗಲ್ ನಿರ್ದೇಶಕ ಹೇಳಿದ್ದೇನು...?
ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಬಿಡುಗಡೆ ಯಾವಾಗ..? ಮ್ಯಾಕ್ಸಿಮಮ್ ಮನರಂಜನೆಯನ್ನು ಎದುರು ನೋಡ್ತಿರುವ ಕನ್ನಡ ಕಲಾಭಿಮಾನಿಗಳಿಗೆ ಕಾಡುತ್ತಿರುವ ಯಕ್ಷ ಪ್ರಶ್ನೆ ಇದು. ಸದ್ಯಕ್ಕೆ ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಈ ಚಿತ್ರ ಈ ಡಿಸೆಂಬರ್ ಅಂತ್ಯಕ್ಕೆ ತೆರೆಗೆ ಬರಬಹುದು.
ಇನ್ನೂ ಮ್ಯಾಕ್ಸ್ ಹೊರತು ಪಡಿಸಿದರೆ ಸುದೀಪ್ ಕೈಯಲ್ಲಿ ಕೆಲ ಸಿನಿಮಾಗಳಿವೆ. ಅದರಲ್ಲಿ ಯಾವುದು ಮೊದಲು, ಯಾವುದು ನಂತರ, ಎನ್ನುವದು ಇನ್ನೂ ಸ್ಪಷ್ಟವಾಗದೇ ಇದ್ದರೂ ಮುಂಬರುವ ಚಿತ್ರಗಳ ಲೈನ್ ಅಪ್ ಸುದೀಪ್ ಅಭಿಮಾನಿಗಳನ್ನೂ ತುದಿಗಾಲಿನಲ್ಲಿಯಂತೂ ನಿಲ್ಲಿಸಿದೆ. ಇದರ ನಡುವೆ ಮಫ್ತಿ ಮತ್ತು ಭೈರತಿ ರಣಗಲ್ ಸೂತ್ರಧಾರ ನರ್ತನ್, ಬಾದ್ ಷಾ ಕಿಚ್ಚ ಸುದೀಪ್ ಅವರಿಗೆ ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ನರ್ತನ್, ನಾನು ಮತ್ತು ಸುದೀಪ್ ಸರ್ ಚಿತ್ರಕ್ಕೆ ಸಂಬಂಧಿಸಿದಂತೆ ಮಾತನಾಡಿರುವುದು ನಿಜಾ ಎಂದು ಹೇಳಿದ್ದಾರೆ. ಆದರೆ, ಇನ್ನೂ ಈ ಪ್ರಾಜೆಕ್ಟ್ ಆರಂಭಿಕ ಹಂತದಲ್ಲಿದೆ. ಸದ್ಯ ಭೈರತಿ ರಣಗಲ್ ಚಿತ್ರದ ಕೆಲಸಗಳಲ್ಲಿ ನಾನು ತಲ್ಲೀನವಾಗಿದ್ದೇನೆ ಎಂದು ಹೇಳಿದ್ದಾರೆ.
ನರ್ತನ್ ಅವರ ಈ ಹೇಳಿಕೆ ಈಗ ಸುದೀಪ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಇಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಸಿನಿಮಾ ಹೇಗಿರಬಹುದು ಎನ್ನುವ ಚರ್ಚೆ ಕೂಡ ಗಾಂಧಿನಗರದಲ್ಲಿ ನಡೆಯುತ್ತಿದೆ. ಭೈರತಿ ರಣಗಲ್ ಚಿತ್ರ ಬಿಡುಗಡೆಯಾದ ನಂತರ ನರ್ತನ್, ಸುದೀಪ್ ಅವರ ಜೊತೆ ಸಿನಿಮಾವನ್ನು ಇಮ್ಮಿಡಿಯೇಟ್ ಆಗಿ ಘೋಷಣೆ ಮಾಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ.
ಅಂದ್ಹಾಗೇ ಈ ಹಿಂದೆ ನರ್ತನ್ ರಾಮ್ ಚರಣ್ ತೇಜಾಗೆ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆ ನಂತರ ತಮಿಳು ನಟ ಸೂರ್ಯ ಅಭಿನಯದ ಮುಂದಿನ ಚಿತ್ರಕ್ಕೆ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ರಾಮ್‌ಚರಣ್‌ಗೆ ಮಾಡಿದ್ದ ಕಥೆಯನ್ನೇ ಸೂರ್ಯಗೆ ಮಾಡ್ತಾರೆ ಎಂದು ಪುಕಾರು ಹಬ್ಬಿತ್ತು. ದಳಪತಿ ವಿಜಯ್ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಈ ಚಿತ್ರಕ್ಕೆ ಹಣ ಹೂಡಲಿದೆ ಎಂದು ಕೂಡ ಹೇಳಲಾಗಿತ್ತು. ಯುವರಾಜ್ ಕುಮಾರ್ ಮತ್ತು ಧ್ರುವಾ ಸರ್ಜಾಗೆ ಕೂಡ ನರ್ತನ್ ಚಿತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಕೂಡ ಇದೆಲ್ಲದರ ನಡುವೆ ಕೇಳಿ ಬಂದಿತ್ತು. ಆದರೆ ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮಿ ಬೀಟ್ ಕನ್ನಡಗೆ ಪ್ರತಿಕ್ರಿಯೆ ನೀಡಿದ್ದ ನರ್ತನ್ , ''ಸದ್ಯಕ್ಕೆ ನನ್ನ ಗಮನ 'ಭೈರತಿ ರಣಗಲ್' ಸಿನಿಮಾ ಮೇಲಿದೆ. ನನ್ನ ಮುಂದಿನ ಸಿನಿಮಾ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಈಗ ಕೇಳಿಬರುತ್ತಿರುವುದು ಕೇವಲ ವದಂತಿ. ನಾನು ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. 'ಭೈರತಿ ರಣಗಲ್' ಸಿನಿಮಾ ರಿಲೀಸ್ ಆಗಬೇಕು. ಬಳಿಕ ಮುಂದಿನ ಸಿನಿಮಾ ಬಗ್ಗೆ ಯೋಚಿಸುತ್ತೇನೆ" ಎಂದು ಹೇಳಿದ್ದರು.
ಒಟ್ನಲ್ಲಿ ಸದ್ಯದ ಲೆಕ್ಕಾಚಾರಗಳನ್ನು ನೋಡುತ್ತಿದ್ದರೆ ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲಾ ರಂಗಾ ಬಾಷಾ ಸದ್ಯ ಶುರುವಾಗಲಿದೆ. ಈ ಚಿತ್ರಕ್ಕೆ ಸುದೀಪ್ ತಯಾರಿಯನ್ನು ನಡೆಸಿದ್ದಾರೆ ಕೂಡ. ಈ ಚಿತ್ರದ ನಂತರ ನರ್ತನ್ ಜೊತೆ ಸುದೀಪ್ ಸಿನಿಮಾ ಮಾಡ್ತಾರಾ ಅಥವಾ ತಮ್ಮ ನಿರ್ದೇಶನದ ಕೆಕೆ ಚಿತ್ರಕ್ಕೆ ಅಭಿನಯ ಚಕ್ರವರ್ತಿ ಚಾಲನೆಯನ್ನು ನೀಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ. ಆರ್.ಚಂದ್ರು ಜೊತೆ ಕೂಡ ಚಿತ್ರವೊಂದು ಸರತಿ ಸಾಲಿನಲ್ಲಿದೆ.


Click it and Unblock the Notifications











