twitter
    For Quick Alerts
    ALLOW NOTIFICATIONS  
    For Daily Alerts

    ಎರಡೇ ದಿನಗಳಲ್ಲಿ ಐದು ಚಿತ್ರಗಳ ಮುಹೂರ್ತ

    By Super
    |

    ಇದು ಸೃಷ್ಟಿಯಾಗಿದ್ದು ಕಳೆದ ಗುರುವಾರ ಮತ್ತು ಶುಕ್ರವಾರದ ಶುಭದಿನ.

    ಆ ಐದು ಚಿತ್ರಗಳ ಪೈಕಿ ಮೂರು ಚಿತ್ರಗಳಲ್ಲಿ ಶಶಿಕುಮಾರ್‌ ಇದ್ದಾರೆ. ಯಾವುದೇ ನಾಯಕ ನಟ ಈ ತನಕ ಇಂಥಾ ಸಾಧನೆ ಮಾಡಿಲ್ಲ ಎಂದು ಶಶಿ ಕುಣಿದಾಡುವುದಕ್ಕೆ ಅಡ್ಡಿಯಿಲ್ಲ . ಅವರ ಮಟ್ಟಿಗೆ ಇದು ಕೂಡ ದಾಖಲೆಯಾಗಬಹುದಾದರೂ ಈ ಮೂರೂ ಚಿತ್ರಗಳಲ್ಲಿ ಅವರು ಸೆಕೆಂಡ್‌ ಹೀರೋ ಅನ್ನುವುದೂ ಲೆಕ್ಕಕ್ಕೆ ಬರುತ್ತದೆ. ಜೊತೆಗೇ ಶಶಿಯನ್ನು ಲೋಕಸಭೆಗೆ ಕಳಿಸಿದ ಚಿತ್ರದುರ್ಗದ ಜನತೆಗೆ ಇದಕ್ಕಿಂದ ಕೆಟ್ಟ ಸುದ್ದಿ ಇನ್ನೊಂದಿಲ್ಲ. ಈಗಾಗಲೇ ದುರ್ಗವನ್ನು ಮ್ಯಾಪ್‌ನಲ್ಲಷ್ಟೇ ನೋಡಿ ಆನಂದಿಸುತ್ತಿರುವ ಶಶಿ ಇನ್ನು ಆ ಕಡೆಗೆ ತಲೆ ಹಾಕಬೇಕಾದರೆ, ಸದ್ರಿ ನಿರ್ಮಾಪಕರು ಅಲ್ಲೇ ಶೂಟಿಂಗ್‌ ಇಟ್ಟುಕೊಳ್ಳಬೇಕಾಗಬಹುದು.

    ಮೊನ್ನೆ ಸೆಟ್ಟೇರಿದ ಪಂಚ ಚಿತ್ರಗಳ ಪ್ರವರ ಇಲ್ಲಿದೆ :

    ಆತ್ಮ

    ನಿರ್ಮಾಪಕ ಡೇವಿಡ್‌ ಪ್ರಕಾರ ಭಾರತದಲ್ಲಿ , ಅದರಲ್ಲೂ ಮೂರು ಭಾಷೆಗಳಲ್ಲಿ, ಡಿಟಿಎಸ್‌ ಸೌಂಡ್‌ ಸಿಸ್ಟಮ್‌ನಲ್ಲಿ ತಯಾರಾಗುತ್ತಿರುವ ಮೊದಲ ಹಾರರ್‌ ಚಿತ್ರವಿದು. ಚಿತ್ರದ ಕತೆಯೂ ಹಾಗೇ ಇದೆ. ಸುಖ ಸಂಸಾರವೊಂದು ದುಷ್ಟ ಶಕ್ತಿಯ ಕೈವಾಡದಿಂದಾಗಿ ನಾಶವಾಗುತ್ತದೆ. ಅಲ್ಲಿ ಕೊಲೆಯಾಗುವ ಜೀವಗಳಲ್ಲಿ ಒಬ್ಬ ಅತೃಪ್ತ ಹೆಣ್ಣು ಕೂಡ ಸೇರಿದ್ದಾಳೆ. ಆಕೆಯ ಆತ್ಮ ಗಾಳಿಯ ರೂಪದಲ್ಲಿ ಸಂಚರಿಸುತ್ತಾ ಸೇಡಿಗಾಗಿ ಹಾತೊರೆಯುತ್ತದೆ. ಇಂಥಾ ಹೆಣ್ಣಿನ ಪಾತ್ರಕ್ಕೆ ತಮಿಳಿನ ಶರ್ಮಿಳಾ ಆಯ್ಕೆಯಾಗಿದ್ದಾಳೆ. ಬಾಲಚಂದರ್‌ ನಿರ್ದೇಶನದ ತಮಿಳು ಸೀರಿಯಲ್‌ಗಳಲ್ಲಿ ನಟಿಸಿರುವ ಶರ್ಮಿಳಾ ದಂತ ವೈದ್ಯೆ . ಆ ಬಗ್ಗೆ ಸರ್ಟಿಫಿಕೇಟ್‌ ಕೂಡ ಇದೆ. ಹಾರರ್‌ ಚಿತ್ರಕ್ಕೆ ಬೇಕಾದ ಅರ್ಹತೆಯೂ ಈಕೆಯ ದಂತ ಪಂಕ್ತಿಯಲ್ಲೇ ಅಡಗಿದೆ. ಸೀರಿಯಲ್‌ ಧಾರಾವಾಹಿಗಳಿಗೆ ಸಂಚಿಕೆ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದ ಸುಶೀಲ್‌ ಮೊಕಾಶಿ ಆತ್ಮದ ಮೂಲಕ ಸಿನಿಮಾ ನಿರ್ದೇಶಕರಾಗಿ ಬಡ್ತಿ ಪಡೆಯತ್ತಿದ್ದಾರೆ. ಇಲ್ಲಿಯವರೆಗೆ ಕನ್ನಡ ಚಿತ್ರಗಳನ್ನು ನೋಡಿದ ನಂತರವೇ ಅದು ಹಾರರ್‌ ಅನ್ನೋದು ಪ್ರೇಕ್ಷಕನಿಗೆ ಗೊತ್ತಾಗುತ್ತಿತ್ತು. ಆದರೆ ಆತ್ಮ ಚಿತ್ರ ಅಡ್ವಾನ್ಸಾಗಿ ಹಾರರ್‌ ಎಂದು ಘೋಷಿಸಿರುವುದು ನಿರ್ಮಾಪಕರ ಪ್ರಾಮಾಣಿಕತೆಗೆ ಸಾಕ್ಷಿ !

    ಹುಚ್ಚ

    ನಾನು ರಿಮೇಕ್‌ ಮಾಡುವುದಿಲ್ಲ ಎಂದು ಆಗಾಗ ಗೊಣಗುತ್ತಿದ್ದ ಓಂ ಪ್ರಕಾಶ್‌ ಈಗ ಹುಚ್ಚ ಎಂಬ ರಿಮೇಕಿನ ನಿರ್ದೇಶಕ. ಇದು ತಮಿಳಿನ ಸೇತು ಚಿತ್ರದ ರಿಮೇಕ್‌. ಸ್ಪರ್ಶ ಚಿತ್ರ ಗೆಲ್ಲದಿದ್ದರೂ ನಾಯಕನಾಗಿ ಗೆಲುವು ಕಂಡ ಸುದೀಪ್‌ ಈ ಚಿತ್ರದ ನಾಯಕ. ಮೌಂಟ್‌ ಕಾರ್ಮೆಲ್‌ ಹುಡುಗಿ ರೇಖಾಗೆ ನಾಯಕಿಯಾಗಿ ಇದು ಎರಡನೇ ಚಿತ್ರ. ನಿರ್ಮಾಪಕರು ಯಜಮಾನ ಖ್ಯಾತಿಯ ರೆಹಮಾನ್‌.ಸುದೀಪ್‌ ಇಲ್ಲಿಯ ತನಕ ನಟಿಸಿದ ಚಿತ್ರಗಳಿಗೆಲ್ಲಾ ಅಲ್ಪ ಸ್ವಲ್ಪ ಧನಸಹಾಯ ಮಾಡುತ್ತಿದ್ದ ಅವರ ತಂದೆ ಸಂಜೀವ್‌ ಈ ಚಿತ್ರಕ್ಕೆ ಫೈನಾನ್ಸ್‌ ಮಾಡುವುದಿಲ್ಲ ಎನ್ನೋದು ಸುದ್ದಿ. ಕಾರಣ ಸಿಂಪಲ್‌. ಸ್ಪರ್ಶ ಚಿತ್ರ ಮಾಡಿದ ನಂತರ ಅವರ ಕೈಯಲ್ಲಿ ಹಣವೇ ಇಲ್ಲವಂತೆ.

    ನಮ್ಮ ಸಂಸಾರ, ಆನಂದ ಸಾಗರ

    ಯಾರೇ ಕೂಗಾಡಲೀ ... ಊರೇ ....ಎನ್‌. ಕುಮಾರ್‌ ಸಿನಿಮಾ ನಿರ್ಮಿಸುವುದನ್ನ ಬಿಡಲಾರರು. ಕಳಕೊಳ್ಳುವ ವ್ಯವಹಾರದಲ್ಲಿ ದಾಖಲೆಯನ್ನೇ ನಿರ್ಮಿಸಿರುವ ಕುಮಾರ್‌ ಅವರ 18ನೇ ಚಿತ್ರ ನಮ್ಮ ಸಂಸಾರ ಆನಂದ ಸಾಗರ. ಶಶಿಕುಮಾರ್‌, ಕುಮಾರ್‌ ಗೋವಿಂದು, ವಿನೋದ್‌ ರಾಜ್‌ ಮೊದಲಾದವರು ನಟಿಸಿರುವ ಈ ಚಿತ್ರವನ್ನು ಜೆ.ಜೆ. ಕೃಷ್ಣ ನಿರ್ದೇಶಿಸಿದ್ದಾರೆ.

    ಬಾಳಾ ಚೆನ್ನಾಗಿದೆ

    ತೆಲುಗಿನ 'ಚಾಲ ಬಾಗುಂದಿ" ಯನ್ನು ಕನ್ನಡಕ್ಕೆ ಅನುವಾದ ಮಾಡಿದರೆ ಬಾಳಾ ಚೆನ್ನಾಗಿರುತ್ತೆ. ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ನಂತರ ಇನ್ನೇನಿದ್ದರೂ ರಿಮೇಕ್‌ ಸಹವಾಸ ಸಾಕು, ಒರಿಜಿನಲ್‌ ಚಿತ್ರಗಳನ್ನಷ್ಟೇ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ ಎಂ.ಎಸ್‌. ರಾಜಶೇಖರ್‌ ಈ ಚಿತ್ರದ ನಿರ್ದೇಶಕರು. ಗೆಜ್ಜೆ ಪೂಜೆಯಂತಹ ಸದಭಿರುಚಿ ಚಿತ್ರಗಳನ್ನು ನಿರ್ಮಿಸಿದ ನಂತರ ಕೆಲವು ವರ್ಷ ಚಿತ್ರ ನಿರ್ಮಾಣದಿಂದ ದೂರವಿದ್ದ ರಾಶಿ(ರಾಮನಾಥ, ಶಿವರಾಮ್‌)ಜೋಡಿಯ ರಿಎಂಟ್ರಿ ಈ ರಿಮೇಕ್‌ ಚಿತ್ರದಿಂದ ಆಗುತ್ತಿರುವುದು ವಿಪರ್ಯಾಸ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮತ್ತು ಶಶಿಕುಮಾರ್‌ ನಟಿಸುತ್ತಿದ್ದಾರೆ. ಶಿವಣ್ಣನ ಜೊತೆ ಸದ್ಯದಲ್ಲಿಯೇ ನಟಿಸಲಿದ್ದೇನೆ ಅನ್ನುವ ಶಶಿ ಭರವಸೆ ಈ ಮೂಲಕ ನಿಜವಾಗುತ್ತಿದೆ.

    ಉನ್ನಡತ್ತಿನಲ್‌ ಎನ್ನೈ ಕೊತ್ತೇನ್‌

    ರಾಜ್‌ ಕುಮಾರ್‌ ಅವರ ವನವಾಸ ಮೋಕ್ಷದಲ್ಲಿ ಅಭೂತ ಪೂರ್ವ ಪಾತ್ರವಹಿಸಿ, ಹಲವರ ಟೀಕೆಗೆ ಗುರಿಯಾಗಿದ್ದ ಸಾ.ರಾ. ಗೋವಿಂದು ಈಗ ಮರಳಿ ತಮ್ಮ ಮಾಮೂಲು ಕೆಲಸಕ್ಕೆ ಹಾಜರಾಗಿದ್ದಾರೆ. ಅದೇ ರಿಮೇಕ್‌ ಚಿತ್ರ ನಿರ್ಮಾಣ. ತಮಿಳಿನ ಉನ್ನಡತ್ತಿನಲ್‌ ಎನ್ನೈ ಕೊಡುತ್ತೇನ್‌ ಚಿತ್ರವನ್ನು ಆಧರಿಸಿ ಅವರು ಕನ್ನಡದಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕಿನ್ನೂ ನಾಮಕರಣವಾಗಿಲ್ಲ. ಆದರೆ ಈ ಕನ್ನಡಪರ ಹೋರಾಟಗಾರ ಈ ಬಾರಿ ತಮ್ಮ ಚಿತ್ರಕ್ಕೆ ತಮಿಳು ನಿರ್ದೇಶಕ ಕರಣ್‌ ಅವರನ್ನೇ ಆಯ್ಕೆ ಮಾಡುವ ಮೂಲಕ ಇನ್ನೊಂದು ದಾಖಲೆ ಸ್ಥಾಪಿಸಿದ್ದಾರೆ. ರವಿಚಂದ್ರನ್‌ ಜೊತೆಗೆ ಶಶಿಕುಮಾರ್‌ ಈ ಚಿತ್ರದ ಪಾತ್ರವರ್ಗಕ್ಕೆ ಜಮೆಯಾಗಿದ್ದಾರೆ.

    ಅಂದ ಹಾಗೆ ಬಾಳ ಚೆನ್ನಾಗಿದೆ ಚಿತ್ರದ ಮುಹೂರ್ತ ದೃಶ್ಯಕ್ಕೆ ಕ್ಲಾಪ್‌ ಮಾಡಿದವರು ಡಾ.ರಾಜ್‌ಕುಮಾರ್‌. ಇದು ಅವರು ಕಾಡಿನಿಂದ ಬಂದ ನಂತರ ಪಾಲ್ಗೊಂಡ ಮೊದಲ ಸಿನಿಮಾ ಮುಹೂರ್ತ. ಈ ಚಿತ್ರವೂ ರಿಮೇಕ್‌ ಅನ್ನುವಲ್ಲಿಗೆ ಕಳೆದ ವಾರದ ದಾಖಲೆಗಳ ಪಟ್ಟಿಗೆ ಇದೂ ಸೇರಿದಂತಾಗಿದೆ.

    English summary
    Five kannada movies bigin filming
    Monday, July 8, 2013, 11:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X