ದರ್ಶನ್ 'ಕ್ರಾಂತಿ'ಗೆ 'ಕನಸುಗಾರ'ನ ಜೊತೆಗೆ 'ಮುಖ್ಯಮಂತ್ರಿ'
ಕನ್ನಡ ಚಿತ್ರರಂಗದ ಮಟ್ಟಿಗೆ ಬಹಳ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಒಂದು ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದ ಚಿತ್ರೀಕರಣ ಭರಣದಿಂದ ಸಾಗಿದ್ದು, ಹೆಚ್ಚು ಅಪ್‌ಡೇಟ್‌ಗಳನ್ನು ಲೀಕ್ ಮಾಡದೆ ಸದ್ದಿಲ್ಲದೆ ಚಿತ್ರೀಕರಣ ಮುಗಿಸುತ್ತಿದೆ ಚಿತ್ರತಂಡ.
Recommended Video
ಇದೀಗ ಬಂದಿರುವ ಅಪ್‌ಡೇಟ್‌ನಂತೆ 'ಕ್ರಾಂತಿ' ಸಿನಿಮಾದಲ್ಲಿ ಒಬ್ಬರ ಪ್ರಮುಖ ಹಿರಿಯ ನಟ ಅತ್ಯಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ವಿ ರವಿಚಂದ್ರನ್.
ನಟ ರವಿಚಂದ್ರನ್ ಅವರು 'ಕ್ರಾಂತಿ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. 'ಕ್ರಾಂತಿ' ಸಿನಿಮಾದಲ್ಲಿ ಅವರದ್ದು ಯಾವ ರೀತಿಯ ಪಾತ್ರ ಎಂಬುದು ಖಾತ್ರಿಯಾಗಿಲ್ಲವಾದರೂ, ರವಿಚಂದ್ರನ್ 'ಕ್ರಾಂತಿ'ಯ ಭಾಗವಾಗಿರುವುದು ಪಕ್ಕಾ. ರವಿಚಂದ್ರನ್ ಅವರು ಮುಹೂರ್ತ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು.
ನಟ ರವಿಚಂದ್ರನ್ ಅವರು ಈಗಾಗಲೇ ಕೆಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಅವರೊಟ್ಟಿಗೆ 'ಹೆಬ್ಬುಲಿ' ಸಿನಿಮಾದಲ್ಲಿ ಅಣ್ಣನಾಗಿಯೂ, 'ಮಾಣಿಕ್ಯ' ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ದರ್ಶನ್ ಜೊತೆ ನಟಿಸುತ್ತಿದ್ದಾರೆ ರವಿಚಂದ್ರನ್. ಈ ಹಿಂದೆ ದರ್ಶನ್ ಮುಖ್ಯಪಾತ್ರದಲ್ಲಿದ್ದ 'ಕುರುಕ್ಷೇತ್ರ' ಸಿನಿಮಾದಲ್ಲಿ ರವಿಚಂದ್ರನ್ ಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ 'ಕ್ರಾಂತಿ' ಸಿನಿಮಾದ ಮೂಲಕ ಮತ್ತೆ ದರ್ಶನ್ ಹಾಗೂ ರವಿಚಂದ್ರನ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

'ಕ್ರಾಂತಿ' ಸಿನಿಮಾದಲ್ಲಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು
ಇನ್ನು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಸಹ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರಿಗೆ ದರ್ಶನ್‌ರ ತಾತನ ಪಾತ್ರ ಎಂದು ಹೇಳಲಾಗುತ್ತಿದೆ. 'ಕ್ರಾಂತಿ' ಸಿನಿಮಾ ಮುಖ್ಯಮಂತ್ರಿ ಚಂದ್ರು ಅವರ 515 ನೇ ಸಿನಿಮಾ ಆಗಲಿರುವುದು ವಿಶೇಷ. 1983ರ 'ಚಕ್ರವ್ಯೂಹ' ಸಿನಿಮಾದಿಂದ ನಟನಾ ವೃತ್ತಿ ಆರಂಭಿಸಿದ ಮುಖ್ಯಮಂತ್ರಿ ಚಂದ್ರು ಡಾ.ರಾಜ್‌ಕುಮಾರ್ ಸೇರಿದಂತೆ ಬಹುತೇಕ ಎಲ್ಲ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ.

'ಯಜಮಾನ' ಚಿತ್ರತಂಡದಿಂದ ಮತ್ತೊಂದು ಸಿನಿಮಾ
2019ರಲ್ಲಿ ಬಿಡುಗಡೆ ಆಗಿದ್ದ ದರ್ಶನ್ ನಟನೆಯ 'ಯಜಮಾನ' ಸಿನಿಮಾದ ತಂಡವೇ ಈ ಸಿನಿಮಾದಲ್ಲಿಯೂ ತೆರೆಯ ಹಿಂದೆ ಕೆಲಸ ಮಾಡಲಿದೆ. 'ಯಜಮಾನ' ನಿರ್ದೇಶಿಸಿದ್ದ ವಿ ಹರಿಕೃಷ್ಣ ಅವರೇ 'ಕ್ರಾಂತಿ' ಸಿನಿಮಾವನ್ನೂ ನಿರ್ದೇಶನ ಮಾಡಲಿದ್ದಾರೆ. ಶೈಲಜಾ ನಾಗ್, ಬಿ ಸುರೇಶ್ ಬಂಡವಾಳ ಹೂಡಿದ್ದಾರೆ. 'ಯಜಮಾನ' ಸಿನಿಮಾಕ್ಕೂ ಇವರೇ ಬಂಡವಾಳ ಹೂಡಿದ್ದರು. ಸಿನಿಮಾಕ್ಕೆ ಸಂಗೀತವನ್ನು ವಿ ಹರಿಕೃಷ್ಣ ಅವರೇ ನೀಡುತ್ತಿದ್ದಾರೆ. ಸಿನಿಮಾಕ್ಕೆ ನಾಯಕಿಯಾಗಿ ರಚಿತಾ ರಾಮ್ ನಟಿಸಲಿದ್ದಾರೆ. ದರ್ಶನ್ ಜೊತೆಗೆ ರಚಿತಾ ರಾಮ್ ಅವರ ಎರಡನೇ ಸಿನಿಮಾ ಇದು. ರಚಿತಾ ರಾಮ್ ತಮ್ಮ ಮೊದಲ ಸಿನಿಮಾ 'ಬುಲ್-ಬುಲ್'ನಲ್ಲಿ ದರ್ಶನ್ ಜೊತೆ ನಟಿಸಿದ್ದರು.

ಕಾದಂಬರಿ ಮಾದರಿಯ ಕತೆ ಎಂದ ದರ್ಶನ್
ಸಿನಿಮಾದ ಮುಹೂರ್ತವು ಅಕ್ಟೋಬರ್ ತಿಂಗಳಲ್ಲಿ ನಡೆದಿತ್ತು. ಅಂದು ಮಾತನಾಡಿದ್ದ ದರ್ಶನ್, 'ಕ್ರಾಂತಿ' ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇರುವುದಾಗಿ ಹೇಳಿದ್ದರು, ಅಲ್ಲದೆ, ''ನಿರ್ದೇಶಕರು ಬಹಳ ಭಿನ್ನವಾದ ಕತೆಯನ್ನು ತಂದಿದ್ದಾರೆ. ಅಕ್ಷರಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯ ಅಂತೆಯೇ ಈ ಸಿನಿಮಾದಲ್ಲಿ ಅಕ್ಷರಗಳು ಬಹಳ ಪ್ರಮುಖ ಪಾತ್ರ ವಹಿಸಲಿವೆ. ಒಂದು ರೀತಿ ಕಾದಂಬರಿ ಮಾದರಿಯ ಕತೆಯನ್ನು ಕ್ರಾಂತಿ ಹೊಂದಿದೆ'' ಎಂದು ಕತೆಯ ಬಗ್ಗೆ ಕುತೂಹಲ ಹುಟ್ಟಿಸಿದ್ದಾರೆ.

ನಿಂತ 'ರಾಜವೀರ ಮದಕರಿ ನಾಯಕ' ಸಿನಿಮಾ
'ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. 'ಕ್ರಾಂತಿ' ಸಿನಿಮಾ ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 'ಕ್ರಾಂತಿ'ಗೂ ಮುಂಚೆ ದರ್ಶನ್ 'ರಾಜವೀರ ಮದಕರಿ ನಾಯಕ' ಸಿನಿಮಾದಲ್ಲಿ ನಟಿಸುತ್ತಿದ್ದರು. ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿ, ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದರು. ಆದರೆ ಆ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತು ಹೋಗಿದೆ. ಈ ಸಮಯಕ್ಕೆ ತಕ್ಕುದಾದ ಸಿನಿಮಾ 'ರಾಜವೀರ ಮದಕರಿ ನಾಯಕ' ಅಲ್ಲವೆಂದು ದರ್ಶನ್ ಅವರೇ ಸಿನಿಮಾವನ್ನು ತಡೆಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇನ್ನೆರಡು ಪಕ್ಕಾ ಕಮರ್ಶಿಯಲ್ ಸಿನಿಮಾಗಳ ಬಳಿಕ, ಐತಿಹಾಸಿಕ ಸೂಕ್ಷ್ಮ ವಿಷಯವುಳ್ಳ 'ರಾಜವೀರ ಮದಕರಿ ನಾಯಕ' ಸಿನಿಮಾ ಮುಂದುವರೆಸುವ ಇರಾದೆ ದರ್ಶನ್ ಅವರದ್ದು.


Click it and Unblock the Notifications











