ಬೆಂಗಳೂರು ಕಾಲ್ತುಳಿತ ಪ್ರಕರಣ; ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯೆ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಕೆಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನ ಸರ್ಕಾರ ಹಾಗೂ ಕೆಎಸ್‌ಸಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ವ್ಯವಸ್ಥೆ ಮಾಡಿಕೊಳ್ಳದೇ ಅಮಾಯಕರನ್ನು ಕೊಂದುಬಿಟ್ಟರು ಎಂದು ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಸ್ಯಾಂಡಲ್‌ವುಡ್ ತಾರೆಯರಾದ ಶಿವಣ್ಣ, ರಮ್ಯಾ, ರಚಿತಾ ರಾಮ್ ಸೇರಿದಂತೆ ಹಲವರು ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಿರಿಯ ನಟ, ಎಎಪಿ ರಾಜ್ಯಾಧ್ಯಕ್ಷರಾಗಿರುವ ಆಗಿರುವ ಮುಖ್ಯಮಂತ್ರಿ ಚಂದ್ರು ಘಟನೆ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

ಲಕ್ಷಾಂತರ ಜನ ಒಮ್ಮೆಲೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜಮಾಯಿಸಿದ್ದು ಗೇಟ್ ಮೂಲದ ಒಳಗೆ ಹೋಗಲು ಯತ್ನಿಸಿದ್ದೇ ಘಟನೆಗೆ ಕಾರಣ. ನಾಲ್ವರು ಮಹಿಳೆಯರು ಸೇರಿ ಒಟ್ಟು 11 ಜನ ಆರ್‌ಸಿಬಿ ಅಭಿಮಾನಿಗಳು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ. ಯಾಕಾದರೂ ಈ ಸಂಭ್ರಮಾಚರಣೆ ಬೇಕಿತ್ತು? ಎಂದು ಎಲ್ಲರೂ ಕೇಳುವಂತಾಗಿದೆ.
ಮುಖ್ಯಮಂತ್ರಿ ಚಂದ್ರು ಮಾತನಾಡಿ "ಆರ್‌ಸಿಬಿ ಗೆದ್ದ ಸಂತೋಷ ಸರಿ, ಸಂಭ್ರಮಾಚರಣೆ ಸರಿ. ಆದರೆ ಸರಿಯಾದ ತಯಾರಿ ಇಲ್ಲದೇ ಕಾರ್ಯಕ್ರಮ ನಡೆಸಿದ್ದು ತಪ್ಪು. ಇದಕ್ಕೆ ಕೆಎಸ್‌ಸಿಎ ಹಾಗೂ ಸರ್ಕಾರ ಈ ವಿಚಾರದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದೆ. ನಾವು ಹೆಸರು ತೆಗೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ತೀರ್ಮಾನ ತೆಗೆದುಕೊಳ್ಳುವಾಗ ಕೊಂಚ ಯೋಚಿಸಬೇಕಿತ್ತು. ಜನರ ಸಂಭ್ರಮ ಹೆಚ್ಚಿದೆ. ಹೆಚ್ಚು ಜನ ಬರ್ತಾರೆ, ಸಂಭ್ರಮಾಚರಣೆಗೆ ಜಾಗ ಸರಿ ಇದ್ಯಾ? ಎಲ್ಲಾ ಅನುಕೂಲ ಇದ್ಯಾ? ಅಂತ ನೋಡಬೇಕಿತ್ತು. ನನ್ನ ಪ್ರಕಾರ ಸರ್ಕಾರ ಹಾಗೂ ಕೆಎಸ್‌ಸಿಎ ಇಬ್ಬರದ್ದು ತಪ್ಪಿದೆ" ಎಂದಿದ್ದಾರೆ.
ಮಾತು ಮುಂದುವರೆಸಿರುವ ಮುಖ್ಯಮಂತ್ರಿ ಚಂಧ್ರು "ಆತುರದಿಂದ ಮರುದಿನವೇ ಸಂಭ್ರಮಾಚರಣೆ ಮಾಡುವ ಅವಶ್ಯಕತೆ ಇರಲಿಲ್ಲ. ಅವರಿಗೆ ಸರ್ಕಾರ ಸನ್ಮಾನ ಮಾಡಿ ಬಳಿಕ ನಿಧಾನವಾಗಿ ದೊಡ್ಡ ಕಾರ್ಯಕ್ರಮ ಮಾಡಬಹುದಿತ್ತು. ಎರಡೂ ಕಡೆ ಕಾರ್ಯಕ್ರಮ ಅಗತ್ಯ ಇರಲಿಲ್ಲ. ಬ್ಯಾಕ್ವೆಂಟ್ ಹಾಲ್‌ನಲ್ಲಿ ಆಟಗಾರರನ್ನು ಸನ್ಮಾನಿಸಿ ಬಳಿಕ ಬೇರೆ ಕಡೆ ದೊಡ್ಡ ಕಾರ್ಯಕ್ರಮ ಮಾಡಬಹುದಿತ್ತು. ಬಹಳ ಕ್ರೇಜ್ ಇದೆ, ಪ್ರವೇಶ ಉಚಿತ ಎಂದಮೇಲೆ ಜನ ಬರ್ತಾರೆ. ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತಲ್ಲ, ಹಾಗಾಗಿ ಇವರಿಬ್ಬರದ್ದೇ ಮಹಾಪರಾಧ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಕಷ್ಟು ಜನ ನಾಗರೀಕರ ಜವಾಬ್ದಾರಿ ಬಗ್ಗೆ ಮಾತನಾಡುತ್ತಿದ್ದಾರೆ. ನಟ ಕಿಶೋರ್ ಕೂಡ ಈ ಬಗ್ಗೆ ದನಿ ಎತ್ತಿದ್ದಾರೆ. ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಅಭಿಮಾನ ಹುಚ್ಚುತನಕ್ಕೆ ತಿರುಗಿದೆ. ಇದೇ ರೀತಿ ಅಭಿಮಾನಿಗಳು ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಿದ್ದರೆ ಬರುತ್ತಿದ್ರಾ? ಎಂದು ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತನಾಡಿ "ನಾಗರೀಕರು ಕೂಡ ಇದನ್ನು ಅರಿತುಕೊಳ್ಳಬೇಕು. ಟಿವಿಯಲ್ಲಿ ಅಷ್ಟು ಚೆನ್ನಾಗಿ ಕಾಣುವಾಗ ಅಲ್ಲಿಗೆ ಹೋಗುವುದು ಬೇಕಿರಲಿಲ್ಲ. ಇಂತಹ ಕಾರ್ಯಕ್ರಮದಲ್ಲಿ ಎಷ್ಟರಮಟ್ಟಿಗೆ ರಕ್ಷಣೆ ಸಿಗುತ್ತದೆ ಎಂದು ಜನ ತಿಳಿದುಕೊಂಡು ಹೋಗಬೇಕು" ಎಂದಿದ್ದಾರೆ.


Click it and Unblock the Notifications