ಭಾಷೆ ವಿಚಾರದಲ್ಲಿ ಕೇಂದ್ರದ ನಡೆ ಒಪ್ಪಲು ಸಾಧ್ಯವಿಲ್ಲ, ಜನಕ್ರಾಂತಿ ಆಗಬೇಕಿದೆ; ಮುಖ್ಯಮಂತ್ರಿ ಚಂದ್ರು
ಹಿಂದಿ ಹೇರಿಕೆ, ರಾಜ್ಯದಲ್ಲಿ ಪರಭಾಷಿಕರ ದರ್ಪ ಹೆಚ್ಚಾಗಿದೆ. ಕನ್ನಡಿಗರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ಹೋರಾಟಗಳು ಹೋರಾಟ ನಡೆಸುತ್ತಿವೆ. ಕಳೆದ ಒಂದು ತಿಂಗಳಲ್ಲಿ ಕನ್ನಡ ಭಾಷೆ, ಕರ್ನಾಟಕ, ಕನ್ನಡಿಗರ ಸುತ್ತಾ ನಡೆದ ಘಟನೆಗಳು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಿಗರು ಕನ್ನಡ ಹಾಡು ಹಾಡುವಂತೆ ಕೇಳಿದ್ದನ್ನು ಗಾಯಕ ಸೋನು ನಿಗಮ್ ಪಹಲ್ಗಾಮ್ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಇನ್ನು ಕೋಮಮಂಗಲದ ಹೋಟೆಲ್ ಎಲ್‌ಇಡಿ ಸ್ಕ್ರೀನ್‌ನಲ್ಲಿ ಕನ್ನಡಿಗರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದು ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡ ಮಾತನಾಡಲ್ಲ ಎಂದಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೆಲ್ಲದರ ನಡುವೆ ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಾಲಿವುಡ್ ನಟಿ ತಮನ್ನಾ ಅವರನ್ನು ಸರ್ಕಾರ ನೇಮಿಸಿರುವುದು ಕೂಡ ಟೀಕೆಗೆ ಗುರಿಯಾಗಿದೆ.

ಹೀಗೆ ಪದೇ ಪದೆ ಕನ್ನಡ ಭಾಷೆ, ಕನ್ನಡಿಗರಿಗೆ ಆಗುತ್ತಿರವ ಅವಮಾನದ ಬಗ್ಗೆ ಹಿರಿಯ ನಟ, ರಾಜಕೀಯ ಮುಖಂಡ ಮುಖ್ಯಮಂತ್ರಿ ಚಂದ್ರು ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕಿರುತೆರೆ ಧಾರಾವಾಹಿಯಲ್ಲಿ ಕೂಡ ಚಂದ್ರು ಬ್ಯುಸಿಯಾಗಿದ್ದಾರೆ. ಸದ್ಯ ಆಮ್ ಆದ್ಮಿ ಪಾರ್ಟಿಯಲ್ಲಿ ಅವರು ಗುರ್ತಿಸಿಕೊಂಡಿದ್ದು ಪಕ್ಷದ ರಾಜ್ಯಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಬಗ್ಗೆ ದಕ್ಷಿಣದ ರಾಜ್ಯಗಳು ಪದೇ ಪದೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಕರ್ನಾಟಕದಲ್ಲಿ ಈ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಪ್ರತಿಕ್ರಿಯಿಸಿ "ಹಿಂದಿ ಹೇರಿಕೆಯನ್ನು ನಾನು ಒಪ್ಪುವುದಿಲ್ಲ. ಆದರೆ ಹಿಂದಿ ಬಗ್ಗೆ ದ್ವೇಷ ನಮಗಿಲ್ಲ. ಭಾರತ ವಿವಿಧತೆಯಲ್ಲಿ ಏಕತೆ ಕಂಡ ದೇಶ. ವಿಭಿನ್ನ ಭಾಷೆ, ಸಂಸ್ಕೃತಿ, ಸಂಪ್ರದಾಯ, ಜಾತಿ ಇದ್ದರೂ ಏಕತೆ ಇದೆ. ಆದ್ರೆ ಪ್ರಧಾನಿ ಹಾಗೂ ಅವರ ಸುತ್ತಾಮುತ್ತ ಇರುವವರಿಗೆ ಹಿಂದಿಯ ವ್ಯಾಮೋಹ ಜಾಸ್ತಿಯಿದೆ. ಏಕದೇಶ, ಏಕಧರ್ಮ, ಏಕ ಚುನಾವಣೆ, ಏಕಭಾಷೆ ಎಂದು ಮಾಡಿ ದೇಶದಲ್ಲಿ ಹಿಂದಿ ಭಾಷಿಕರನ್ನು ಪ್ರಬಲರನ್ನಾಗಿ ಮಾಡಿ ದಕ್ಷಿಣದವರನ್ನು ತುಳಿಯುವ ಹುನ್ನಾರ ನಡೀತಿದೆ ಎಂದು ನನಗೆ ಅನ್ನಿಸುತ್ತಿದೆ" ಎಂದಿದ್ದಾರೆ.
"ಸ್ವತಂತ್ರ ಬಂದಾಗಲೂ ಎಲ್ಲಾ ಭಾಷೆಗಳನ್ನು ಗಣನೆಗೆ ತೆಗೆದುಕೊಂಡಿದ್ದರು. ದಕ್ಷಿಣದಲ್ಲಿ ಬಹುತೇಕ ಆಯಾ ರಾಜ್ಯ ರಾಜ್ಯಗಳಲ್ಲಿ ಆಯಾ ಭಾಷೆಗಳೇ ಪ್ರಮುಖವಾಗಿದೆ. ದಕ್ಷಿಣ ಭಾರತದವರು ರಾಜಕೀಯವಾಗಿ ಹಿಂದಿ ಬೆಲ್ಟ್‌ನವರ ವಿರುದ್ಧ ಪ್ರಬಲವಾಗಿದ್ದಾರೆ. ಇಂಗ್ಲೀಷ್ ಬಿಟ್ಟು ಹಿಂದಿಯನ್ನೇ ಎಲ್ಲಾ ಕಡೆ ಇಟ್ಟುಕೊಳ್ಳುವ ಪ್ರಯತ್ನ ನಡೀತಿದೆ. ಅದು ಈ ದೇಶದಲ್ಲಿ ಸಾಧ್ಯವಿಲ್ಲ. ಭಾಷೆ ಗೊತ್ತಿಲ್ಲದಿದ್ದರೆ ನಾವು ಗುಲಾಮಗಿರಿಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ" ಎಂದು ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಂದಾಪುರದ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು "ಕೇಂದ್ರದವರು ಗೊತ್ತಿದ್ದು ಇದನ್ನು ನಡೆಸುತ್ತಿದ್ದಾರೆ. ಇಂಥದ್ದು ಗೊತ್ತಾದರೆ ಛೀಮಾರಿ ಹಾಕಬೇಕು. ಲೋಕಲ್ ಭಾಷೆ ಗೊತ್ತಿದ್ದರೆ ಮಾತ್ರ ಸಿಬ್ಬಂದಿಯನ್ನು ನೇಮಿಸಬೇಕು. ಅದು ಬಿಟ್ಟು ಹೀಗೆ ಮಾಡಬಾರದು. ಇವರ ಉದ್ದೇಶವೇ ಏಕದೇಶ, ಏಕವ್ಯಕ್ತಿ ಎಂದು ಮಾಡಿಕೊಂಡು ಸರ್ವಾಧಿಕಾರದ ಧೋರಣೆಯನ್ನು ಪ್ರಧಾನಿ ಹಾಗೂ ಅಮಿತ್ ಶಾ ತೋರಿಸುತ್ತಿರುವುದು ಸರಿಯಲ್ಲ" ಎಂದು ಖಂಡಿಸಿದ್ದಾರೆ.
"ನಾವು ಹಿಂದೆ ತ್ರಿಭಾಷಾ ನೀತಿಯನ್ನು ಒಪ್ಪಿದ್ದೇ ತಪ್ಪು. ದ್ವಿಭಾಷಾ ನೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಇಂಗ್ಲೀಷ್ ವ್ಯವಹಾರಿಕ ಭಾಷೆ ಮತ್ತೊಂದು ಸ್ಥಳಿಯ ಭಾಷೆಯನ್ನು ಅಳವಡಿಸಿಕೊಳ್ಳಬೇಕಿದೆ. ನಾವು ದಕ್ಷಿಣದ ಎಲ್ಲಾ ರಾಜ್ಯದವರು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಪ್ರತಿನಿತ್ಯ ಕನ್ನಡದ ಬಗ್ಗೆ ಇಂತಹ ಘಟನೆಗಳು ನಡೆಯುತ್ತಿದೆ. ಕರ್ನಾಟಕ ಬಿಜೆಪಿ ಹಿಡಿತಕ್ಕೆ ಸಿಗದೇ ಇರುವುದಕ್ಕೆ ರಾಜಕೀಯವನ್ನು ಎಳೆದು ತರುತ್ತಿದ್ದಾರೆ. ತಮ್ಮ ವಶಕ್ಕೆ ತೆಗೆದುಕೊಳ್ಳಲು ಈ ರೀತಿಯ ಒತ್ತಡ ಹೇರುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಸೋನು ನಿಗಮ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿ "ಆ ವಿಚಾರದಲ್ಲಿ ಕ್ರಮಕೈಗೊಳ್ಳುವ ಬದಲು ಕೋರ್ಟ್ ಸ್ಟೇ ಕೊಟ್ಟುಬಿಡ್ತು. ಎಲ್ಲಾ ಕಡೆ ದಬ್ಬಾಳಿಕೆ. ಹಿಂದಿಯವರು ಎಲ್ಲಾ ಕಡೆ ಗುರ್ತಿಸಿಕೊಂಡಿರುವುದರಿಂದ ಅವರ ಅನುಕೂಲಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನಮ್ಮ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಜನಕ್ರಾಂತಿ ಆಗಬೇಕಾದ ಅನಿವಾರ್ಯತೆ ಇದೆ. ನಾವು ಬೇರೆ ದೇಶ ಮಾಡಿಕೊಳ್ಳಬೇಕಾಗುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಕೆ ಕೊಡಬೇಕಾದ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇನ್ನು ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ತಮನ್ನಾ ಆಯ್ಕೆಯ ಬಗ್ಗೆಯೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಪರ ಸಂಘಟನೆಗಳು ಈ ಬಗ್ಗೆ ಪ್ರತಿಭಟನೆ ನಡೆಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿ "ತಮನ್ನಾ ಆಯ್ಕೆ ಒಪ್ಪುವುದಕ್ಕೆ ಸಾಧ್ಯವಿಲ್ಲ. ತೀರ್ಮಾನ ಮಾಡುವವರಿಗೆ ಇಂತಹ ಚಪಲ, ತೀಟೆ ಇರಬಹುದು. ಆಕೆಗೆ 6 ಕೋಟಿ ರೂ. ಕೊಟ್ಟು ನೇಮಿಸುವ ಅವಶ್ಯಕತೆ ಇರಲಿಲ್ಲ. ಆಕೆಯನ್ನು ನೇಮಿಸಿದರೆ ಸೋಪ್ ಚೆನ್ನಾಗಿ ವ್ಯಾಪಾರ ಆಗುತ್ತದೆ ಎಂದು ಕಾರಣ ಕೊಡುತ್ತಾರೆ. ಯಾರದ್ದೋ ಹೆಸರಿನಿಂದ ವ್ಯಾಪಾರ ಮಾಡಲು ಸಾಧ್ಯವಿಲ್ಲ, ಕ್ವಾಲಿಟಿಯಿಂದ ಮಾಡಬೇಕು. ಕೂಡಲೇ ಇದನ್ನು ವಾಪಸ್ ಪಡೆಯದಿದ್ದರೆ ಹೋರಾಟ ನಡೆಸಿ ಸಚಿವರು ರಾಜಿನಾಮೆ ಪಡೆಯುವಂತೆ ಮಾಡಬೇಕಾಗುತ್ತದೆ" ಎಂದು ಮುಖ್ಯಮಂತ್ರಿ ಚಂದ್ರು ಎಚ್ಚರಿಕೆ ಕೊಟ್ಟಿದ್ದಾರೆ.
ತಮನ್ನಾ ಆಯ್ಕೆ ಬಗ್ಗೆ ಈಗಾಗಲೇ ಸಚಿವರಾದ ಎಂ. ಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಿಂದ ಹೊರಗೆ ದೊಡ್ಡಮಟ್ಟದಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ಅನ್ನು ತಲುಪಿಸುವ ಉದ್ಧೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲಿಗೆ ಕನ್ನಡದ ಕೆಲ ನಟಿಯರನ್ನು ಕೇಳಿದ್ದೆವು. ಅವರು ಬೇರೆ ಬೇರೆ ಕಾರಣಗಳಿಂದ ಸಾಧ್ಯವಿಲ್ಲ ಎಂದಾಗ ತಮನ್ನಾ ಅವರನ್ನು ಆಯ್ಕೆ ಮಾಡಿದ್ದೇವೆ. ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಫಾಲೋವರ್ಸ್ ಸಂಖ್ಯೆ ಕೂಡ ಜಾಸ್ತಿ ಇದು. ಇದನ್ನು ಕೂಡ ಪರಿಗಣಿಸಿ ಆಕೆಯನ್ನು ರಾಯಭಾರಿಯಾಗಿ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ.
ಮುಖ್ಯಮಂತ್ರಿ ಚಂದ್ರು ಕನ್ನಡದ ಹೆಸರಾಂತ ಕಲಾವಿದ. ಸಾಕಷ್ಟು ಸಿನಿಮಾ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅದಕ್ಕೂ ಮುನ್ನ ರಂಗಭೂಮಿಯಲ್ಲಿ ಗುರ್ತಿಸಿಕೊಂಡಿದ್ದರು. ಕಲಾ ಗಂಗೋತ್ರಿ ತಂಡದ ಸದಸ್ಯರಾಗಿದ್ದರು. 'ಮುಖ್ಯಮಂತ್ರಿ' ಎಂಬ ನಾಟಕದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 1979ರಲ್ಲಿ ಬಂದಿದ್ದ 'ಮುಯ್ಯಿ' ಅವರು ನಟಿಸಿದ ಚೊಚ್ಚಲ ಸಿನಿಮಾ. ಬಳಿಕ 'ಚಕ್ರವ್ಯೂಹ' ಚಿತ್ರದ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. ನೆಗೆಟಿವ್ ಹಾಗೂ ಹಾಸ್ಯ ಪಾತ್ರಗಳಲ್ಲಿ ಅವರು ನಟಿಸಿರುವುದೇ ಹೆಚ್ಚು.
ಜೀ ಕನ್ನಡ ವಾಹಿನಿಯ 'ಸೀತಾರಾಮ' ಧಾರಾವಾಹಿಯಲ್ಲಿ ಸೂರ್ಯ ಪ್ರಕಾಶ್ ದೇಸಾಯಿ ಪಾತ್ರದಲ್ಲಿ ಮುಖ್ಯಮಂತ್ರಿ ಚಂದ್ರು ಸದ್ಯ ನಟಿಸುತ್ತಿದ್ದಾರೆ. ಈ ವಾರವೇ ಆ ಧಾರಾವಾಹಿ ಕೊನೆಗೊಳ್ಳಲಿದೆ. ಇದರ ಬೆನ್ನಲ್ಲೇ ಕಲರ್ಸ್ ಕನ್ನಡ ವಾಹಿನಿಯ 'ಭಾಗ್ಯಲಕ್ಷ್ಮಿ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಕಥೆಗೆ ಟ್ವಿಸ್ಟ್ ಕೊಟ್ಟಿದ್ದು ಭಾಗ್ಯಳ ತಂಗಿ ಪೂಜಾ ಮದುವೆ ಆಗುವ ಹುಡುಗ ಕಿಶನ್ ತಂದೆಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಒಳ್ಳೆ ಪಾತ್ರಗಳು ಸಿಕ್ಕಾಗ ಸಿನಿಮಾಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಅತ್ತ ರಾಜಕೀಯರಂಗದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.


Click it and Unblock the Notifications