ಮುಗಿಯದ ಬಾಡಿಗೆ ಮನೆ ವಿವಾದ : ಯಶ್ ತಾಯಿ ವಿರುದ್ಧ ದೂರು ನೀಡಿದ ಮನೆ ಮಾಲಿಕ
ರಾಕಿಂಗ್ ಸ್ಟಾರ್ ಯಶ್ ಅವರ ಕತ್ರಿಗುಪ್ಪೆ ಬಾಡಿಗೆ ಮನೆ ವಿವಾದ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ವಿವಾದ ಶುರುವಾಗಿದೆ. ಹೈಕೋರ್ಟ್ ಆದೇಶದಂತೆ ಅದೃಷ್ಟದ ಮನೆಯನ್ನು ಯಶ್ ತೊರೆದು ಕೀ ಕೂಡ ವಾಪಸ್ ನೀಡಿದ್ದಾರೆ. ಆದರೆ, ಮನೆ ತೊರೆಯುವ ವೇಳೆಯಲ್ಲಿ ಮನೆ, ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಯಶ್ ಅವರ ತಾಯಿ ಪುಷ್ಪ ಹಾಗೂ ಕುಟುಂದ ಕೆಲವರ ವಿರುದ್ಧ ಪೊಲೀಸರಿಗೆ ಮನೆ ಮಾಲೀಕರು ದೂರು ನೀಡಿದ್ದಾರೆ.
ಯಶ್ ಬಾಡಿಗೆ ಮನೆ ಖಾಲಿ ಮಾಡುವಾಗ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಮಾಲೀಕ ಡಾ ಮುನಿಪ್ರಸಾದ್ ಅವರು ನಷ್ಟ ಪರಿಹಾರ ಕೋರಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ
ನಂತರ ಈ ಕುರಿತಂತೆ ನ್ಯಾಯಾಲಯದಲ್ಲಿ ದಾವೆ ಹೂಡಲು ನಿರ್ಧರಿಸಲಾಗುವುದು ಎಂದು ಮುನಿಪ್ರಸಾದ್ ಪರ ವಕೀಲ ಎಂ ಟಿ ನಾಣಯ್ಯ ಹೇಳಿದ್ದಾರೆ. ಕೋರ್ಟ್ ಆದೇಶದಂತೆ ಯಶ್, ತಮ್ಮ ಪರ ವಕೀಲರ ಮೂಲಕ ಶುಕ್ರವಾರದಂದು ಬಾಡಿಗೆ ಮನೆಯ ಕೀ ಹಾಗೂ ಎರಡು ತಿಂಗಳು ಬಾಡಿಗೆ ಮೊತ್ತವನ್ನು ಡಿಡಿ ರೂಪದಲ್ಲಿ ನೀಡಿ ಮನೆ ಮಾಲೀಕರ ವಕೀಲರಿಗೆ ತಲುಪಿಸಿದ್ದರು.

ಮನೆ ಕೀ ಸಿಕ್ಕ ಬಳಿಕ ವಕೀಲರ ಜೊತೆ ಮನೆ ನೋಡಲು ಹೋಗಿದ್ದೆವು. ಮನೆಯಲ್ಲಿ ವಾರ್ಡ್ರೋಬ್ ಬಾಗಿಲು ಮುರಿದಿದೆ, ಕಮೋಡ್ ಚೂರಾಗಿದೆ, ಅಡುಗೆ ಮನೆಯನನ್ನು ಕಿತ್ತು ಹಾಕಲಾಗಿದೆ. ಡಿಸೈನರ್ ಲೈಟಿಂಗ್ಸ್, ಸ್ವಿಚ್ ಬೋರ್ಡ್ ಸೇರಿ ಅನೇಕ ವಸ್ತುಗಳಿಗೆ ಭಾಗಶಃ ಹಾಗೂ ಸಂಪೂರ್ಣ ಹಾಳಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಷ್ಟ ಪರಿಹಾರಕ್ಕಾಗಿ ಕೋರಿ ದೂರು ನೀಡಲು ನಿರ್ಧರಿಸಿದೆವು ಎಂದು ಮನೆ ಮಾಲಿಕ ಹೇಳಿದ್ದಾರೆ. ಈ ವಿವಾದ ಇನ್ನು ಎಲ್ಲಿಗೆ ಹೋಗಿ ಮುಟ್ಟುತ್ತೊ ಗೊತ್ತಿಲ್ಲ.


Click it and Unblock the Notifications











