'ಮದಕರಿ' ವಿವಾದದ ಬಗ್ಗೆ ಮುನಿಸಿಕೊಂಡೆ ಮಾತನಾಡಿದ ಮುನಿರತ್ನ!
ಸಿನಿಮಾ ಎಂದ ಮೇಲೆ ವಿವಾದಗಳು ಇದ್ದೇ ಇರುತ್ತದೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿರುವ ಹೊಸ ವಿವಾದ 'ಮದಕರಿ ವಿವಾದ'. ಈ ವಿವಾದದ ಬಗ್ಗೆ ಈಗ ನಿರ್ಮಾಪಕ ಮುನಿರತ್ನ ಮಾತನಾಡಿದ್ದಾರೆ.
ನಟ ಸುದೀಪ್ ಹಾಗೂ ದರ್ಶನ್ ಇಬ್ಬರೂ ಈಗ ಚಿತ್ರದುರ್ಗದ ಹುಲಿ ಮದಕರಿ ನಾಯಕರ ಬಗ್ಗೆ ಎರಡು ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇವುಗಳಲ್ಲಿ ದರ್ಶನ್ ಮದಕರಿ ನಾಯಕರ ಪಾತ್ರ ಮಾಡಬಾರದು ಎಂದು ಕೆಲವು ಜಾತಿವಾದಿಗಳು ಒತ್ತಾಯ ಮಾಡುತ್ತಿದ್ದಾರೆ.
ದರ್ಶನ್ ಅವರ 'ಜಾತಿ' ಬೇರೆಯಾಗಿದ್ದು, ಅವರು ಮದಕರಿ ನಾಯಕರ ಬಗ್ಗೆ ಸಿನಿಮಾ ಮಾಡಬಾರದು ಹಾಗೂ ಸುದೀಪ್ ಬಿಟ್ಟು ಬೇರೆ ಜಾತಿಯ ಯಾವುದೇ ನಟರು ಈ ಪಾತ್ರ ಮಾಡಿದರು ನಾವು ವಿರೋಧ ಮಾಡುತ್ತೇವೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಹೀಗಿರುವಾಗ, ಇದೀಗ ಈ ವಿವಾದ ಕುರಿತು ನಿರ್ಮಾಪಕ ಮುನಿರತ್ನ ಗರಂ ಆಗಿದ್ದಾರೆ. ಮುಂದೆ ಓದಿ...

ಸಿನಿಮಾಗೆ ಜಾತಿ ತರುವುದು ಬೇಡ
''ರಾಜಕೀಯದಲ್ಲಿ ಜಾತಿ ಬಂದು ಹಾಳಾಗಿದೆ. ಈಗ ಸಿನಿಮಾಗೆ ಜಾತಿ ತರುವುದು ಬೇಡ. ಕಲೆಯನ್ನ ಕಲೆಯಾಗಿ ನೋಡಬೇಕು. ಕಲೆಗೆ ಜಾತಿ ಇಲ್ಲ. ಜಾತಿಯನ್ನು ಬಿಂಬಿಸೋದು ತಪ್ಪು.'' ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು ಮುನಿರತ್ನ ಜಾತಿವಾದಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ದರ್ಶನ್, ಸುದೀಪ್ ಇಬ್ಬರೂ ಸಿನಿಮಾ ಮಾಡುಬೇಕು
''ಈಗ ಜಾತಿಯ ನಂಟು ಇಲ್ಲಿ ಇರಬಾರದು. ಜಾತಿಯನ್ನು ಬಿಟ್ಟು ದರ್ಶನ್, ಸುದೀಪ್ ಇಬ್ಬರೂ ಸಿನಿಮಾ ಮಾಡುಬೇಕು. ಇಬ್ಬರ ಕಥೆ ರಿಪೀಟ್ ಆಗದೆ, ಬೇರೆ ಬೇರೆ ರೀತಿಯಲ್ಲಿ ಇರಲಿ. ಜನರು ಜಾತಿಯ ಆಧಾರದಿಂದ ಸಿನಿಮಾವನ್ನು ನೋಡಬಾರದು.'' - ಮುನಿರತ್ನ, ನಿರ್ಮಾಪಕ

ರಾಜ್ಕುಮಾರ್ ಕಾಲದಲ್ಲಿ ಅನೇಕ ಸಿನಿಮಾಗಳು ಬಂದಿವೆ
''ರಾಜ್ಕುಮಾರ್ ಅವರ ಕಾಲದಲ್ಲಿ ಅನೇಕ ಸಿನಿಮಾಗಳು ಮೂಡಿಬಂದವು. ಆಗ ಜಾತಿ ಇರಲಿಲ್ಲ. ಸಿನಿಮಾವನ್ನ ಚೆನ್ನಾಗಿ ಮಾಡಿ ಪ್ರೇಕ್ಷಕರ ಮನ ಗೆಲ್ಲಬೇಕು.'' ಎಂದು ಮುನಿರತ್ನ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದ್ದಾರೆ.

ಪ್ರಸನ್ನಾನಂದ ಪುರಿ ಸ್ವಾಮೀಜಿ ವಿರೋಧ
''ಸುದೀಪ್ ಬಿಟ್ಟು ಬೇರೆಯವರು ಮದಕರಿ ನಾಯಕನ ಬಗ್ಗೆ ಸಿನಿಮಾ ಮಾಡಿದ್ರೆ ನಾವು ವಿರೋಧಿಸುತ್ತೇವೆ. ಪ್ರತಿಭಟನೆ ಮಾಡ್ತೀವಿ, ಅಗತ್ಯ ಬಿದ್ದರೇ ಕೋರ್ಟ್ ಮೊರೆ ಹೋಗುತ್ತೇವೆ'' ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಇನ್ನು ವಾಲ್ಮೀಕಿ ಸ್ವಾಮೀಜಿ ಅವರ ಮಾತಿಗೆ ಕೆಲವರು ಬೆಂಬಲ ವ್ಯಕ್ತಪಡಿಸಿದ್ದು, ಸುದೀಪ್ ಅವರೇ ಮದಕರಿ ನಾಯಕನಾಗಬೇಕೆಂದು ಹೇಳುತ್ತಿದ್ದಾರೆ.

ಅನೇಕರ ಅಭಿಪ್ರಾಯ ಇದು
ಇನ್ನು ಕೆಲವರು ಜಾತಿಯಿಂದ ಸಿನಿಮಾ ಮಾಡುವುದಾರೇ ಅದು ಒಳ್ಳೆಯ ಬೆಳವಣಿಗೆಯಲ್ಲ. ಕಲೆಗೆ ಜಾತಿ ಬೇಕಿಲ್ಲ. ಮದಕರಿ ನಾಯಕ ಕರ್ನಾಟಕದ ಶ್ರೇಷ್ಠ ನಾಯಕರಲ್ಲಿ ಒಬ್ಬ. ಯಾರಾದರೂ ಮಾಡಲಿ, ಚೆನ್ನಾಗಿ ತೆರೆಮೇಲೆ ತರಲಿ ಎನ್ನುವುದು ಮಾತ್ರ ಪ್ರೇಕ್ಷಕರ ಆಶಯವಾಗಿರಬೇಕು ಎಂದು ಅಭಿಪ್ರಾಯ ಪಟ್ಟವರು ಇದ್ದಾರೆ.


Click it and Unblock the Notifications











