ತಮ್ಮ ಆರೋಗ್ಯದ ಕುರಿತು ಹಂಸಲೇಖ ಪತ್ರದ ಮೂಲಕ ಹೇಳಿದ್ದೇನು?
ನಾದಬ್ರಹ್ಮ ಹಂಸಲೇಖ ಅವರ ಆರೋಗ್ಯದಲ್ಲಿ ವ್ಯತ್ಯಯ ಆಗಿದೆ ಎನ್ನುವ ಬಗ್ಗೆ ಸುದ್ದಿಗಳು ಹಬ್ಬುತ್ತಿವೆ. ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಹಂಸಲೇಖ ಅವರು ಪ್ರತಿಕ್ರಿಯೆ ನೀಡಿದ್ದು, ಆರೋಗ್ಯವಾಗಿದ್ದೇನೆ ಎನ್ನುವ ಸಂದೇಶ ಪತ್ರದ ಮೂಲಕ ತಿಳಿಸಿದ್ದಾರೆ. ಅಲ್ಲದೆ, ಅವರ ಬಗ್ಗೆ ಕಾಳಜಿ ವಹಿಸಿದ ಸರ್ಕಾರಕ್ಕೆ, ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಹಂಸಲೇಖ ಅವರು ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪೇಜಾವರ ಶ್ರೀಕುರಿತು ನೀಡಿದ ಹೇಳಿಕೆ ತೀವ್ರ ವಿವಾದ ಉಂಟುಮಾಡಿತ್ತು. ಬಳಿಕ ಅವರ ವಿರುದ್ಧ ದೂರು ಸಹ ದಾಖಲಾಗಿತ್ತು. ಬಸವನಗುಡಿ ಪೊಲೀಸರು ವಿಚಾರಣೆಗೂ ಬರುವಂತೆ ನೋಟಿಸ್ ನೀಡಿದ್ದರು. ಆದರೆ, ಹಂಸಲೇಖ ಅವರು ಬೆಂಗಳೂರಿನಲ್ಲಿ ಇರಲಿಲ್ಲ. ಇದರಿಂದಾಗಿ ಪೊಲೀಸರು ಹಂಸಲೇಖ ಅವರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಬಂದಿದ್ದರು. ಈ ಮಧ್ಯೆ ಹಂಸಲೇಖ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂಬ ಸುದ್ದಿ ಸಹ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಹಂಸಲೇಖ ಪತ್ರ ಬರೆದು ತಮ್ಮ ಆರೋಗ್ಯದ ಕುರಿತು ವಿವರಣೆ ನೀಡಿದ್ದಾರೆ.

'ನಾನು ಆರೋಗ್ಯವಾಗಿದ್ದೀನಿ': ಹಂಸಲೇಖ
"ನಮಸ್ಕಾರ, ನಾನು ಆರೋಗ್ಯವಾಗಿದ್ದೀನಿ. ನನಗೆ ಆರೋಗ್ಯ ಸರಿ ಇಲ್ಲ ಅಂತ ಇಡೀ ಕರ್ನಾಟಕದಿಂದ ಕರೆಗಳು ಬಂದಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತಾಗಿದೆ ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು. ಈ ಪ್ರೀತಿ ಪಡೆಯೋಕೆ ನಾನು ತುಂಬಾನೆ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖ ಇವತ್ತು ಅನುಭವಿಸುತ್ತಿದ್ದೀನಿ" ಎಂದು ಪತ್ರದ ಆರಂಭದಲ್ಲಿ ಬರೆದುಕೊಂಡಿದ್ದಾರೆ.

"ನಾನು ಕೇಳದೇ ಸಾಕಷ್ಟು ಪ್ರೀತಿ ಕೊಟ್ಟಿದ್ದೀರಿ": ಹಂಸಲೇಖ
"ನಾನು ಕೇಳದೆ ನನ್ನ ಮನೆಗೆ ಸರ್ಕಾರ ಭದ್ರತೆ ಕೊಟ್ಟಿದೆ . ನಾನು ಕೇಳದೆ ಇಡೀ ಕರ್ನಾಟಕದಲ್ಲಿ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದ್ದಾರೆ" ಎಂದು ಬರೆದುಕೊಂಡಿದ್ದಾರೆ ಹಂಸಲೇಖ.

ಅಭಿಮಾನ ಆವೇಶವಾಗಬಾರದು ಎಂದ ನಾದಬ್ರಹ್ಮ!
"ಅಭಿಮಾನ ಆವೇಶವಾಗಬಾರದು.. ಆವೇಶ ಅವಘಡಗಳಿಗೆ ಕಾರಣವಾಗಬಾರದು.. ಅಭಿಮಾನ ಹಾಡಿನಂತೆ ಇರಬೇಕು, ಹಾಡು ಕೇಳಿಸುತ್ತದೆ. ಮುಟ್ಟಿಸುತ್ತದೆ. ನಿಮ್ಮ ಪ್ರೀತಿ ನನಗೆ ತಲುಪಿದೆ. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದ ನಮಸ್ಕಾರಗಳು. ನಿಮ್ಮ ಹಂಸಲೇಖ' ಎಂದು ಹಂಸಲೇಖ ಅವರು ಬರೆದುಕೊಂಡಿದ್ದಾರೆ.

ಆರೋಗ್ಯವಾಗಿದ್ದಾರೆ ಹಂಸಲೇಖ!
ಪೇಜಾವರ ಶ್ರೀಗಳ ಹೆಸರು ಬಳಸಿದ್ದು ವಿವಾದಕ್ಕೆ ಕಾರಣ ಆಗಿತ್ತು. ವಿವಾದದ ಬಳಿಕ ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ವಿವಾದದ ಬಗ್ಗೆ ಚರ್ಚೆಗಳು ಇನ್ನೂ ನಡೆಯುತ್ತಲೇ ಇವೆ. ಈ ಮಧ್ಯೆ ಹಂಸಲೇಖ ಅವರ ಆರೋಗ್ಯ ಸರಿ ಇಲ್ಲ ಎನ್ನುವ ಬಗ್ಗೆ ಸುದ್ದಿಗಳು ಹಬ್ಬುತ್ತಿವೆ. ಈ ವಿಚಾರವಾಗಿ ಹಂಸಲೇಖ ಅವರು ಪ್ರತಿಕ್ರಿಯೆ ನೀಡಿದ್ದು, ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.


Click it and Unblock the Notifications











