ಮೇಕಿಂಗ್ ಹಂತದಲ್ಲೇ 'ಎಕ್ಕ' ಭರ್ಜರಿ ಬ್ಯುಸಿನೆಸ್; 'ಎಕ್ಕ' ಮಾರ್ ಮಾರ್
ಯುವರಾಜ್‌ಕುಮಾರ್ ನಟನೆಯ 2ನೇ ಸಿನಿಮಾ 'ಎಕ್ಕ' ಶೂಟಿಂಗ್ ಭರದಿಂದ ಸಾಗಿದೆ. ಈಗಾಗಲೇ 10 ದಿನ ಚಿತ್ರೀಕರಣ ಸದ್ದಿಲ್ಲದೇ ಮುಗಿದಿದೆ. ಜೂನ್ 6ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಹಾಗಾಗಿ ಆದಷ್ಟಯ ಬೇಗ ಶೂಟಿಂಗ್ ಮುಗಿಸುವ ಲೆಕ್ಕಾಚಾರದಲ್ಲಿದೆ ಚಿತ್ರತಂಡ.
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಕಂಬೈನ್ಸ್ ಬ್ಯಾನರ್‌ಗಳ ಅಡಿಯಲ್ಲಿ 'ಎಕ್ಕ' ಸಿನಿಮಾ ನಿರ್ಮಾಣ ಆಗುತ್ತಿದೆ. ಟೈಟಲ್‌ಗೆ ತಕ್ಕಂತೆ ಪಕ್ಕಾ ರಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಖಡಕ್ ಫೋಟೊಶೂಟ್ ಮಾಡಿಸಿ ಸಿನಿಮಾ ಅನೌನ್ಸ್ ಮಾಡಲಾಗಿತ್ತು. ಬಳಿಕ ಸಣ್ಣ ಟೀಸರ್ ಸಹ ಬಂದಿತ್ತು. ಕಳೆದ ವರ್ಷ 'ಯುವ' ಆಗಿ ರಾಘಣ್ಣ ಕಿರಿಮಗ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. ಈ ವರ್ಷ 'ಎಕ್ಕ' ದರ್ಶನ ಮಾಡಿಸಲಿದ್ದಾರೆ.

ಇತ್ತೀಚೆಗೆ ಪುನೀತ್ ರುದ್ರನಾಗ್ 'ಎಕ್ಕ' ತಂಡ ಸೇರಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸಿದ್ದಾಪುರ ಸುತ್ತಾಮುತ್ತ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. 'ರತ್ನನ್ ಪ್ರಪಂಚ' ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ರೋಹಿತ್ ಪದಕಿ 'ಎಕ್ಕ' ಚಿತ್ರದ ಸಾರಥ್ಯ ವಹಿಸಿದ್ದಾರೆ. ಧನಂಜಯ್ ನಟನೆಯ 'ಉತ್ತರಕಾಂಡ' ಚಿತ್ರ ಶುರು ಮಾಡಿದ್ದ ರೋಹಿತ್ ಸದ್ಯ ಅದನ್ನು ಪಕ್ಕಕ್ಕಿಟ್ಟಿದ್ದಾರೆ.
ಸದ್ಯ 'ಎಕ್ಕ' ಚಿತ್ರದ ಆಡಿಯೋ ರೈಟ್ಸ್ ಬಗ್ಗೆ ಸುದ್ದಿ ಬಂದಿದೆ. ಆನಂದ್ ಆಡಿಯೋ ಸಂಸ್ಥೆಗೆ ರೈಟ್ಸ್ ಮಾರಾಟವಾಗಿದೆ. ಈ ವಿಚಾರವನ್ನು ಅಧಿಕೃತವಾಗಿ ಚಿತ್ರತಂಡ ಹಂಚಿಕೊಂಡಿದೆ. 'ಎಕ್ಕ' ಕಾಂಬಿನೇಷನ್ ಭಾರೀ ಕುತೂಹಲ ಮೂಡಿಸಿದೆ. ಅದಕ್ಕೆ ತಕ್ಕಂತೆ ಆಡಿಯೋ ರೈಟ್ಸ್ ಡೀಲ್ ಕುದುರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹಾಕುತ್ತಿದ್ದಾರೆ.
ದೀಪಾವಳಿ, ರಾಜ್ಯೋತ್ಸವ ಸಂಭ್ರಮದಲ್ಲಿ 'ಎಕ್ಕ' ಸಿನಿಮಾ ಘೋಷಣೆ ಆಗಿತ್ತು. ಬಂಡೆಕಾಳಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿತ್ತು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಸಂಪದಾ ಅದರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ 3 ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಕಿರುತೆರೆ ಧಾರಾವಾಹಿಯಲ್ಲಿ ಸಹ ಮಿಂಚಿದ್ದಾರೆ.
'ಎಕ್ಕ' ಚಿತ್ರದ ಪೋಸ್ಟರ್, ಟೀಸರ್ ಝಲಕ್ ನೋಡುತ್ತಿದ್ದರೆ ಇದು ಪಕ್ಕಾ ರಾ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಟೈಟಲ್‌ನಿಂದಲೇ ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'ಯುವ' ಚಿತ್ರದಲ್ಲೂ ಆಕ್ಷನ್ ಹೀರೋ ಆಗಿ ಅಣ್ಣಾವ್ರ ಮೊಮ್ಮಗ ನಟಿಸಿದ್ದರು. ಯುವ ಡ್ಯಾನ್ಸ್ ಹಾಗೂ ಸ್ಟಂಟ್ಸ್ ಬಗ್ಗ ಒಳ್ಳೆ ಮಾತುಗಳು ಕೇಳಿಬಂದಿತ್ತು. ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಆಕ್ಷನ್ ಹೀರೊ ಸಿಕ್ಕ ಎಂದು ಸಿನಿರಸಿಕರು ಹೇಳಿದ್ದರು. ಇದೀಗ ಮತ್ತೆ ಖಡಕ್ ಅವತಾರದಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ.
ಮೊದಲ ಸಿನಿಮಾ ಬಳಿಕ ಯುವ ರಾಜ್‌ಕುಮಾರ್ ಸಾಕಷ್ಟು ಕಥೆಗಳನ್ನು ಕೇಳಿದ್ದರು. ಆದರೆ ಎಲ್ಲವನ್ನು ಬಿಟ್ಟು ಕೊನೆಗೆ 'ಎಕ್ಕ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ನರ್ತನ್ ನಿರ್ದೇಶನದಲ್ಲೂ ಸಿನಿಮಾ ಬರುತ್ತದೆ ಎನ್ನುವ ಊಹಾಪೋಹ ಶುರುವಾಗಿತ್ತು. ಆದರೆ ಸುಳ್ಳಾಗಿತ್ತು. ಇನ್ನು 'ಯುವ ರಣಧೀರ ಕಂಠೀರವ' ಚಿತ್ರದ ಮೂಲಕ ರಾಘಣ್ಣನ ಮಗ ಹೀರೊ ಆಗಿ ಚಿತ್ರರಂಗಕ್ಕೆ ಬರಬೇಕಿತ್ತು. ಆದರೆ ಸಿನಿಮಾ ನಿಂತು ಹೋಗಿದೆ.
'ಯುವ ರಣಧೀರ ಕಂಠೀರವ' ಚತ್ರಕ್ಕೆ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳಬೇಕಿದೆ. ಶೋ ರೀಲ್ ಕೂಡ ಶೂಟ್ ಮಾಡಿ ರಿಲೀಸ್ ಮಾಡಿದ್ದರು. ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕೆಲ ಅಭಿಮಾನಿಗಳು ಇವತ್ತಿಗೂ ಆ ಸಿನಿಮಾ ಮಾಡುವಂತೆ ಕೇಳುತ್ತಲೇ ಇದ್ದಾರೆ. 'ಎಕ್ಕ' ಚಿತ್ರದಲ್ಲಿ ಭೂಗತ ಲೋಕದ ಕಥೆಯಿದೆ. ದುಷ್ಟರಿಂದ ದೌರ್ಜನ್ಯಕ್ಕೊಳಗಾದ ಯುವಕ ಇಡೀ ಮಾಫಿಯಾವನ್ನು ನಿರ್ನಾಮ ಮಾಡುವ ಎಳೆ ಚಿತ್ರದಲ್ಲಿದೆ.


Click it and Unblock the Notifications











