Hamsalekha: ಕಾವೇರಿ ಸಮಸ್ಯೆ ಬಗೆಹರಿಸಲು ಮಾಸ್ಟರ್ ಐಡಿಯಾ ಕೊಟ್ಟ ನಾದಬ್ರಹ್ಮ ಹಂಸಲೇಖ
ನೂರಾರು ವರ್ಷಗಳಿಂದ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಬಾರಿ ವಾಡಿಕೆಯಂತೆ ಮಳೆಯಾಗದೇ ನೀರಿನ ಅಭಾವ ಎದುರಾಗಿದೆ. ಆದರೂ ಕೂಡ ಸುಪ್ರೀಂ ಕೋರ್ಟ್ ತೀರ್ಪಿನಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ.
ಹಲವು ಭಾರೀ ಕಾವೇರಿ ಕಿಚ್ಚಿಗೆ ಹೋರಾಟಗಳು ನಡೆದಿದೆ. ಕೆಲವೊಮ್ಮೆ ಹೋರಾಟ ತೀವ್ರ ಸ್ವರೂಪ ಪಡೆದು ಕೆಲವರು ಪ್ರಾಣ ತೆತ್ತ ಉದಾಹರಣೆಗಳು ಇವೆ. ದಶಕಗಳೇ ಉರುಳಿದರೂ ಎಷ್ಟೇ ಸರ್ಕಾರಗಳು ಬದಲಾದರೂ ಈ ಸಮಸ್ಯೆಗೆ ಮಾತ್ರ ಪರಿಹಾರ ಸಿಗುತ್ತಿಲ್ಲ. ಮಳೆ ಚೆನ್ನಾಗಿದ್ದರೆ ಈ ಸಮಸ್ಯೆ ತಲೆದೋರುವುದೇ ಇಲ್ಲ. ಕೇಳಿದ್ದಕ್ಕಿಂತ ಹೆಚ್ಚಿನ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಆದರೆ ಮಳೆ ಕೈಕೊಟ್ಟರೆ ಮಾತ್ರ ಈ ರೀತಿ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸದ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಒಂದೇ ವಾರದಲ್ಲಿ 2 ಬಂದ್‌ಗಳು ನಡೆದಿವೆ.

ನಿನ್ನೆಯ (ಸೆಪ್ಟೆಂಬರ್ 29) ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಕೂಡ ಬೆಂಬಲ ಸೂಚಿಸಿತ್ತು. ಫಿಲ್ಮ್ ಚೇಂಬರ್ ಕಚೇರಿ ಬಳಿ ಹಾಕಿದ್ದ ವೇದಿಕೆ ಕೂತು ಸ್ಟಾರ್ ಕಲಾವಿದರು ಪ್ರತಿಭಟನೆ ನಡೆಸಿದರು. ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್, ಉಪೇಂದ್ರ ಸೇರಿದಂತೆ ಹಲವರು ಈ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ಲೂಸ್ ಮಾದ ಯೋಗಿ, ಅನಿರುದ್ದ್, ಪೂಜಾ ಗಾಂಧಿ, ಹಿರಿಯ ನಟ ಶ್ರೀನಾಥ್, ಉಮಾಶ್ರೀ, ಪದ್ಮಾ ವಾಸಂತಿ, ಸುಂದರ್ ರಾಜ್, ರೂಪಿಕಾ, ರವಿ ಚೇತನ್, ಶ್ರೀನಿವಾಸ್ ಮೂರ್ತಿ, ನವೀನ್ ಕೃಷ್ಣ, ಲಹರಿ ವೇಲು, ಧರ್ಮ ಕೀರ್ತಿ ರಾಜ್, ಅನು ಪ್ರಭಾಕರ್, ರಘು ಮುಖರ್ಜಿ, ಚಿಕ್ಕಣ್ಣ, ಸುಂದರ್ ರಾಜ್ ಸೇರಿದಂತೆ ಹಲವರು ಹಾಜರಾಗಿದ್ದರು.
ನಾದಬ್ರಹ್ಮ ಹಂಸಲೇಖ ಪ್ರತಿಭಟನೆ ಸಭೆ ಉದ್ದೇಶಿಸಿ ಮಾತನಾಡಿದರು. ಕಾವೇರಿ ಸಮಸ್ಯೆಗೆ ಒಂದು ಪರಿಹಾರವನ್ನು ಸೂಚಿಸಿದರು. "10ನೇ ಶತಮಾನದಲ್ಲಿ ಒಂದು ಶಿಲಾ ಶಾಸನದಲ್ಲಿ "ಕಾವೇರಿ ಕಾಲುವೆಯನ್ ಕಡಂಗೊತ್ತಿಗಳನ್" ಅಂತ ಬರೆದಿದ್ದಾರೆ. ಅಂದ್ರೆ 10ನೇ ಶತಮಾನದಲ್ಲಿ ಆ ತಿಗಳನ್ ಕಾವೇರಿ ನದಿಯನ್ನು ಅಡಮಾನ ಇಟ್ಟುಕೊಂಡಿದ್ನಾ? ಅಂತ ಒಂದು ಶಾಸನ ಇದೆ. ಅಂದ್ರೆ 10ನೇ ಶತಮಾನದಿಂದಲೂ ಈ ನೀರಿನ ಸಮಸ್ಯೆ ಇದೆ"
"ಈ ನೀರಿನ ಸಮಸ್ಯೆ ಬಗೆಹರಿಸುವುದು ಕಲಾವಿದರಲ್ಲ. ಕಲಾವಿದರು ದೊಡ್ಡ ಮನಸ್ಸು ಮಾಡಿ ಯಾವ ರೀತಿ ಈ ಸಮಸ್ಯೆ ಬಗೆಹರಿಸಬೇಕು ಅನ್ನೋದಕ್ಕೆ ಒಂದು ಸ್ಕ್ರಿಪ್ಟ್ ಕೊಡಿ. ಒಂದು ಸ್ಕ್ರಿಪ್ಟ್ ಕೊಟ್ಟು ಈ ರೀತಿಯ ಮಾರ್ಗದಲ್ಲಿ ಈ ಬಿಕ್ಕಟ್ಟು ಪರಿಹರಿಸಬಹುದು ಎಂದು ಒಂದು ಸಿನಿಮಾ ಮಾಡಿ. ಸಿನಿಮಾ ಮೂಲಕ ಎಲ್ಲಾ ಕಲಾವಿದರು ಆ ಮಾರ್ಗಸೂಚಿಗೆ ಮುದ್ರೆ ಹಾಕಿ."
"ಇಲ್ಲಿ ಎರಡು ವಿಚಾರ ಇದೆ. ಸಂಸತ್ತು ಮತ್ತು ನಾಡಿನ ಸಂಪತ್ತು. ಸಂಸತ್ತಿಗೆ ನಾಡಿನ ಸಂಪತ್ತಿದೆ, ಅದರಲ್ಲಿ ನಮ್ಮ ಜಲ ಇದೆ. ಈ ಜಲ ಸಂಪತ್ತು ನಿರ್ಣಯ ಆಗುವುದು ಸಂಸತ್ತಿನಲ್ಲಿ. ಅಲ್ಲೇ ಇದಕ್ಕೆ ಪರಿಹಾರ ಸಾಧ್ಯ. ಅದು ಹೇಗೆ ಪರಿಹಾರ ಸಾಧ್ಯ ಎನ್ನುವುದನ್ನು ಸಿನಿಮಾ, ಕಲೆ ಮುಖಾಂತರ ಸರ್ಕಾರಗಳಿಗೆ ಎಲ್ಲಾ ಪ್ರಜಾಪ್ರತಿನಿಧಿಗಳಿಗೆ ಅರ್ಥ ಮಾಡಿಸಬೇಕು. ನಾವು ಸಾಂಸ್ಕೃತಿಕವಾಗಿ ಬಂದವರು. ಇನ್ನೇನು ಮಾಡಲು ಸಾಧ್ಯ."
"ಜಲ ಎನ್ನುವ ಸಿನಿಮಾ. ನಿರ್ಮಾಣ ವಾಣಿಜ್ಯ ಮಂಡಳಿ. ಸ್ಟ್ರಿಪ್ಟ್ ನಾವು ಮಾಡ್ತೀವಿ. ಎಲ್ಲಾ ಚಂದನವನದ ಕಲಾವಿದರು ಈ ಸಂಸತ್ತು, ಸಂಪತ್ತು ಇದರ ನಡುವೆ ಜಲ ಉಳಿಸುವ ಮಾರ್ಗವನ್ನು ನಾವು ಸಿನಿಮಾ ಮಾಡಿ ಮಾರ್ಗದರ್ಶನವಾಗಿ ಕೊಡೋಣ. ಅದನ್ನು ನೋಡಿಕೊಂಡು ಜನ ಹೋರಾಡಲಿ, ಒಗ್ಗಟ್ಟಾಗಲಿ. ಕುವೆಂಪು ಭಾರತ ಜನನಿಯ ತನುಜಾತೆ ಎಂದು ಬರೆದಿದ್ದಾರೆ. ಭಾರತ ಮಾತೆಗೆ ನಮ್ಮನ್ನು ಸೇರಿ 29 ಜನ ತನುಜಾತೆಯರು. ನಮಗೆ ಸಮಸ್ಯೆ ಆದರೆ ತಾಯಿ ತಾನೇ ನೋಡಬೇಕು. ಸಂಸತ್ತಿನಲ್ಲಿ ನಮ್ಮ ಬಿಕ್ಕಟ್ಟು ಇದೆ. ಅದನ್ನು ಪರಿಹಾರ ಮಾರ್ಗವನ್ನು ನಾವು ಒಂದು ಸ್ಕ್ರಿಪ್ಟ್ ಮಾಡಿ ಸಿನಿಮಾ ಮಾಡೋಣ" ಎಂದು ಹಂಸಲೇಖ ಹೇಳಿದ್ದಾರೆ.


Click it and Unblock the Notifications