ಆ್ಯಕ್ಷನ್ ಚಿತ್ರಗಳ ಮೂಲಕ ಪ್ರೇಕ್ಷಕನ ಹಿಡಿದಿಟ್ಟ ಕೋಟಿ ನಿರ್ಮಾಪಕ
ನಿಮಗೆ ಉಪ್ಪಿಯ ಅನನ್ಯ ಕಾಣಿಕೆ 'ಓಂ" ನೆನಪಿರಬೇಕು. ಅದರಲ್ಲಿ ನಿಜವಾದ ರೌಡಿಗಳನ್ನು ತೆರೆಗೆ ತಂದು ಶಹಭಾಸ್‌ಗಿರಿ ಜೊತೆಗೆ ಟೀಕೆ-ಟಿಪ್ಪಣಿಯನ್ನೂ ಉಪ್ಪಿ ಪಡೆದಿದ್ದರು. ಆಗ ಅವರು ನಾಯಕನಾಗಿರಲಿಲ್ಲ. ಈಗಲೋ ಎಲ್ಲರಿಗೂ ಅವರ ಕಾಲ್‌ಷೀಟು. ಎಚ್‌ಟೂಓ ಎಂಬ ನೀರಿನಾಟದ ನಡುವೆ ರಾಮು ಪ್ರೊಜೆಕ್ಟ್ 'ಹಾಲಿವುಡ್" ಮರೆತುಹೋಯಿತು. ಬಾವ ಬಾಮೈದ ಎಂಬ ಸುಮಾರಾದ ರೀಮೇಕ್ ಚಿತ್ರ ನಿರ್ಮಿಸಿ, ಇನ್ನು ಮುಂದೆ ಇಂಥಾ ಕೆಲಸ ಮಾಡಲ್ಲ ಎಂದಿರುವ ರಾಮು ಇದೇ ಉಪ್ಪಿ ಜೊತೆ ಮಾಡಹೊರಟಿದ್ದಾರೆ ಹೋಮ; ಭೂಗತ ದೊರೆ ಮುತ್ತಪ್ಪ ರೈ ಕುರಿತ ಕತೆಯ ಸಿನಿಮಾ ಹೋಮ. ಅಂದರೆ ಉಪ್ಪಿ- ರಾಮು ಸಂಬಂಧ ಹಳಸಿಲ್ಲ.
ಲಾಕಪ್‌ಡೆತ್, ಎಕೆ 47, ಸಿಂಹದಮರಿ. ಚಾಮುಂಡಿಯಂಥಾ ಭರ್ಜರಿ ಆ್ಯಕ್ಷನ್ ಚಿತ್ರಗಳನ್ನು ಕೊಟ್ಟಿರುವ ರಾಮು ಕೇವಲ ಥೈಲಿವಾಲ ಅಷ್ಟೇ ಅಲ್ಲ; ಸಾಹಸವನ್ನೇ ಬಿಗಿಯಾಗಿಸಿ, ಪ್ರೇಕ್ಷಕನ ಹಿಡಿದಿಡಬಲ್ಲ ಸಾಹಸಿ. ಅವರ ಈ ವರಸೆ ವರದಾನವಾಗಿರುವುದೂ ಹೌದು. ಆ ಟ್ರ್ಯಾಕನ್ನು ಬಿಟ್ಟಿರುವೆಡೆಯಲ್ಲಾ ರಾಮು ನಾಗಾಲೋಟಕ್ಕೆ ಬಿದ್ದಿದೆ ಲಗಾಮು. ಹೀಗಾಗಿ ವರದಾನದ ವರಸೆಗೇ ಮತ್ತೆ ಇಳಿದಿರುವ ಅವರು ಇದೀಗ ಪೂರಾ ಬಿಜಿ. ಸದ್ಯಕ್ಕೆ ಹಾಲಿವುಡ್‌ನ್ನು ಮರೆತು, ಕರಾವಳಿಯಲ್ಲಿ ಹುಟ್ಟಿ ಗಲ್ಫ್‌ನಲ್ಲಿ ತಂಗಿರುವ ಭೂಗತ ಲೋಕದ ಮುತ್ತಪ್ಪನ ಹಾದಿ ನೋಡುತ್ತಿದ್ದಾರೆ. ಮುತ್ತಪ್ಪ ಒಲ್ಲೆ ಅಂದರೂ, ಬಾರಪ್ಪಾ ಅನ್ನುತ್ತಿದ್ದಾರೆ.
ಓವರ್ ಟು ಉಪ್ಪಿ : ರಾಮು ಒಳ್ಳೆ ನಿರ್ಮಾಪಕ. ಹಾಲಿವುಡ್ ಕೆಲಸ ಮುಗಿಸಲಾಗಲಿಲ್ಲ. ಅದನ್ನು ತುಂಬಿಕೊಡುವ ಅವಕಾಶ ಸಿಗಬಾರದೆ ಅಂದುಕೊಳ್ಳುತ್ತಿದ್ದೆ. ಈಗ ಸಿಕ್ಕೇ ಬಿಟ್ಟಿದೆ. ಕತೆ ಬಗ್ಗೆ ಏನೂ ಗೊತ್ತಿಲ್ಲ. ಒಮ್ಮೆ ಕೇಳಿದ ನಂತರವೇ ಪ್ರೊಜೆಕ್ಟ್ ಏನೂ ಅಂತ ಹೇಳಲು ಸಾಧ್ಯ.
ಬೆಳಗೆರೆ ಸಂಭಾಷಣೆ : ಆಫ್ಘಾನಿಸ್ತಾನದಲ್ಲಿ ಉದುರುತ್ತಿರುವ ಅಮೆರಿಕಾ ಯೋಧರ ಬಾಂಬ್ ದಾಳಿಯನ್ನು ಕಂಡು, ಬರೆಯುವ ತುಡಿತ ಹೊತ್ತಿರುವ 'ಹಾಯ್ ಬೆಂಗಳೂರು" ಸಾರಥಿ ರವಿ ಬೆಳಗೆರೆ ಅವರಿಂದ ಚಿತ್ರಕ್ಕೆ ಸಂಭಾಷಣೆ ಬರೆಸುವ ಇರಾದೆ ರಾಮು ಅವರದು. ಆದರೆ ರವಿಯ 'ಹಾಯ್ ಬೆಂಗಳೂರಿ"ನಲ್ಲಿ ಈವರೆಗೆ ಈ ಬಗ್ಗೆ ಒಂದೂ ಸಾಲೂ ಇಣುಕಿಲ್ಲ. ಚುರುಕು ಬರೆಹಗಾರ, ಮಾಂಜಾ ಕೊಡುವ ಪತ್ರಕರ್ತ ರವಿ ಬೆಳಗೆರೆ ಜಾದೂ ತೆರೆಗೂ ಯಾಕೆ ಬರಬಾರದು ಎಂಬುದು ರಾಮು ಪ್ರಶ್ನೆ. ಜೊತೆಗೆ ರವಿ- ಮುತ್ತಪ್ಪ ತುಂಬಾ ಕ್ಲೋಸ್ ಕೂಡ. ಹತ್ತಿರದಿಂದ ಬಲ್ಲ ಒಬ್ಬ ವ್ಯಕ್ತಿಯ ಬಗ್ಗೆ ಅವರೇ ಹೇಳಿದರೆ ಚೆನ್ನ ಅಲ್ಲವೇ ಎನ್ನುತ್ತಾರೆ ರಾಮು.
ರೈ ಕಾಣಲು ಹೋಗುವೆವು ದುಬೈಗೆ : ಮುತ್ತಪ್ಪ ರೈ ಈಗ ದುಬೈನಲ್ಲಿ ಮುಗುಮ್ಮಾಗಿರುವ ಭೂಗತ ಪಾತಕಿ. ರವಿ ಬೆಳಗರೆ ಮತ್ತು ಲಂಕೇಶ್ ಪುತ್ರ ಇಂದ್ರಜಿತ್ ಜೊತೆ ಪತ್ರ, ಇ-ಪತ್ರಗಳ ವ್ಯವಹಾರ ಇಟ್ಟುಕೊಂಡಿದ್ದಾರೆ. ತೆರೆಗೆ ಬರಲು ಇವರು ಸುತಾರಾಂ ಸಿದ್ಧರಿಲ್ಲವಂತೆ. ರಾಮು ಅಂಡ್ ಕಂಪನಿ ಖುದ್ದು ದುಬೈಗೆ ಹೋಗಿ ಒಂದೆರಡು ಶಾಟ್ ಶೂಟ್ ಮಾಡಿಕೊಂಡು ಬರುವ ಯೋಚನೆಯೂ ಇದೆಯಂತೆ. ಎಂಬಲ್ಲಿಗೆ ಉಪ್ಪಿಯೇ ಮುತ್ತಪ್ಪ ರೈ ಆಗಲಿದ್ದಾರೆ ಅನ್ನೋದು ಖಚಿತ.
ಎಲ್ಲೆಲ್ಲೂ ಉಪ್ಪಿ, ಉಪ್ಪಿ ಅಂಡ್ ಉಪ್ಪಿ
ಈಗಾಗಲೇ ಮುನಿರತ್ನಂ ನಿರ್ಮಾಣದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಕೊತ್ವಾಲ ಚಿತ್ರದಲ್ಲಿ ರಾಮಚಂದ್ರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಉಪ್ಪಿ. ಕನ್ನಡದ ಪ್ರೇಕ್ಷಕ ಉಪ್ಪಿಯನ್ನು ಕೊತ್ವಾಲ ಹಾಗೂ ರೈ ಎರಡೂ ರೂಪಗಳಲ್ಲಿ ಸ್ವೀಕರಿಸುವನೇ ಎಂದು ಯಾರೋ ಕೇಳಿದರೆ, ರಾಮು ಹೇಳುತ್ತಾರೆ- ಉಪ್ಪಿ, ರೈ ಇಬ್ಬರೂ ಕರಾವಳಿಯವರೇ. ಭಾಷೆ ಮ್ಯಾಚ್ ಆಗುತ್ತದೆ. ಹೀಗಾಗಿ ಉಪ್ಪಿಯಲ್ಲಿ ರೈ ಹೊಗಲು ಸಾಧ್ಯವಿದೆ. ಪ್ರೇಕ್ಷಕ ಮೆಚ್ಚೇ ಮೆಚ್ಚುತ್ತಾನೆ.
ಎಚ್‌ಟುಓ, ಸೂಪರ್‌ಸ್ಟಾರ್, ಕೊತ್ವಾಲ, ನಿಂಗ್ಯಾಕೆ.... ನಂತರ ಇದೀಗ ರೈ. ಎಲ್ಲಾ ಥೈಲಿವಾಲಗಳಿಗೂ ಉಪೇಂದ್ರ ಸೈ. ಈ ಸಾಲು ಉತ್ಸವದಲ್ಲಿ ಕನ್ನಡದ ಪ್ರೇಕ್ಷಕ ಉಪೇಂದ್ರಗೆ ಹೇಳದಿರಲಿ ಗುಡ್ ಬೈ !


Click it and Unblock the Notifications