ತಂದೆಗೆ ತಕ್ಕ ಮಗ ಅಪ್ಪು ; ಒಂದೇ ಸಿನಿಮಾದಲ್ಲಿ ನಾವು ಕಾಣಿಸಿಕೊಳ್ಳಬೇಕಿತ್ತು- ಶಿವಣ್ಣ ಭಾವುಕ ನುಡಿ
ರಾಮ- ಲಕ್ಷ್ಮಣ-ಭರತರಂತಿದ್ದರು ರಾಜ್ ಸೋದರರು. ಆದರೆ ಈ ಸೋದರರ ನಡುವಿನ ಬಂಧವನ್ನ ವಿಧಿ ಒಡೆದು ಹಾಕಿದೆ. ಈ ಮೂಲಕ ಕನಸೊಂದು ಅಪೂರ್ಣವಾಗಿಯೇ ಉಳಿದುಕೊಂಡಿದೆ. ಇವತ್ತು ಅಪ್ಪು ನಮ್ಮ ನಡುವೆ ಇಲ್ಲ. ಆದರೆ ಅವರ ನೆನಪುಗಳು ಸದಾ ಜೀವಂತ. ಈ ನೆನಪುಗಳಲ್ಲಿಯೇ ಬದುಕು ದೂಡುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಶಿವಣ್ಣ ಅವರನ್ನೊಳಗೊಂಡು ದೊಡ್ಮನೆಯ ಸದಸ್ಯರು ಕೂಡ ಮಾಡುತ್ತಿದ್ದಾರೆ.
ಅಪ್ಪು 4ನೇ ವರ್ಷದ ಪುಣ್ಯಸ್ಮರಣೆಯಂದು ಮನೆ ಮಗನನ್ನು ನೆನೆದು ಭಾವುಕರಾಗಿದ್ದಾರೆ. ಅಪ್ಪು ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಇಂದು (ಅಕ್ಟೋಬರ್ 29 ) ಅಪ್ಪು ಪುಣ್ಯಸ್ಮರಣೆ ಹಿನ್ನೆಲೆ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಶಿವಣ್ಣ ತಮ್ಮ ಬೆಟ್ಟದ ಹೂ ಕುರಿತು ಮಾತನಾಡಿದ್ದಾರೆ. ನಮ್ಮ ನಡುವೆ ಅಪ್ಪು ಇಲ್ಲಿಯೇ ಎಲ್ಲೋ ಇದ್ದಾನೆ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ಈ ಕುರಿತು ಇಂದು ಮಾಧ್ಯಮದವರ ಜೊತೆ ಮಾತನಾಡಿರುವ ಶಿವರಾಜ್ ಕುಮಾರ್, ನೂರಕ್ಕೆ ನೂರು % ಅಪ್ಪು ತಂದೆಗೆ ತಕ್ಕ ಮಗ ಎಂದು ಹೇಳಿದ್ದಾರೆ. 4 ವರ್ಷ ಆಗಲಿ ಎಷ್ಟೇ ವರ್ಷ ಆಗಲಿ ಆ ವ್ಯಕ್ತಿತ್ವಕ್ಕೆ ಇರುವ ಗೌರವ ಕಡಿಮೆಯಾಗಲ್ಲ ಎಂದು ಹೇಳಿರುವ ಶಿವಣ್ಣ, ನಮ್ಮ ನಡುವೆ ಅಪ್ಪು ಇಲ್ಲ ಎಂದು ನಾವು ಯಾವತ್ತು ಅಂದುಕೊಂಡಿಲ್ಲ. ಅವನ ನೆನಪಿನಲ್ಲಿ ಬಾಳುತ್ತಿದ್ದೇವೆ.. ಅವನನ್ನು ನಮ್ಮ ಮನಸಿನಲ್ಲಿ ನಾವು ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಎಷ್ಟು ಪ್ರಯತ್ನ ಆಗುತ್ತೋ ಅಷ್ಟು ಅಪ್ಪುನ ನಮ್ಮಲ್ಲಿ ತೋರಿಸುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ಹೇಳಿರುವ ಶಿವಣ್ಣ, ಅಪ್ಪಾಜಿ.. ಅಪ್ಪು.. ಇವರೆದ್ದಲ್ಲ ಅಪರೂಪದ ವ್ಯಕ್ತಿತ್ವ ಎಲ್ಲರಿಂದಲೂ ಹಾಗಿರಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಅಪ್ಪು ಮೇಲಿನ ನಮ್ಮ ಪ್ರೀತಿ ಯಾವತ್ತು ಕಡಿಮೆಯಾಗಲ್ಲ. ಯಾಕೆಂದರೆ ಆ ತರಹದ ವ್ಯಕ್ತಿ ಅವನು ಎಂದು ಹೇಳಿರುವ ಶಿವಣ್ಣ ಅಪ್ಪಾಜಿ ಮತ್ತು ಅಪ್ಪು ಬಗ್ಗೆ ನಾವು ಮಾತನಾಡದೇ ಇರುವ ದಿನವೇ ಇಲ್ಲ. ದಿನಕ್ಕೆ ಒಮ್ಮೆಯಾದರು ನಾವು ಅವರನ್ನು ನೆನಪು ಮಾಡಿಕೊಂಡೇ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಕೇವಲ ಈ ನಾಲ್ಕು ವರ್ಷಗಳಿಂದ ಅಲ್ಲ, ಅವನು ನಮ್ಮ ನಡುವೆ ದೈಹಿಕವಾಗಿ ಇದ್ದಾಗಲೂ ಕೂಡ ನಾವು ಅವನನ್ನು ನೆನಪು ಮಾಡಿಕೊಳ್ಳುತ್ತಿದ್ದೇವು ಎಂದು ಹೇಳಿದ್ದಾರೆ.
ಇನ್ನೂ ಪುನೀತ್ ರಾಜ್ ಕುಮಾರ್ ಮತ್ತು ದೊಡ್ಮನೆಯ ಸಮಾಜಮುಖಿ ಕೆಲಸಗಳ ಕುರಿತು ಕೂಡ ಮಾತನಾಡಿರುವ ಶಿವಣ್ಣ, ನಾವು ಏನು ಮಾಡಬೇಕು, ಅದನ್ನು ನಾವು ಮಾಡುತ್ತಾ ಬಂದಿದ್ದೇವೆ.. ಸಹಾಯ ಮಾಡುವ ಗುಣ ನಮಗೆ ಅಪ್ಪಾಜಿಯಿಂದ ಬಂದಿದೆ. ಅದು ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ. ಯಾರಿಗೂ ಗೊತ್ತಾಗದ ಹಾಗೆ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ಅಂದ್ಹಾಗೇ ದಶಕದ ಹಿಂದೆ ಡಾ.ರಾಜ್. ಶಿವಣ್ಣ-ರಾಘಣ್ಣ ಹಾಗೂ ಪುನೀತ್ ''ಭರತೇಶ ವೈಭವ'' ಎಂಬ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಬೇಕಿತ್ತು. ಎಲ್ಲವೂ ನಿಕ್ಕಿಯಾಗಿತ್ತು. ಜಾಹೀರಾತನ್ನೂ ನೀಡಿಯಾಗಿತ್ತು. ಇನ್ನೇನೂ ಚಿತ್ರ ಆರಂಭವಾಗುವದಷ್ಟೇ ಬಾಕಿ ಇತ್ತು. ಆದ್ರೇ ಅದು ಆಗಲೇ ಇಲ್ಲ.
ಆ ನಂತರ ಅಣ್ಣಾವ್ರ ನಿಧನದ ನಂತರ ರಾಘಣ್ಣ.. ಶಿವಣ್ಣ ಮತ್ತು ಅಪ್ಪು ಅವರನ್ನು ಒಂದೇ ಚಿತ್ರದಲ್ಲಿ ತೋರಿಸಬೇಕೆಂಬ ಕನಸನ್ನು ಹಲವರು ಕಂಡಿದ್ದರು. ಸಾಹಸ ನಿರ್ದೇಶಕ ರವಿವರ್ಮಾ.. ಸೂರಿ.. ಹರ್ಷ ಸೇರಿ ಹಲವರು ಪ್ರಯತ್ನ ಕೂಡ ಮಾಡಿದ್ದರು.
ಆದರೆ ಯಾವ ಪ್ರಯತ್ನ ಕೂಡ ಫಲಕಾರಿಯಾಗಲಿಲ್ಲ. ಈ ಕುರಿತು ಕೂಡ ಮಾತನಾಡಿರುವ ಶಿವಣ್ಣ ನಾವು ಜೊತೆಯಲ್ಲಿ ಅಭಿನಯಿಸಬೇಕು ಎನ್ನುವ ಆಸೆ ತುಂಬಾನೇ ಇತ್ತು. ಆದರೆ ಅದಕ್ಕೆ ಸಮಯ ಕೂಡಿ ಬರಲೇ ಇಲ್ಲ ಎಂದು ಹೇಳಿದ್ದಾರೆ. ಭಾವುಕರಾಗಿದ್ದಾರೆ.
ಇದೇ ಸಮಯದಲ್ಲಿ ಎಐ ಮೂಲಕ ಅಪ್ಪು ಅವರನ್ನು ಮರುಸೃಷ್ಟಿಸಿ ಚಿತ್ರ ಮಾಡಬಹುದಲ್ವಾ..? ಎಂಬ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಶಿವಣ್ಣ ಅದಕ್ಕೆ ತಕ್ಕಂತೆ ಕಥೆ ಇರಬೇಕು. ಇನ್ನೂ ಎಐ ಸಹಾಯದಿಂದ ಚಿತ್ರ ಮಾಡಿದರೆ ಅದು ತುಂಬಾ ಅಚ್ಚು ಕಟ್ಟಾಗಿ ಬರಬೇಕು. ಎಲ್ಲಿಯೂ ಆರ್ಟಿಫಿಷಿಯಲ್ ಎನ್ನುವ ಭಾವನೆ ಬರಬಾರದು. ಹಾಗಿದ್ದಾಗ ಮಾಡಬಹುದು ಎಂದು ಹೇಳಿದ್ದಾರೆ.


Click it and Unblock the Notifications











