Kaatera Vs Dunki: 'ಡಂಕಿ' ಟಿಕೆಟ್ ವಾಪಸ್ ಕೊಟ್ಟೆ.. ನಮ್ಮ 'ಕಾಟೇರ' ಚಿತ್ರಕ್ಕೆ ನನ್ನ ಬೆಂಬಲ": ದುನಿಯಾ ವಿಜಯ್
ಕರ್ನಾಟಕದಲ್ಲಿ 'ಕಾಟೇರ' ವರ್ಸಸ್ 'ಸಲಾರ್' ಹಾಗೂ 'ಡಂಕಿ' ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಡಿಸೆಂಬರ್ 29ಕ್ಕೆ ದರ್ಶನ್ ನಟನೆಯ 'ಕಾಟೇರ' ಸಿನಿಮಾ ಬಿಡುಗಡೆಯಾಗುತ್ತಿದೆ. ಅದಕ್ಕಿಂತ ಒಂದು ವಾರ ಮುನ್ನ ಪ್ರಭಾಸ್ ನಟನೆಯ 'ಸಲಾರ್' ಹಾಗೂ ಬಾಲಿವುಡ್ ಸಿನಿಮಾ 'ಡಂಕಿ' ತೆರೆಗೆ ಬರ್ತಿದೆ.
ಎರಡು ದೊಡ್ಡ ಸಿನಿಮಾಗಳ ಬೆನ್ನಲ್ಲೇ 'ಕಾಟೇರ' ರಿಲೀಸ್ ಆಗುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕನ್ನಡ ಚಿತ್ರಕ್ಕೆ ಹೆಚ್ಚು ಥಿಯೇಟರ್ ಸಿಗುತ್ತೋ ಇಲ್ವೋ? ಎರಡು ದೊಡ್ಡ ಸಿನಿಮಾಗಳು ಆರ್ಭಟ ಕನ್ನಡ ಸಿನಿಮಾ ಮೇಲೆ ಬೀಳುತ್ತಾ? ಎನ್ನುವ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಕನ್ನಡ ಕಲಾವಿದರು ಕೂಡ 'ಕಾಟೇರ' ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ದುನಿಯಾ ವಿಜಯ್ ಕೂಡ 3 ಸಿನಿಮಾಗಳಲ್ಲಿ ನನ್ನ ಬೆಂಬಲ 'ಕಾಟೇರ' ಚಿತ್ರಕ್ಕೆ ಎಂದಿದ್ದಾರೆ.

ಇತ್ತೀಚೆಗೆ ಕೆಲ ಶಾರುಖ್ ಖಾನ್ ಅಭಿಮಾನಿಗಳು ದುನಿಯಾ ವಿಜಯ್ ಅವರನ್ನು ಭೇಟಿ ಮಾಡಿದ್ದರು. 'ಡಂಕಿ' ಸಿನಿಮಾ ಟಿಕೆಟ್ ನೀಡಿ ಬಂದು ಸಿನಿಮಾ ನೋಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ದುನಿಯಾ ವಿಜಯ್ ನಿರಾಕರಿಸಿ ಟಿಕೆಟ್ ವಾಪಸ್ ಕೊಟ್ಟಿದ್ದರು. ನನ್ನ ಫುಲ್ ಸರ್ಪೋರ್ಟ್ 'ಕಾಟೇರ' ಚಿತ್ರಕ್ಕೆ ಎಂದಿದ್ದಾರೆ. ಬಳಿಕ ಶಾರುಖ್ ಅಭಿಮಾನಿಗಳಿಗೆ ತಿಳಿ ಹೇಳಿ ಕಳುಹಿಸಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ದುನಿಯಾ ವಿಜಯ್ ಉತ್ತರಿಸಿದ್ದಾರೆ. "ದಯವಿಟ್ಟು ಟಿಕೆಟ್ ಬೇಡ. ನಮ್ಮ 'ಕಾಟೇರ' ಸಿನಿಮಾ ಬರ್ತಿದೆ. 'ಸಲಾರ್' ನಮ್ಮ ಕನ್ನಡದವೇ ಮಾಡಿರುವ ಸಿನಿಮಾ. ಅದು ದೊಡ್ಡ ಸಿನಿಮಾ. ಶಾರುಖ್ ಖಾನ್ ಅವರದ್ದು ದೊಡ್ಡ ಸಿನಿಮಾ. ನಮ್ಮ ಮೊದಲ ಆದ್ಯತೆ ಕನ್ನಡ ಚಿತ್ರಕ್ಕೆ ಕೊಡ್ತೀವಿ. ಅದನ್ನೇ ಅವರಿಗೂ ಹೇಳಿ ಕಳುಹಿಸಿದೆ" ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಸದ್ಯ ದುನಿಯಾ ವಿಜಯ್ 'ಭೀಮ' ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಈ ಹಿಂದೆ 'ಸಲಗ' ಸಿನಿಮಾ ಮಾಡಿ ವಿಜಿ ಗೆದ್ದಿದ್ದರು. ಈಗಾಗಲೇ ಚಿತ್ರದ ಎರಡು ಹಾಡುಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಅದರಲ್ಲೂ 'ಬ್ಯಾಡ್ ಬಾಯ್ಸ್' ಸಾಂಗ್ ಸದ್ದು ಗದ್ದಲ ಜೋರಾಗಿದೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. 'ಸಲಗ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ 'ಭೀಮ'ನ ಬಳಗದಲ್ಲಿದೆ.
ದರ್ಶನ್ ನಟನೆಯ 'ಕಾಟೇರ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನದ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಆರಾಧನಾ ನಾಯಕಿಯಾಗಿ ನಟಿಸಿದ್ದಾರೆ. ಜಗಪತಿ ಬಾಬು, ಅಚ್ಯುತ್ ಕುಮಾರ್, ಶ್ರುತಿ, ಕುಮಾರ್ ಗೋವಿಂದ್, ಬಿರಾದಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಶನಿವಾರ ಮಂಡ್ಯದಲ್ಲಿ ಚಿತ್ರದ 3ನೇ ಹಾಡು ಬಿಡುಗಡೆಯಾಗಲಿದೆ. ದೊಡ್ಡಮಟ್ಟದಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಪ್ಲ್ಯಾನ್ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ 2 ಹಾಡು ರಿಲೀಸ್ ಆಗಿ ಹಿಟ್ ಆಗಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಸುಧಾಕರ್ ರಾಜ್ ಛಾಯಾಗ್ರಹಣ ಚಿತ್ರಕ್ಕಿದೆ.


Click it and Unblock the Notifications











