'KGF-2' ಚಿತ್ರದಲ್ಲಿ ಕಮಲ್ ಪಾತ್ರಕ್ಕೆ ನೀಲ್ ಕತ್ತರಿ ಹಾಕಿದ್ರಾ? ವಸಿಷ್ಠ ಸಿಂಹ ಪ್ರತಿಕ್ರಿಯೆ
ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ವಿಚಾರವನ್ನು ಮತ್ಯಾವುದೋ ವಿಚಾರಕ್ಕೆ ಲಿಂಕ್ ಮಾಡಿ ಪೋಸ್ಟ್ ಮಾಡುವ ಪ್ರವೃತ್ತಿ ಹೆಚ್ಚುತ್ತಿದೆ. ಕೆಲವರು ಅದನ್ನೇ ನಿಜ ಎಂದು ನಂಬುವುದು ಇದೆ. ಇತ್ತೀಚೆಗೆ ನಟ ವಶಿಷ್ಠ ಸಿಂಹ ಸಂದರ್ಶನವೊಂದರಲ್ಲಿ ಭಾಗಿ ಆಗಿದ್ದರು. ಯಾವುದೋ ಚಿತ್ರದಲ್ಲಿ ತಮ್ಮ ದೃಶ್ಯಗಳಿಗೆ ಕತ್ತರಿ ಹಾಕಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದನ್ನು 'ಕೆಜಿಎಫ್- 2' ಚಿತ್ರಕ್ಕೆ ಲಿಂಕ್ ಮಾಡಿ ಕೆಲವರು ಪೋಸ್ಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ Beyond Limits ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಸಿಷ್ಠ ಸಿಂಹ ಮಾತನಾಡಿದ್ದರು. ತಮ್ಮ ವೈಯಕ್ತಿಕ ಜೀವನ, ಸಿನಿಮಾ, ಹರಿಪ್ರಿಯಾ ಜೊತೆ ಪ್ರೀತಿ, ಮದುವೆ ಎಲ್ಲದರ ಬಗ್ಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ. "ನನ್ನನ್ನು ನೋಡಿ ಸಾಕಷ್ಟು ಜನ ಒಂದು ಮಾತು ಹೇಳುತ್ತಾರೆ. ನಿಮ್ಮಲ್ಲಿ ಮತ್ತಷ್ಟು ಪ್ರತಿಭೆ ಇದೆ. ನಿಮ್ಮನ್ನು ಇನ್ನು ಚೆನ್ನಾಗಿ ಬಳಸಿಕೊಳ್ಳಬಹುದಿತ್ತು ಎನ್ನುತ್ತಾರೆ. ಯಾವುದೋ ಚಿತ್ರದಲ್ಲಿ ನಿಮ್ಮ ಪಾತ್ರವನ್ನು ಯಾಕೆ ಬೇಗ ಸಾಯಿಸಿಬಿಟ್ರು ಅಂತಾರೆ. ಅಷ್ಟು ಚಿಕ್ಕ ಪಾತ್ರ ಅಂದ್ರೆ ನಟಿಸೊಲ್ಲ, ನಟಿಸಿ ಬಂದು ದೃಶ್ಯಗಳು ಕಟ್ ಮಾಡಿದಾಗ ಅದು ನಮ್ಮ ಕೈಯಲ್ಲಿ ಇರಲ್ಲ. ಅದಕ್ಕೆಲ್ಲಾ ಜಗಳ ಮಾಡಿ ಏನು ಪ್ರಯೋಜನ" ಎಂದಿದ್ದಾರೆ.

ಮಾತು ಮುಂದುವರೆಸಿರುವ ವಸಿಷ್ಟ ಸಿಂಹ "ಉದಾಹರಣೆಗೆ ಯಾವುದೋ ಒಂದು ಚಿತ್ರದಲ್ಲಿ 40 ದಿನ ಕೆಲಸ ಮಾಡಿರುತ್ತೇನೆ. 10-15 ದಿನ ಫುಟೇಜ್ ಮಾತ್ರ ತೆರೆಮೇಲೆ ಬಂದ್ರೆ ಏನು ಅನಿಸುತ್ತೆ. ಅದು ಅವ್ರ ಸ್ವಂತ ಕಾರಣಕ್ಕೆ ಮಾಡಿಕೊಂಡಿರುತ್ತಾರೆ. ಇರಲಿ ಬಿಡಿ. ನಟಿಸಿದ್ದಕ್ಕೆ ಸಂಭಾವನೆ ಸಿಕ್ಕಿರುತ್ತದೆ. ತಪ್ಪು ನನ್ನದಲ್ಲ. ನನಗೆ ಕೊಟ್ಟ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೇನೆ. ನಟಿಸಿದಾಗ ಸೆಟ್‌ನಲ್ಲಿ ಚಪ್ಪಾಳೆ ಹೊಡೆದು, ಥಿಯೇಟರ್‌ನಲ್ಲಿ ಆ ಸೀನ್ ಇಲ್ಲ ಅಂದ್ರೆ, ಅದು ನನ್ನ ಕೈಯಲ್ಲಿ ಇಲ್ಲ" ಎಂದಿದ್ದಾರೆ"
ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬಂದಿತ್ತು. ರಾಕಿ ಭಾಯ್ ಯಶ್ ಎದುರು ಕಮಲ್ ಆಗಿ ವಶಿಷ್ಟ ಸಿಂಹ ಅಬ್ಬರಿಸಿದ್ದರು. ಖಡಕ್ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ತಮ್ಮ ಕಂಚಿನ ಕಂಠದಲ್ಲಿ ಆ ಪಾತ್ರಕ್ಕೆ ಮತ್ತಷ್ಟು ಬಲ ತುಂಬಿದ್ದರು. ಎರಡೂ ಭಾಗಗಳಲ್ಲಿ ಅವರ ಪಾತ್ರ ಇತ್ತು. 2ನೇ ಭಾಗದಲ್ಲಿ ಆರಂಭದಲ್ಲೇ ಅವರ ಪಾತ್ರಕ್ಕೆ ತೆರೆ ಬಿದ್ದಿತ್ತು.
ಸದ್ಯ ವಸಿಷ್ಟ ಸಿಂಹ ಹೇಳಿಕೆಯನ್ನು 'ಕೆಜಿಎಫ್- 2' ಚಿತ್ರಕ್ಕೆ ಹೋಲಿಸಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಸ್ವತಃ ವಸಿಷ್ಟ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. "ಆ ಸಿನ್ಮಾ ಬಗ್ಗೆ ಮಾತನಾಡುವಂತಿದ್ದರೆ ಹೆಸ್ರು ಹೇಳಿ ಮಾತನಾಡ್ತಿದ್ದೆ ಅಲ್ವಾ? 35 ಕನ್ನಡ ಸಿನ್ಮಾ ಮಾಡಿದ್ದೀನಿ. ಅದರಲ್ಲಿ ಯಾವ ಸಿನ್ಮಾ ಅಂತ ಇವರೆಲ್ಲಾ ಯಾಕೆ ಅಂದುಕೊಳ್ತಾರೆ?" ಎಂದು ಪ್ರಶ್ನಿಸಿದ್ದಾರೆ.
"ಕೆಜಿಎಫ್-2 ಚಿತ್ರದಲ್ಲಿ 40 ದಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರೆ ಆರಂಭದಲ್ಲೇ ಪಾತ್ರೆ ಯಾಕೆ ಸಾಯ್ತಿತ್ತು. ಅದು ಶೂಟ್ ಮಾಡಿದ್ದೇ ಒಂದೂವರೆ ದಿನ. ಖಂಡಿತ ನಾನು 'ಕೆಜಿಎಫ್- 2' ಸಿನಿಮಾ ಬಗ್ಗೆ ಆ ಸಂದರ್ಶನದಲ್ಲಿ ಪ್ರಸ್ತಾಪಿಸಿಲ್ಲ. ಬೇರೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದೀನಿ. ಅದರಲ್ಲಿ ಒಟ್ಟಾರೆಯಾಗಿ ಬೇಸರವಾಗಿದ್ದರ ಬಗ್ಗೆ ಕೇಳಿದ್ದರ ಪ್ರಶ್ನೆಗೆ ಕೊಟ್ಟ ಉತ್ತರ ಅಷ್ಟೇ ಅದು" ಎಂದು ವಸಿಷ್ಟ ಸಿಂಹ ತಿಳಿಸಿದ್ದಾರೆ.
ವಸಿಷ್ಟ ಸಿಂಹ ದಕ್ಷಿಣ ಭಾರತದಲ್ಲಿ ಈಗ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅಕ್ಕ ಪಕ್ಕದ ಇಂಡಸ್ಟ್ರಿಗಳಿಂದ ಅವಕಾಶಗಳು ಸಿಗುತ್ತಿದೆ. ಕೆಜಿಎಫ್ ಚಿತ್ರದ ಕಮಲ್ ಪಾತ್ರ ಅವರಿಗೆ ಮತ್ತಷ್ಟು ನೇಮು ಫೇಮು ತಂದುಕೊಟ್ಟಿದ್ದು ಸುಳ್ಳಲ್ಲ. ಇತ್ತೀಚೆಗೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ದಂಪತಿ ಮಗನ ನಾಮಕರಣ ಮಾಡಿದ್ದರು. ವಿಪ್ರಾ ಎನ್ ಸಿಂಹ ಹೆಸರಿಟ್ಟಿದ್ದಾರೆ. ಇನ್ನು ಕನ್ನಡ ಮಾತ್ರವಲ್ಲೇ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಸಿಂಹ ಘರ್ಜನೆ ಜೋರಾಗಿದೆ.


Click it and Unblock the Notifications











