ಡಾರ್ಲಿಂಗ್ ಕೃಷ್ಣ ವಿರುದ್ಧ 'ಲವ್ ಮಾಕ್ಟೇಲ್- 3' ಕಥೆ ಕದ್ದ ಆರೋಪ; ರಾಘವೇಂದ್ರ ನಾಯ್ಕ್ ಪ್ರತಿಕ್ರಿಯೆ
ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ 'ಲವ್ ಮಾಕ್ಟೇಲ್- 3' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಮಾರ್ಚ್ 19ಕ್ಕೆ ತೆರೆಗೆ ಕಂಡ ಸಿನಿಮಾ 'ಧುರಂಧರ್- 2' ಆರ್ಭಟದ ನಡುವೆಯೂ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮತ್ತೊಮ್ಮೆ ಡಾರ್ಲಿಂಗ್ ಕೃಷ್ಣ ಗೆದ್ದಿದ್ದಾರೆ. ಆದರೆ ಇದೀಗ ಅವರ ಮೇಲೆ ಕಥೆ ಕದ್ದ ಆರೋಪ ಕೇಳಿ ಬಂದಿದೆ.
ಕನ್ನಡ ಚಿತ್ರ ನಿರ್ದೇಶಕ ರಾಘವೇಂದ್ರ ನಾಯ್ಕ್ ಇಂತಾದೊಂದು ಗಂಭೀರ ಆರೋಪ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. 3 ವರ್ಷಗಳ ಹಿಂದೆ ಈ ಕಥೆಯನ್ನು ಡಾರ್ಲಿಂಗ್ ಕೃಷ್ಣ ಅವರಿಗೆ ನಾನು ಹೇಳಿದ್ದೆ. ಅದೇ ಕಥೆಯನ್ನು ಕದ್ದು ಕೊಂಚ ಬದಲಿಸಿ ನನಗೆ ಗೊತ್ತಿಲ್ಲದಂತೆ 'ಲವ್ ಮಾಕ್ಟೇಲ್- 3' ಚಿತ್ರದಲ್ಲಿ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುಂದಿನ ಈ ರೀತಿ ಯಾರಿಗೂ ಅನ್ಯಾಯ ಆಗಬಾರದು ಎಂದು ಹೋರಾಟಕ್ಕೆ ನಡೆಸಲು ಮುಂದಾಗಿದ್ದಾರೆ.

ದಿಗಂತ್ ನಟನೆಯ 'ಮಾರಿಗೋಲ್ಡ್' ಎಂಬ ಚಿತ್ರವನ್ನು ಚಿತ್ರವನ್ನು ರಾಘವೇಂದ್ರ ನಾಯ್ಕ್ ನಿರ್ದೇಶನ ಮಾಡಿದ್ದರು. ಕಳೆದ 20 ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಕೆಲ ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಲು ಒಂದಷ್ಟು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಅದೇ ರೀತಿ ಸಿದ್ಧಪಡಿಸಿದ್ದ ಕಥೆ, ಚಿತ್ರಕಥೆಯನ್ನು ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿ ಸಿನಿಮಾ ಮಾಡಲು ಪ್ರಯತ್ನಿಸಿದ್ದರು. ಕಥೆ ಕೇಳಿದ ಬಳಿಕ ಇಂತದ್ದೇ ಕಥೆ ಇರುವ ಸಿನಿಮಾ ಈಗ ನಾನು ಮಾಡ್ತಿದ್ದೀನಿ, ಹಾಗಾಗಿ ಸದ್ಯಕ್ಕೆ ಬೇಡ ಎಂದು ಕೃಷ್ಣ ಹೇಳಿಕಳುಹಿಸಿದ್ದರಂತೆ. ಬಳಿಕ ಕೃಷ್ಣ ಅದೇ ಕಥೆಯನ್ನು 'ಲವ್ ಮಾಕ್ಟೇಲ್- 3' ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ಎನ್ನುವುದು ರಾಘವೇಂದ್ರ ನಾಯ್ಕ್ ಆರೋಪ.
ತಂದೆ, ಮಗಳ ಭಾವುಕ ಪಯಣದ ಕಥೆ 'ಲವ್ ಮಾಕ್ಟೇಲ್'-3 ಚಿತ್ರದಲ್ಲಿದೆ. ಪಾರ್ಟ್-2 ಕಥೆ ಎಲ್ಲಿ ಅಂತ್ಯವಾಗಿತ್ತೋ ಅಲ್ಲಿಂದಲೇ ಕಥೆ ಮುಂದುವರೆಯುತ್ತದೆ. ಆದಿಯ ಈಗಿನ ಕಥೆಯನ್ನು ಸ್ನೇಹಿತ ವಿಜಯ್ ಹೇಳುವ ಮೂಲಕ ಸಿನಿಮಾ ಶುರುವಾಗುತ್ತದೆ. ಪದೇ ಪದೆ ಹಿಂದಿನ ಸಿನಿಮಾ ದೃಶ್ಯಗಳು ಬಂದು ಹೋಗುತ್ತದೆ. ಸೆಕೆಂಡ್ ಹಾಫ್‌ನಲ್ಲಿ ಆದಿ ಮಗುವನ್ನು ದತ್ತು ಪಡೆಯುವುದು. ಮುಂದೆ ಕಾನೂನು ತೊಡಕು ಎದುರಾಗಿ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಸಿನಿಮಾ. ಮಗುವನ್ನು ದತ್ತು ಪಡೆಯುವುದು, ಬಳಿಕ ಎದುರಾಗುವ ಕಾನೂನು ಹೋರಾಟದ ಕಥೆಯನ್ನೇ ತಾವು ಡಾರ್ಲಿಂಗ್ ಕೃಷ್ಣ ಅವರಿಗೆ ಹೇಳಿದ್ದಾಗಿ ರಾಘವೇಂದ್ರ ನಾಯ್ಕ್ ವಾದಿಸುತ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ರಾಘವೇಂದ್ರ ನಾಯ್ಕ್ ಕಥೆ ಸಿದ್ಧಪಡಿಸಿ ನಿರ್ದೇಶಕ, ನಿರ್ಮಾಪಕ ಗುರುದೇಶ್ ದೇಶಪಾಂಡೆ ಅವರಿಗೆ ಕೊಟ್ಟಿದ್ದಾರೆ. ಅದಕ್ಕಾಗಿ ಅಡ್ವಾನ್ಸ್ ಸಹ ಪಡೆದಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಸಿನಿಮಾ ಮಾಡೋಣ ಎಂದು ಸ್ವತಃ ಗುರುದೇಶ್ ದೇಶಪಾಂಡೆ ಅವತ್ತು ಕೃಷ್ಣ ಅವರಿಗೆ ಕಥೆ ಹೇಳುವಂತೆ ಹೇಳಿದ್ದರು. ಕೃಷ್ಣ ಒಲ್ಲೆ ಎಂದ ಬಳಿಕ ರಮೇಶ್ ಅರವಿಂದ್ ಹಾಗೂ ಶರಣ್ ಅವರ ಜೊತೆ ಸೇರಿ ಸಿನಿಮಾ ಮಾಡುವ ತಯಾರಿ ನಡೆದಿತ್ತು. ಅಷ್ಟರಲ್ಲೇ ಅವರ ಕಥೆ 'ಲವ್ ಮಾಕ್ಟೇಲ್'-3 ಚಿತ್ರದಲ್ಲಿ ಬಂದುಬಿಟ್ಟಿದೆ.
ನಾನು ಈಗಾಗಲೇ ಕಥೆಯನ್ನು ಗುರುದೇಶ್ ಪಾಂಡೆ ಅವರಿಗೆ ಕೊಟ್ಟುಬಿಟ್ಟಿದ್ದೀನಿ. ಹಾಗಾಗಿ ಅವರೇ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ರಾಘವೇಂದ್ರ ನಾಯ್ಕ್ ಹೇಳಿದ್ದಾರೆ. "ಗುರುದೇಶ್ ಪಾಂಡೆ ಅವರ ನಿರ್ಮಾಣ, ನಿರ್ದೇಶನದಲ್ಲಿ ಆ ಸಿನಿಮಾ ಬರಬೇಕಿತ್ತು. ಕಥೆ ನನ್ನದೇ ಎನ್ನುವುದಕ್ಕೆ ಆಧಾರ ಇದೆ. ಈ ಕಥೆಯನ್ನು ನನ್ನ ಸ್ನೇಹಿತರಲ್ಲಿ ಕೆಲವರಿಗೆ ಹೇಳಿದ್ದೀನಿ. ಸಂಭಾಷಣೆಗಾರ ರಘು ನಿಡುವಳ್ಳಿ ಅವರಿಗೂ ಗೊತ್ತು. ಅವರೇ ಸಂಭಾಷಣೆ ಬರೆದಿದ್ದಾರೆ. ರಮೇಶ್ ಅರವಿಂದ್ ಅವರಿಗೂ ಹೇಳಿದ್ದೀನಿ. ಆದರೆ ನನ್ನ ಕಥೆ ಮೂಲ ಆಶಯ, ಕಥಾಹಂದರ ಬಳಸಿ ಸಿನಿಮಾ ಮಾಡಿದರೆ ಬರಹಗಾರರ ಪಾಡೇನು" ಎಂದು ರಾಘವೇಂದ್ರ ನಾಯ್ಕ್ ಪ್ರಶ್ನಿಸಿದ್ದಾರೆ. ಅದೇ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಗಿ ತಿಳಿಸಿದ್ದಾರೆ.
ಇವತ್ತು ಸಿನಿಮಾ ಗೆದ್ದಿದೆ. ಆದರೆ ಸಿನಿಮಾ ನೋಡಿದ ಕೂಡಲೇ ಗುರುದೇಶ್‌ಪಾಂಡೆ ಅವರು ಡಾರ್ಲಿಂಗ್ ಕೃಷ್ಣ ಅವರಿಗೆ ಫೋನ್ ಮಾಡಿದ್ದಾರೆ. "ನಾನು ಈ ಕಥೆ ಕೇಳಿದ್ದೆ ನನಗೆ ನೆನಪಿಲ್ಲ" ಎಂದು ಹೇಳಿದ್ದಾರೆ. ನಾವು ಕಥೆ ಹೇಳಲಿಲ್ಲ ಎಂದು ಅವರು ವಾದಿಸಲು ಸಾಧ್ಯವಿಲ್ಲ. ಅದಕ್ಕೆ ಆಧಾರ ಸಿಗುತ್ತದೆ. ಸಿಸಿಟಿವಿಯಲ್ಲಿ ಭೇಟಿ ಬಗ್ಗೆ ಮಾಹಿತಿ ಸಿಗುತ್ತದೆ. ನಮ್ಮ ಆಪ್ತ ಬಳಗದಲ್ಲಿ ಕೂಡ ಅದು ನಾನು ಬರೆದ ಕಥೆ ಎನ್ನುವುದು ಗೊತ್ತಿದೆ. 'ಲವ್ ಮಾಕ್ಟೇಲ್'-3 ಕೂಡ ಮಗುವಿನ ಸುತ್ತಾ ಇರುವ ಸಿನಿಮಾ ಎಂದು ಸ್ವತಃ ಕೃಷ್ಣ ಹೇಳಿದ್ದಾರೆ. 2023ರಲ್ಲಿ ಅವರು ಸಿನಿಮಾ ಮಾಡುವ ಆಲೋಚನೆ ಇರಲಿಲ್ಲ. ನನ್ನ ಹೇಳಿದ ಕಥೆ ಕೇಳಿದ ಮೇಲೆ ಅದೇ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಈಗ ನನಗೆ ಗೊತ್ತಿಲ್ಲ ಎಂದು ವಾದಿಸುತ್ತಿದ್ದಾರೆ. ಅವತ್ತೇ ಅವರ ಸಿನಿಮಾ ಕಥೆ ಸಿದ್ಧವಾಗಿದ್ದರೆ ಆ ಮಾತು ಹೇಳುತ್ತಿದ್ರು. ನಾನು ಇದೇ ಕಥೆ ಮಾಡಿದ್ದೀನಿ ನೋಡಿ ಅಂತ. ನಾವು ಕಥೆ ಹೇಳದೇ ಇದ್ದಿದ್ದರೆ ಇಬ್ಬರಿಗೂ ಒಂದೇ ಆಲೋಚನೆ ಬಂದಿರಬಹುದು ಎಂದು ಸುಮ್ಮನಾಗಬಹುದಿತ್ತು. ನಾವು ಹೇಳಿಕ ಕಥೆ ಕೇಳಿದ ಬಳಿಕ ಹೀಗೆ ಮಾಡಿರುವುದು ತಪ್ಪು ಎಂದು ತಿಳಿಸಿದ್ದಾರೆ.


Click it and Unblock the Notifications











