ತಮಿಳು ಚಿತ್ರ ಮಾಡುವಾಗ ದಪ್ಪ ಇದ್ದೀಯ ಅಂತ ಮೂರೇ ದಿನಕ್ಕೆ ಶೂಟಿಂಗ್ ನಿಲ್ಲಿಸಿಬಿಟ್ರು ಎಂದ ಕೋಮಲ್!
ನಟ ಕೋಮಲ್ ಕುಮಾರ್ ಚಿತ್ರರಂಗದಿಂದ ಮೊದಲಿಗೆ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಬಳಿಕ ಹಾಸ್ಯ ನಟನಾಗಿ ನಂತರ ಲೀಡ್ ರೋಲ್‌ಗೆ ಬಡ್ತಿ ಪಡೆದುಕೊಂಡ ಪ್ರತಿಭಾವಂತ ಕಲಾವಿದ. ಸೂಪರ್ ನನ್‌ಮಗ ಎಂಬ ಚಿತ್ರದ ಮೂಲಕ ನಟನೆ ಆರಂಭಿಸಿದ ಕೋಮಲ್ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳಲ್ಲಿಯೂ ಕಾಮಿಡಿಯನ್ ಆಗಿ ನಟಿಸಿ ನಕ್ಕು ನಲಿಸಿ ಸೈ ಎನಿಸಿಕೊಂಡಿದ್ದಾರೆ.
2008ರಲ್ಲಿ ಮಿಸ್ಟರ್ ಗರಗಸ ಎಂಬ ಚಿತ್ರದ ಮೂಲಕ ಕೋಮಲ್ ಕುಮಾರ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಲು ಆರಂಭಿಸಿ ಬಳಿಕ ಹಲವಾರು ಚಿತ್ರಗಳಲ್ಲಿ ಲೀಡ್ ರೋಲ್ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ್ದ ಕೋಮಲ್ ಕುಮಾರ್ 2016ರ ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡು 2019ರಲ್ಲಿ ಕೆಂಪೇಗೌಡ 2 ಚಿತ್ರದ ಮೂಲಕ ನಟನೆಗೆ ಮರಳಿದ್ದರು.

ಮತ್ತೆ ಕೊರೊನಾ ಆಗಮನವಾದ ಕಾರಣದಿಂದಾಗಿ ಮೂರು ವರ್ಷಗಳ ಬ್ರೇಕ್ ತೆಗೆದುಕೊಂಡ ಕೋಮಲ್ ಇದೀಗ ಉಂಡೆ ನಾಮ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಯಲ್ಲಿ ದರ್ಶನ ನೀಡಲು ಮುಂದಾಗಿದ್ದಾರೆ. ಹೌದು, ಉಂಡೆನಾಮ ಚಿತ್ರ ಇದೇ ಏಪ್ರಿಲ್ 14ರಂದು ರಾಜ್ಯದ್ಯಂತ ಬಿಡುಗಡೆಯಾಗುತ್ತಿದ್ದು, ನಟ ಕೋಮಲ್ ಹಲವು ಸಂದರ್ಶನಗಳಲ್ಲಿ ಭಾಗವಹಿಸಿ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇನ್ನು ನಮ್ಮ ಕೆಎಫ್ಐ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ್ದ ಕೋಮಲ್ ಕುಮಾರ್ ಸಣ್ಣ ಆಗಿದ್ದೇಗೆ ಎಂಬ ಪ್ರಶ್ನೆ ಎದುರಾದಾಗ ಸಿನಿಮಾ ಕ್ಷೇತ್ರದಲ್ಲಿ ತನ್ನಿಂದ ಅಸಾಧ್ಯ ಎಂದದ್ದನ್ನೇ ಮಾಡಿದ್ದೇನೆ ಎಂಬುದನ್ನು ಹೇಳಿಕೊಂಡರು. ಕೆಲವರು ಕೋಮಲ್ ಕೈನಲ್ಲಿ ಇದನ್ನು ಮಾಡುವುದಕ್ಕೆ ಆಗುವುದಿಲ್ಲ ಎಂದಿದ್ದರು, ನಾನು ಅದನ್ನೇ ಮಾಡುತ್ತಿದೆ ಎಂದು ಹೇಳಿಕೊಂಡರು.

"ನಿಂಗೆ ಯಾವುದು ಮಾಡೋಕೆ ಸಾಧ್ಯ ಇಲ್ಲ ಅಂತಾರೋ ಅದನ್ನೇ ಫಸ್ಟ್ ಮಾಡೋಕೆ ಹೋಗೋದು ನಾನು. ಇದೇ ಪ್ರಾಬ್ಲಮ್. ನೀನು ಡಿಸ್ಟ್ರಿಬ್ಯೂಟರ್ ಆಗೋಕೆ ಆಗಲ್ಲ ಅಂದ್ರು. ಚಿಕ್ಕ ವಯಸ್ಸಿನಲ್ಲಿಯೇ ಒಂದು 45 ಸಿನಿಮಾ ಡಿಸ್ಟ್ರಿಬ್ಯೂಷನ್ ಮಾಡ್ದೆ. ಥಿಯೇಟರ್ ಹಿಡಿಯೋದು ತುಂಬಾ ಕಷ್ಟ ಅಂದ್ರು. 23 ಥಿಯೇಟರ್ ನಡೆಸಿದೆ. ಸಿನಿಮಾ ಪ್ರೊಡ್ಯೂಸ್ ಮಾಡೋಕಾಗಲ್ಲ ಅಂದ್ರು. 9 ಸಿನಿಮಾ ಪ್ರೊಡ್ಯೂಸ್ ಮಾಡಿದೆ. ನಂಗೆ ಏನು ಮಾಡೋಕಾಗಲ್ಲ ಅಂತಾರೋ ಅದನ್ನೇ ಮಾಡೋಕೆ ಹೋಗೋದು. ಅದೇನೋ ಗೊತ್ತಿಲ್ಲ, ಅದೇ ನನ್ನ ನೇಚರ್" ಎಂದು ಕೋಮಲ್ ಹೇಳಿಕೊಂಡರು.
ಮುಂದುವರಿದು ಮಾತನಾಡಿದ ಕೋಮಲ್ ಕುಮಾರ್ "ಕೋಮಲ್ ಸಣ್ಣ ಆಗೋಕೆ ಆಗಲ್ಲ ಅಂದ್ರು. ಒಂದು ತಮಿಳು ಚಿತ್ರದಲ್ಲಿ ವಿಲನ್ ಆಗಿ ಮಾಡಿದ್ದೆ. 3 ದಿನ ಆದ್ಮೇಲೆ ಶೂಟಿಂಗ್ ಸ್ಟಾಪ್ ಮಾಡಿಬಿಟ್ರು. ಯಾಕಂದರೆ ಅವಾಗ ವಿಜಯಕಾಂತ್ ಅವರು ವಿರೋಧ ಪಕ್ಷದ ಲೀಡರ್. ನಾನು ಸೇಮ್ ಅದೇ ತರಹ ಕಾಣಿಸ್ತಾ ಇದೀನಿ, ನೀವು ವಿಲನ್ ಆಗಿ ವಿಜಯಕಾಂತ್ ಅವರನ್ನು ತೋರಿಸ್ತಾ ಇದ್ದೀರ ಅಂತ ಪ್ರೇಕ್ಷಕರಿಗೆ ಅನಿಸುತ್ತೆ ಅಂತ ನಿಲ್ಲಿಸಿಬಿಟ್ರು. ನನಗೆ ಅವಾಗ ಹಠ ಬಂತು. ಎಲ್ಲಾ ಬಿಟ್ಟು ಒಂದೂವರೆ ವರ್ಷ ತುಂಬಾ ಕಷ್ಟಪಟ್ಟೆ. 24 ಕೆಜಿ ತೂಕ ಇಳಿಸಿದೆ. ಆಮೇಲೆ ಕೆಂಪೇಗೌಡ 2 ಟಾಕ್ ಶುರು ಆಯಿತು. ಒಂದು ಟೀಸರ್ ಮಾಡಿದ್ವಿ, ಅದು ಟ್ರೆಂಡಿಂಗ್ ಆಗಿತ್ತು. ಟೀಸರ್‌ನಲ್ಲಿ ನನ್ನನ್ನು ಕಂಡಿದ್ದ ಹಲವರು ಸಣ್ಣ ಆಗಿ ಚೆನ್ನಾಗಿ ಕಾಣ್ತಿದ್ದೀರ ಎಂದಾಗ ಖುಷಿ ಆಗಿತ್ತು. ಅದಾದಮೇಲೆ ಇನ್ನುಮುಂದೆ ನಾನು ದಪ್ಪ ಆಗಬಾರದು ಎಂದು ಅದನ್ನೇ ಮೆಂಟೇನ್ ಮಾಡಿಕೊಂಡು ಬಂದೆ" ಎಂದು ತಿಳಿಸಿದರು.


Click it and Unblock the Notifications











