Mysuru Dasara 2023: ನಾಡ ಹಬ್ಬ ದಸರಾ ಉದ್ಘಾಟಿಸಲಿರುವ 'ನಾದ ಬ್ರಹ್ಮ' ಹಂಸಲೇಖ
ಖ್ಯಾತ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಅವರು ಈ ಬಾರಿಯ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ. ಈ ಬಾರಿಯ ದಸರಾ ಅಕ್ಟೋಬರ್ 15 ರ ಬೆಳಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮುಹೂರ್ತದಲ್ಲಿ ಉದ್ಘಾಟನೆಯಾಗಲಿದೆ.
ದಸರಾ ಉದ್ಘಾಟನೆ ಕುರಿತು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಬರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವಿಶ್ವವಿಖ್ಯಾತ ದಸರಾ ಅಕ್ಟೋಬರ್ 15 ರ ಬೆಳಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಉದ್ಘಾಟನೆಯಾಗಲಿದೆ. ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ.
ಈ ಬಾರಿ ಮೈಸೂರು ದಸರಾದ ಮತ್ತೊಂದು ವಿಶೇಷವೆಂದರೇ, ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಈ ವರ್ಷ ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರವರೆಗೆ ದಸರಾ ಉತ್ಸವವನ್ನು ಆಚರಿಸಲಾಗುವುದು. ಅಕ್ಟೋಬರ್ 24 ರಂದು ವಿಜಯದಶಮಿಯಂದು ದಸರಾ ಉತ್ಸವ ಮುಗಿಯಲಿದೆ. ನವರಾತ್ರಿ ಆಚರಣೆಗಳು ಅಕ್ಟೋಬರ್ 15 (ಭಾನುವಾರ) ಆರಂಭವಾಗಲಿದೆ. ಆಯುಧಪೂಜೆ ಅಕ್ಟೋಬರ್. 23 (ಸೋಮವಾರ) ಮತ್ತು ಅಕ್ಟೋಬರ್ 24 ರಂದು (ಮಂಗಳವಾರ) ವಿಜಯದಶಮಿ ನಡೆಯಲಿದೆ.
ನಾದಬ್ರಹ್ಮ ಹಂಸಲೇಖ
ಕನ್ನಡ ಚಿತ್ರರಂಗಕ್ಕೆ ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಅವರ ಕೊಡುಗೆ ಅಪಾರ. ಕನ್ನಡ ಸಂಗೀತಪ್ರೀಯರಿಗೆ ಹಾಡುಗಳ ರಸದೂತಣ ಬಡಿಸಿದ ದೇಸಿ ದೊರೆ ಈ ನಾಡಬ್ರಹ್ಮ. ಗೋವಿಂದರಾಜು, ರಾಜಮ್ಮ ದಂಪತಿಯ ಪುತ್ರನಾಗಿ ಬೆಂಗಳೂರಿನಲ್ಲಿಯೇ 1951 ರ ಜೂನ್ 23 ರಂದು ಜನಿಸಿದರು ಹಂಸಲೇಖ. ಅವರ ಮೂಲ ಹೆಸರು ಗಂಗರಾಜು.
ಪ್ರೆಸ್‌ನಲ್ಲಿ ಕೆಲಸ ಮಾಡುತ್ತಾ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಿದ್ದ ಇವರು, ಹಾಡುಗಳನ್ನು ಬರೆಯುತ್ತಿದ್ದರು. 1973ರಲ್ಲಿ ಬಿಡುಗಡೆ ಆದ 'ತ್ರಿವೇಣಿ' ಸಿನಿಮಾದ 'ನೀನಾ ಭಗವಂತ' ಹಾಡು ಹಂಸಲೇಖ ಮೊದಲ ಬಾರಿಗೆ ಸಿನಿಮಾಕ್ಕೆ ಬರೆದ ಹಾಡು. ನಂತರ 1981 ರಲ್ಲಿ 'ರಾಹುಚಂದ್ರ' ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದರು. ಆದರೆ ಸಿನಿಮಾ ಬಿಡುಗಡೆ ಆಗಲಿಲ್ಲ.
ಹಂಸಲೇಖ ಸಾಹಿತ್ಯ ಮತ್ತು ಸಂಭಾಷಣೆಕಾರರಾಗಿ ಚಿತ್ರರಂಗಕ್ಕೆ ಅಧಿಕೃತವಾಗಿ ಪದಾರ್ಪಣೆ ಮಾಡಿದ್ದು ರವಿಚಂದ್ರನ್ ನಟನೆಯ 'ನಾನು ನನ್ನ ಹೆಂಡ್ತಿ' ಸಿನಿಮಾ ಮೂಲಕ. ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದವು. ನಂತರ ಅವರು ಹಿಂತಿರುಗಿ ನೋಡಲಿಲ್ಲ. 1995ರಲ್ಲಿ ತೆರೆಕಂಡಿದ್ದ 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದರು. ಆ ವರ್ಷ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶಕ ಅವಾರ್ಡ್ ಹಂಸಲೇಖರಿಗೆ ಲಭಿಸಿತು. ಇದುವರೆಗೂ ನಾದಬ್ರಹ್ಮರಿಗೆ ಸಿಕ್ಕಿದ ಮೊದಲ ಹಾಗೂ ಏಕೈಕ ರಾಷ್ಟ್ರ ಪ್ರಶಸ್ತಿ.
1994ರಲ್ಲಿ 'ಹಾಲುಂಡ ತವರು' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಮೊದಲ ಸಲ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿತು. ನಂತರ 1995ರಲ್ಲಿ 'ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ' ಹಾಗೂ 2005ರಲ್ಲಿ ತೆರೆಕಂಡ 'ನೆನಪಿರಲಿ' ಸಿನಿಮಾಗೆ ಮತ್ತೆ ರಾಜ್ಯ ಪ್ರಶಸ್ತಿ ದೊರೆತಿದೆ. 2014ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.


Click it and Unblock the Notifications










