ಪ್ರದರ್ಶನ ನಿಲ್ಲಿಸಿದ ಮೈಸೂರಿನ ಐತಿಹಾಸಿಕ ಚಿತ್ರಮಂದಿರ 'ಲಕ್ಷ್ಮಿ'
ಕೊರೊನಾ ವೈರಸ್ ಹೊಡೆತಕ್ಕೆ ಈಗಾಗಲೇ ಹಲವು ಚಿತ್ರಮಂದಿರಗಳು ಸಂಪೂರ್ಣವಾಗಿ ಪರದೆ ಮುಚ್ಚಿದ್ದು, ಈ ಸಾಲಿಗೆ ಇದೀಗ ಮೈಸೂರಿಗರ ಮನೆಮಾತಾಗಿದ್ದ ಮತ್ತೊಂದು ಚಿತ್ರಮಂದಿರ ಸೇರ್ಪಡೆಗೊಂಡಿದೆ.
ಕಳೆದೊಂದು ವರ್ಷದಿಂದ ಬೆಂಬಿಡದೆ ಕಾಡುತ್ತಿರುವ ಕೊರೊನಾ ಸಂಕಷ್ಟಕ್ಕೆ ಚಿತ್ರೋದ್ಯಮ ನಲುಗಿ ಹೋಗಿದೆ. ಇನ್ನೂ ಚಿತ್ರೋದ್ಯಮವನ್ನೇ ನಂಬಿ ಸಾಗುತ್ತಿದ್ದ ಚಿತ್ರಮಂದಿಗಳು ಸಹ ಬಾಗಿಲು ಮುಚ್ಚಿವೆ. ಕೊರೊನಾ ತಂದೊಡ್ಡಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಲವು ಸಿನಿಮಾ ಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚುತ್ತಿವೆ.
ಈ ಸಾಲಿಗೆ ಮೈಸೂರಿಗರಿಗೆ ಚಿರಪರಿಚಿತವಾಗಿದ್ದ "ಲಕ್ಷ್ಮಿ" ಟಾಕೀಸ್ ಸೇರಿದ್ದು, ಲಕ್ಷ್ಮಿ ಚಿತ್ರಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ಇದರೊಂದಿಗೆ ಸುಮಾರು 71 ವರ್ಷಗಳ ಇತಿಹಾಸವುಳ್ಳ ಮೈಸೂರಿನ ಲಕ್ಷ್ಮಿ ಟಾಕೀಸ್ ತನ್ನ ಆಟ ನಿಲ್ಲಿಸಿದೆ.

ಏಳು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರಮಂದಿರದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ಹೊರಬರಲು ಕಷ್ಟವಾದ ಹಿನ್ನೆಲೆ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದ್ದಾರೆ.
1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ. ಮೈಸೂರಿಗರಿಗೆ ಹಲವು ನೆನಪುಗಳನ್ನು ನೀಡಿರುವ ಲಕ್ಷ್ಮೀ ಟಾಕೀಸ್ ನಲ್ಲಿ ಕನ್ನಡ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದೆ.
ಇತ್ತೀಚಿಗಷ್ಟೆ ಮೈಸೂರಿನ ಮಂಡಿ ಮೊಹಲ್ಲದಲ್ಲಿದ್ದ 'ಶ್ರೀ ಟಾಕೀಸ್' ಶಾಶ್ವತವಾಗಿ ಬಾಗಿಲು ಹಾಕಿತ್ತು. ಐದು ದಶಕಕ್ಕೂ ಹಳೆಯದಾದ ಈ ಚಿತ್ರಮಂದಿರ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತಾದ್ದರಿಂದ ಟಾಕೀಸ್ ಬಂದ್ ಮಾಡುವ ನಿರ್ಣಯವನ್ನು ಚಿತ್ರಮಂದಿರ ಮಾಲೀಕರು ಮಾಡಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











