ರಕ್ಷಿತ್ ಶೆಟ್ಟಿ ಚಿತ್ರದಲ್ಲಿ 'ನಾನು ನಂದಿನಿ' ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ
'ನಾನು ನಂದಿನಿ' ಎನ್ನುವ ಹಾಡಿನ ಮೂಲಕ ವಿಕಾಸ್ ವಿಕ್ಕಿಪೀಡಿಯ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದ್ದು ಗೊತ್ತೇಯಿದೆ. ಈ ಬೆಂಗಳೂರು ಬಾರ್ಬಿ ಸಾಂಗ್ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಕಾಮಿಡಿ ವಿಡಿಯೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದ ವಿಡಿಯೋ ಕ್ರಿಯೇಟರ್ ವಿಕಾಸ್ ಈ ಹಾಡಿನಿಂದ ಮತ್ತಷ್ಟು ಜನರನ್ನು ತಲುಪಿದರು.
4 ತಿಂಗಳ ಹಿಂದೆ 'ನಾನು ನಂದಿನಿ' ಹಾಡು ಭಾರೀ ಸದ್ದು ಮಾಡಿತ್ತು. ಬಳಿಕ ವಿಕಾಸ್ ವಿಡಿಯೋಗಳೆಲ್ಲಾ ಸಖತ್ ವೈರಲ್ ಆಗುತ್ತಿದೆ. 'I am barbie girl' ಇಂಗ್ಲೀಷ್ ಟ್ಯೂನ್ ಬಳಿಕ ಬೆಂಗಳೂರಿನ ಪಿಜಿಯಲ್ಲಿರುವ ಹುಡುಗಿಯರ ಗೋಳಿನ ಕಥೆಯನ್ನು ವಿಕಾಸ್ ಹೇಳಿದ್ದರು. ಸ್ವತಃ ಸಾಹಿತ್ಯ ಬರೆದು, ಹಾಡಿ, ಹುಡುಗಿ ವೇಷದಲ್ಲಿ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಸೆಲೆಬ್ರೆಟಿಗಳು ಕೂಡ ಈ ಹಾಡು ನೋಡಿ ಮೆಚ್ಚಿದ್ದರು.

'ನಾನು ನಂದಿನಿ' ಹಾಡಿನಲ್ಲೇ ಮತ್ತಷ್ಟು ಹಾಡುಗಳನ್ನು ನೆಟ್ಟಿಗರು ಕ್ರಿಯೇಟ್ ಮಾಡಿ ವೈರಲ್ ಮಾಡಿದ್ದರು. ವಿಕಾಸ್ ಮಾಡಿದ್ದ ಹಾಡು ಲಕ್ಷ ಲಕ್ಷ ವೀವ್ಸ್ ಸಾಧಿಸಿ ದಾಖಲೆ ಬರೆದಿತ್ತು. ಇನ್ನು ಇತ್ತೀಚೆಗೆ ಶಿವಣ್ಣ ನಟನೆಯ 'ಘೋಸ್ಟ್' ಸಿನಿಮಾ ಪ್ರಚಾರಕ್ಕೂ ವಿಕ್ಕಿಪೀಡಿಯ ಸ್ಪೆಷಲ್ ವಿಡಿಯೋ ಮಾಡಿದ್ದರು.
ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ವಿಕಾಸ್ ವಿಡಿಯೋಗಳು ಸದ್ದು ಮಾಡುತ್ತಲೇ ಇವೆ. ಇದೆಲ್ಲದರ ಬೆನ್ನಲ್ಲೇ ವಿಕಾಸ್ ಈಗ ಕನ್ನಡ ಸಿನಿಮಾದಲ್ಲಿ ನಟಿಸಿರುವ ಸುದ್ದಿ ಬಂದಿದೆ. ಹೌದು ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಚಿತ್ರದಲ್ಲಿ ವಿಕಾಸ್ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ. ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.
'ಬ್ಯಾಚುಲರ್ ಪಾರ್ಟಿ' ಸಿನಿಮಾ ಜನವರಿ 26ಕ್ಕೆ ತೆರೆಗೆ ಬರಲಿದೆ. ನಿರ್ದೇಶಕ ಪವನ್ ಕುಮಾರ್, ಮಠ ಗುರುಪ್ರಸಾದ್, ನಾ ಸೋಮಶೇಖರ್, ಶೈನ್ ಶೆಟ್ಟಿ ಈ ಚಿತ್ರದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರ ಜೊತೆ ವಿಕಾಸ್ ವಿಕ್ಕಿಪೀಡಿಯ ಕೂಡ ಕೆಲ ಹೊತ್ತು ಕಾಣಿಸಿಕೊಂಡು ರಂಜಿಸಲಿದ್ದಾರೆ.

ಶೀಘ್ರದಲ್ಲೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಈ ಟ್ರೈಲರ್‌ನಲ್ಲಿ ವಿಕ್ಕಿಪಿಡಿಯ ಸೇರಿದಂತೆ ಅತಿಥಿ ಪಾತ್ರಗಳ ಸಣ್ಣ ಸಣ್ಣ ಝಲಕ್ ರಿವೀಲ್ ಆಗಲಿದೆ. ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ ಜೊತೆಗಿರುವ ಅಭಿಜಿತ್ ಈ ಸಿನಿಮಾ ಬಗ್ಗೆ ಬಹಳ ನಿರೀಕ್ಷೆಯಿಂದ ಇದ್ದಾರೆ. ಇದೊಂದು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಆಗಿದ್ದು ಪೋಸ್ಟರ್, ಟೀಸರ್, ಸಾಂಗ್‌ನಿಂದ ಗಮನ ಸೆಳೆದಿದೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ನಟಿಸಬೇಕಿತ್ತು. 'ಕಾಂತಾರ' ಸಿನಿಮಾ ರಿಲೀಸ್ ಮೊದಲು ಈ ಚಿತ್ರದಲ್ಲಿ ನಟಿಸಲು ರಿಷಬ್ ಒಪ್ಪಿದ್ದರು. ಆದರೆ 'ಕಾಂತಾರ' ಸಕ್ಸಸ್ ಬಳಿಕ ಪ್ರೀಕ್ವೆಲ್ ಕೈಗೆತ್ತಿಕೊಂಡು ಈ ಸಿನಿಮಾದಿಂದ ಹೊರಬಂದರು. ಬಳಿಕ ಆ ಪಾತ್ರಕ್ಕೆ ಲೂಸ್ ಮಾದ ಯೋಗಿ ಆಯ್ಕೆ ಆಗಿದ್ದರು. ಬ್ಯಾಂಕಾಕ್ ಸೇರಿದಂತೆ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆದಿದೆ.
ಅರ್ಜುನ್ ರಾಮು ಸಂಗೀತ ಹಾಗೂ ಅರವಿಂದ್ ಛಾಯಾಗ್ರಹಣ 'ಬ್ಯಾಚುಲರ್ ಪಾರ್ಟಿ' ಚಿತ್ರಕ್ಕಿದೆ. ಹೊಸ ವರ್ಷದಲ್ಲಿ ಯಾವುದೇ ದೊಡ್ಡ ಕನ್ನಡ ಸಿನಿಮಾ ಇನ್ನು ಬಿಡುಗಡೆಯಾಗಿಲ್ಲ. ತಿಂಗಳಾಂತ್ಯಕ್ಕೆ ಚಿಕ್ಕಣ್ಣ ನಟನೆಯ 'ಉಪಾಧ್ಯಕ್ಷ' ಸಿನಿಮಾ ಜೊತೆಗೆ 'ಬ್ಯಾಚುಲರ್ ಪಾರ್ಟಿ' ಕೂಡ ತೆರೆಗೆ ಬರಲಿದೆ.


Click it and Unblock the Notifications











