»   » ನಿರೀಕ್ಷೆ ಮೂಡಿಸಿ ತೆರೆಗೆ ಬರಲು ಸಜ್ಜಾಗಿದ್ದಾರೆ ನಾವಿಕರು

ನಿರೀಕ್ಷೆ ಮೂಡಿಸಿ ತೆರೆಗೆ ಬರಲು ಸಜ್ಜಾಗಿದ್ದಾರೆ ನಾವಿಕರು

By: ಶ್ರೀರಾಮ್ ಭಟ್
Subscribe to Filmibeat Kannada
Shravanth Manish
ಸ್ಯಾಂಡಲ್ ವುಡ್ ಬೆಳ್ಳಿತೆರೆಗೆ ಆಕರ್ಷಕ ಹಾಗೂ ನಿರೀಕ್ಷೆ ಹುಟ್ಟಿಸಬಲ್ಲ ಶೀರ್ಷಿಕೆಯ ಸಿನಿಮಾವೊಂದು ಸದ್ಯದಲ್ಲೇ ಅಪ್ಪಳಿಸಲಿದೆ. ಮನಿಶ್ ಚಂದ್ರ ಹಾಗೂ ಶ್ರವಂತ್ ರಾವ್ ನಾಯಕತ್ವದ 'ನಾವಿಕ' ಹೆಸರಿನ ಈ ಚಿತ್ರ, ತೆರೆಗೆ ಬರುವ ಪೂರ್ವದಲ್ಲಿನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಸೆನ್ಸಾರ್ ಮಂಡಳಿಯಿಂದ 'ಯುಎ' ಪ್ರಮಾಣಪತ್ರ ಪಡೆದಿರುವ 'ನಾವಿಕ', ಸೆಟ್ಟೇರಿದ ದಿನದಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ.

ಖಾಸಗಿ ಟಿವಿ ವಾಹಿನಿಯಲ್ಲಿ ನಿರೂಪಕರಾಗಿ ಕರ್ನಾಟಕದಾದ್ಯಂತ ಮನೆಮಾತಾಗಿರುವ ಶ್ರವಂತ್ ರಾವ್ ಹಾಗೂ ಮನಿಶ್ ಚಂದ್ರ, ಈ ಚಿತ್ರದಲ್ಲೂ ಒಟ್ಟಾಗಿ ಅಭಿನಯಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಶ್ರವಂತ್, ಈಗಾಗಲೇ 'ಚಿಕ್ಕಮಗಳೂರ ಓ ಚಿಕ್ಕ ಮಲ್ಲಿಗೆ' ಚಿತ್ರದಲ್ಲಿ ನಟಿಸಿ ಪ್ರೇಕ್ಷಕರಿಗೆ ಪರಿಚಯವಾಗಿರುವ ನಟ. ಈ ಇಬ್ಬರು ನಾಯಕರಿಗೆ ಚಿತ್ರದಲ್ಲಿ ನಾಯಕಿಯರಾಗಿ ಜತೆಯಾಗಿರುವವರು ಸ್ವಾತಿ ಮತ್ತು ಎಸ್ಟರ್ ನೊರಾನಾ.

ಸೇನ್ ಪ್ರಕಾಶ್ ಚಿತ್ರಕಥೆ ಬರೆದು ಈ 'ನಾವಿಕ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಂಭಾಷಣೆ ಯೋಗೀಶ್ ಅವರದು. ಯೋಗರಾಜ್ ಭಟ್ಟರ 'ಮಣಿ' ಚಿತ್ರಕ್ಕೆ ಸಂಗೀತ ನೀಡಿದ್ದ ರಾಜ್ ನಾರಾಯಣ್, ಈ ಚಿತ್ರದ ಸಂಗೀತ ನಿರ್ದೇಶಕರು. ಅವರು ನೀಡಿರುವ ಸಂಗೀತ ಹಾಗೂ ಹಾಡುಗಳು ಈಗಾಗಲೇ ಸಾಕಷ್ಟು ಮೆಚ್ಚುಗೆ ಗಳಿಸಿವೆ. ಸಿನಿಟೆಕ್ ಸೂರಿ ಛಾಯಾಗ್ರಹಣದ ಈ ಚಿತ್ರಕ್ಕೆ ನಿರ್ಮಾಪಕರೂ ಆಗಿರುವ ರಂಗಸ್ವಾಮಿ ಬಿಳುಗಲಿ ಕಥೆ ಬರೆದಿದ್ದಾರೆ. ಸುಬ್ಬು ಸಾಹಸ ನಿರ್ದೇಶನ, ರಾಜು ನೃತ್ಯ ನಿರ್ದೇಶನ ನಾವಿಕ ಚಿತ್ರಕ್ಕಿದೆ.

ಭೂಮಿಯ ಮೇಲೆ ಚಲಿಸುವ ವಾಹನಗಳನ್ನು ಚಾಲನೆ ಮಾಡುವವರನ್ನು 'ಚಾಲಕ' ಎಂದರೆ ಆಕಾಶದಲ್ಲಿ ಹಾರಾಡುವ ವಿಮಾನಕ್ಕೆ ಬೇಕು 'ಪೈಲಟ್' ಯುದ್ಧ ಭೂಮಿಯಲ್ಲಿ ರಥವನ್ನು ನಡೆಸುವವನನ್ನು 'ಸಾರಥಿ' ಎಂದರೆ ಜಲಮಾರ್ಗದಲ್ಲಿ ಹಡಗನ್ನು ನಡೆಸುವವನನ್ನು 'ನಾವಿಕ' ಎನ್ನುತ್ತೇವೆ. 'ನಾವಿಕ' ಶೀರ್ಷಿಕೆ ಸಾಕಷ್ಟು ಆಕರ್ಷಕ ಎನಿಸಲು ಕಾರಣ, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಇತ್ತೀಚಿಗೆ ಬಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಸಾರಥಿ' ಹೆಸರಿನ ಚಿತ್ರ ಮಾಡಿರುವ ಸೂಪರ್ ಹಿಟ್ ದಾಖಲೆ.

ಸಾರಥಿ ಚಿತ್ರವನ್ನು ಪ್ರಯತ್ನಿಸಿದರೂ ಮರೆಯಲಾಗದ ಕನ್ನಡ ಸಿನಿಪ್ರೇಕ್ಷಕರು, ಈ 'ನಾವಿಕ' ಹೆಸರಿನ ಚಿತ್ರದ ಬಗ್ಗೆಯೂ ಕೂಡ ಬಹಳಷ್ಟು ಕುತೂಹಲಗೊಂಡಿರಲು ಕಾರಣ ಕಣ್ಣಮುಂದಿರುವ 'ಸಾರಥಿ' ಯಶಸ್ಸು. 'ನಾವಿಕ' ಚಿತ್ರತಂಡ ತಮ್ಮ ಚಿತ್ರದ ಕಥೆಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲವಾದರೂ ನಿರೂಪಣೆ ಹೊಸ ರೀತಿಯಲ್ಲಿದೆ ಎನ್ನುವ ಮೂಲಕ ವಿಭಿನ್ನ ಪ್ರಯತ್ನ ಎಂಬುದನ್ನು ಹೇಳಿದ್ದಾರೆ. 'ಸಾರಥಿ' ಹೆಸರನ್ನು ಎಲ್ಲಿಯೂ ಹೇಳದಿದ್ದರೂ ಅಷ್ಟೇ ಆಕರ್ಷಕ ಟೈಟಲ್ ಇಟ್ಟು ಚಿತ್ರತಂಡ ಬುದ್ಧಿವಂತಿಕೆ ಮೆರೆದಿದೆ.

ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿರುವ ಚಿತ್ರತಂಡ, ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಹಾಗೂ ಭರವಸೆ ಹೊಂದಿದೆ. ಹೊಸಬರ ತಂಡವಾದರೂ ಚೆನ್ನಾಗಿ ಕೆಲಸ ಮಾಡಿ ಪ್ರೇಕ್ಷಕರು ಮೆಚ್ಚುವಂತ 'ಔಟ್ ಪುಟ್' ತೆರೆಯ ಮೇಲೆ ತೋರಿಸಿ ಅಚ್ಚರಿ ಮೂಡಿಸಿ ಚಿತ್ರವನ್ನು ಯಶಸ್ವಿ ಚಿತ್ರಗಳ ಸಾಲಿಗೆ ಸೇರಿಸುವ ಆತ್ಮವಿಶ್ವಾಸ ಚಿತ್ರತಂಡಕ್ಕಿದೆ. ಈಗಾಗಲೇ ನಿರೀಕ್ಷೆ ಹೊಂದಿರುವ ಚಿತ್ರರಸಿಕರು ಚಿತ್ರ ತೆರೆಗೆ ಬರುವುದನ್ನೇ ಕಾಯುತ್ತಿದ್ದಾರೆ. ಶ್ರವಂತ್ ಹಾಗೂ ಮನಿಶ್ ಜಾದೂ ಯಶಸ್ವಿಯಾಗಲಿ ಎಂದು ಕೋಟಿ ಕೋಟಿ ಅಭಿಮಾನಿಗಳು ಹಾರೈಸುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Kannad Movie Naavika is ready to Screen. Actor Manish Chandra and Shravanth Rao acted in this movie directed by Sen Prakash. Raj Narayan, Yogaraj Bhat 'Mani' movie fame composed Music for this. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada