ತೆಲುಗು ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ನಭಾ ನಟೇಶ್
ಸ್ಯಾಂಡಲ್ ವುಡ್ ನಟಿ ನಭಾ ನಟೇಶ್ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ವಜ್ರಕಾಯ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಭಾ ನಟೇಶ್ ಈಗ ತೆಲುಗು ಚಿತ್ರರಂಗದ ಬೇಡಿಕೆ ನಟಿಯಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದ ನಭಾ ನಟೇಶ್ ಆ ನಂತರ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ.
ಸ್ಯಾಂಡಲ್ ವುಡ್ ನಲ್ಲಿ ಸಿಗದ ಯಶಸ್ಸು ಈಗ ತೆಲುಗು ಚಿತ್ರರಂಗದಲ್ಲಿ ಸಿಕ್ಕಿದೆ. ಹೌದು, ಟಾಲಿವುಡ್ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಂತೆ ನಭಾ ಲಕ್ ಬದಲಾಗಿದೆ. ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿ ಬಂದ ಇಸ್ಮಾರ್ಟ್ ಶಂಕರ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದ ನಭಾಗೆ ದೊಡ್ಡ ಮಟ್ಟದ ಹೆಸರು ತಂದು ಕೊಟ್ಟಿದೆ.
'ಇಸ್ಮಾರ್ಟ್ ಶಂಕರ್' ಯಶಸ್ಸಾಗುತ್ತಿದ್ದಂತೆ ನಭಾ ಬೇಡಿಕೆ ಕೂಡ ಹೆಚ್ಚಾಗಿದೆ. ಬೇಡಿಗೆ ಹೆಚ್ಚಾಗುತ್ತಿದೆ ಅಂದ್ಮೇಲೆ ನಟಿಯರು ಸಂಭಾವನೆ ಹೆಚ್ಚಿಸಿಕೊಳ್ಳುವುದರಲ್ಲಿ ಯಾವುದೆ ಅನುಮಾನವಿಲ್ಲ. ನಬಾ ನಟೇಶ್ ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳು ಬರುತ್ತಿದೆ. ಇಸ್ಮಾರ್ಟ್ ಶಂಕರ್ ಸಿನಿಮಾಗೂ ಮೊದಲು ನಭಾ ಪಡೆಯುತ್ತಿದ್ದ ಸಂಭಾವನೆ 10 ಲಕ್ಷ. ಆದ್ರೀಗ ಸಂಭಾವನೆ ದಿಢೀರನೆ 40 ರಿಂದ 50 ಲಕ್ಷಕ್ಕೆ ಏರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತೀಚಿಗಷ್ಟೆ ನಟಿ ರಶ್ಮಿಕಾ ಮಂದಣ್ಣ ಸಹ ತನ್ನ ಸಂಭಾವನೆಯನ್ನು 80 ಲಕ್ಷದಿಂದ ಒಂದು ಕೋಟಿವರೆಗೂ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ 'ಜರ್ಸಿ' ಸಿನಿಮಾದ ನಂತರ ನಟಿ ಶ್ರದ್ಧಾ ಶ್ರೀನಾಥ್ ಸಂಭಾವನೆಯಲ್ಲೂ ಏರಿಕೆಯಾಗಿದೆ. ಈಗ ನಭಾ ಕೂಡ ಅದೇ ಸಾಲಿಗೆ ಸೇರಿದ್ದಾರೆ. ಕನ್ನಡ ನಟಿಯರು ಟಾಲಿವುಡ್ ಗೆ ಹೋಗಿ ಮಿಂಚುವ ಜೊತೆಗೆ ಅತೀ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದಾರೆ.


Click it and Unblock the Notifications











