»   » ಅನಂತ್‌ನಾಗ್‌ರ ಸದ್ಯದ ಮೆಂಟಾಲಿಟಿಯ ಪರಿಚಯ ಇಲ್ಲಿದೆ

ಅನಂತ್‌ನಾಗ್‌ರ ಸದ್ಯದ ಮೆಂಟಾಲಿಟಿಯ ಪರಿಚಯ ಇಲ್ಲಿದೆ

Posted By: Staff
Subscribe to Filmibeat Kannada

ಅನಂತ್‌ನಾಗ್‌ ಬಿಜಿಯಾಗಿದ್ದಾರೆ. ಸಿನಿಮಾನೋ. ಸೀರಿಯಲ್ಲೋ, ಮಣ್ಣಂಗಟ್ಟಿನೋ... ಒಟ್ಟಿನಲ್ಲಿ ತಾನು ಮನೇಲಿ ಕೂತ್ಕೋಬಾರದು ಅನ್ನುವ ತೀರ್ಮಾನಕ್ಕೆ ಅವರು ಬಂದಿದ್ದಾರೆ. ತನ್ಮೂಲಕ ತಮ್ಮ ರಾಜಕೀಯ ಗೃಹಭಂಗದ ದುಃಖವನ್ನೂ ಮರೆಯೋದಕ್ಕೆ ಸಾಧ್ಯವಾಗಬಹುದು ಎಂದು ಅವರು ನಂಬಿದಂತಿದೆ.

ಅನಂತನಾಗ್‌ ಈಗ ಮಾತನಾಡುತ್ತಿದ್ದಾರೆ. ಹಿಂದೆಂದೂ ಅವರಿಷ್ಟು ವಾಚಾಳಿಯಾಗಿರಲಿಲ್ಲ. ಮಸ್ಸಂಜೆ ಕಳೆದ ಮೇಲಷ್ಟೇ ಅವರಿಗೆ ಮಾತು ನೆನಪಾಗುತ್ತಿತ್ತು. ಈಗ ಹಗಲು ಹೊತ್ತಲ್ಲೂ ಅವರ ವಿಚಾರಧಾರೆಗಳು ಓತಪ್ರೋತವಾಗಿ ಹರಿದುಬರುತ್ತಿದೆ. ಸದ್ಯಕ್ಕೆ ದಿನೇಶ್‌ ಬಾಬು ಅವರ ಚಿಟ್ಟೆ ಚಿತ್ರದಲ್ಲಿ ಮೆಂಟಲ್‌ ಡಾಕ್ಟರ್‌ ಪಾತ್ರ ನಿರ್ವಹಿಸುತ್ತಿರುವ ಅನಂತ್‌ ಮೈಸೂರಲ್ಲಿ ಪತ್ರಕರ್ತರಿಗೆ ತಮ್ಮ ಸದ್ಯದ ಮೆಂಟಾಲಿಟಿಯ ಪರಿಚಯ ಮಾಡಿಕೊಟ್ಟಿದ್ದು ಹೀಗೆ:

ರೀಮೇಕ್‌ ಚಿತ್ರ ಮಾಡೋದು ತಪ್ಪಲ್ಲ. ಯಾಕೆಂದ್ರೆ ಸಿನಿಮಾ ಅಂದ್ರೆ ವ್ಯಾಪಾರ. ವ್ಯಾಪಾರದಲ್ಲಿ ಲಾಭಾನೇ ಮುಖ್ಯ. ಹಾಗಂತ ಎಲ್ಲಾ ರೀಮೇಕುಗಳೂ ಲಾಭ ಮಾಡುತ್ತವೆ ಎಂದೇನಿಲ್ಲ. ರೀಮೇಕ್‌ ಆಗ್ಲಿ ಸ್ವಮೇಕ್‌ ಆಗ್ಲಿ ಯಶಸ್ಸು ಮುಖ್ಯ. ಮತದಾನದಂಥ ಸ್ವಮೇಕ್‌ ಚಿತ್ರದ ಗತಿಯೇನಾಯ್ತು ಅಂತ ಎಲ್ಲರಿಗೂ ಗೊತ್ತಲ್ಲ.

ಜನರಿಗೆ ನಮ್ಮಂಥ ಹಳಬರ ಮುಖ ನೋಡಿ ಬೇಜಾರಾಗಿದೆ. ಆ ಕಾರಣಕ್ಕೇ ನನ್ನ ಪ್ರೀತಿಯ ಹುಡುಗಿ, ಚಿತ್ರಾದಂಥ ಹೊಸಬರ ಚಿತ್ರ ಗೆಲ್ಲುತ್ತದೆ. ನನಗೆ ಮೊದಲು ವೃತ್ತಿಯ ಬಗ್ಗೆ ಪ್ರಾಮಾಣಿಕತೆ ಇರಲಿಲ್ಲ. ಈಗ ಇದೆ. ಆದರೆ ವಯಸ್ಸಾಗಿದೆ. ವಯಸ್ಸಿಗೆ ತಕ್ಕ ಪಾತ್ರಗಳೇ ಸಿಗ್ತಾ ಇವೆ. ನಾನು ಪಕ್ಷಾಂತರ ಮಾಡೋನಲ್ಲ. ಅಂಥಾ ಸಂದರ್ಭ ಬಂದರೆ ರಾಜಕೀಯದಿಂದ ನಿವೃತ್ತನಾಗುತ್ತೇನೆ.

ಪ್ರಶಸ್ತಿಗಾಗಿ ಕಿತ್ತಾಡೋರನ್ನು ಕಂಡರೆ ನನಗೆ ಹೇಸಿಗೆಯಾಗುತ್ತದೆ. ಉದಾಹರಣೆಗೆ ತಮ್ಮ ಚಿತ್ರಕ್ಕೆ ಅವಾರ್ಡ್‌ ಬಂದಿಲ್ಲ ಅನ್ನೋ ಕಾರಣಕ್ಕೆ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಎಂ.ಎಸ್‌. ಸತ್ಯು ವಿರುದ್ಧ ಕಿಡಿಕಾರಿ ಜಾಹೀರಾತು ನೀಡಿದ್ದಾರೆ. ಅವರಿಗೆ ಈ ಹಿಂದೆ ಎಷ್ಟು ಪ್ರಶಸ್ತಿಗಳು ಬಂದಿವೆ. ಹೊಸಬರಿಗೂ ಪ್ರಶಸ್ತಿ ಸಿಗಲಿ ಬಿಡಿ.

ನಟರು ಕಿರೀಟಧಾರಣೆ ಮಾಡಿಸಿಕೊಳ್ಳುತ್ತಿರುವುದು ಒಂಥರಾ ಸ್ವಯಂ ಪ್ರಚಾರ ವೈಖರಿ. ನಮ್ಮ ಬಗ್ಗೆ ನಾವೇ ಡಂಗುರ ಹೊಡೆದುಕೊಳ್ಳದಿದ್ದರೆ ಜನ ಮರೆತು ಬಿಡುತ್ತಾರೆ ರಾಜಕಾರಣಿಗಳೂ ಈಗ ಲೈಟ್‌ ಕಂಬಕ್ಕೂ ತಮ್ಮ ಹೆಸರು ಇಟ್ಟುಕೊಳ್ಳುತ್ತಾರೆ. ಇದೊಂಥರ ಸೆಲ್ಫ್‌ ಮಾರ್ಕೆಟಿಂಗ್‌.

ಹಲೋ ನಾರದ ಚಿತ್ರದಲ್ಲಿ ನಾರದನಾಗೋದಕ್ಕೆ ಒಪ್ಪಿಕೊಂಡಿದ್ದೇನೆ. ಆದರೆ, ಮೀಸೆ ತೆಗೀಬೇಕಲ್ಲ ಅನ್ನೋ ಬೇಜಾರು. ಹಾಗಾಗಿ ಮೀಸೆಯಿಸುವ ನಾರದನನ್ನೇ ಸೃಷ್ಟಿ ಮಾಡೋಣ ಅಂತ ಅಂದ್ಕೋಂಡಿದ್ದೀವಿ.

ಅಂದಹಾಗೆ ಅನಂತ್‌ನಾಗ್‌ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದಾಗ ಅವರಿಗೆ ಮೀಸೇಯೇ ಇರಲಿಲ್ಲ. ಮೀಸೆಯಿರುವ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕೂ ಅವರು ಹಿಂದು ಮುಂದು ನೋಡುತ್ತಿದ್ದರು. ಈಗ ಎಲ್ಲವೂ ಉಲ್ಟಾ ಪಲ್ಟಾ.

English summary
Actor Ananthnags views on remake films

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada