For Quick Alerts
  ALLOW NOTIFICATIONS  
  For Daily Alerts

  ಪಕ್ಷ ನನ್ನನ್ನು ನಿರ್ಲಕ್ಷಿಸಿಲ್ಲ, ಉದಾಸೀನ ನನ್ನದೇ. ಸಿನಿಮಾದಲ್ಲಿ ಹೊಸಬರಿಗೆ ಮಣೆ ಹಾಕುತ್ತಿರುವಂತೆ ರಾಜಕೀಯದಲ್ಲೂ ಆಗಬೇಕು ಎಂಬ ಅನಂತ್‌ ಮಾತುಗಳು ಅವರ ರಾಜಕೀಯ ಜೀವನಾಸ್ತಮಾನದ ಸೂಚನೆಗಳಾಗಿವೆ

  By Staff
  |

  ಅನಂತನಾಗ್‌ ನಿವೃತ್ತರಾಗುತ್ತಾರಾ ?
  ಈ ಪ್ರಶ್ನೆಯನ್ನು ಸಿನಿಮಾ ಹಾಗೂ ರಾಜಕಾರಣದ ಮಂದಿ ಸಂದರ್ಭಕ್ಕೆ ತಕ್ಕಂತೆ ಹತ್ತಾರು ಬಾರಿ ಕೇಳಿಕೊಳ್ಳುತ್ತಾ ಬಂದಿದ್ದಾರೆ. ಅಂಥಾ ಪರಿಸ್ಥಿತಿಗಳನ್ನು ಸ್ವತಃ ಅನಂತನಾಗ್‌ ಸೃಷ್ಟಿಸಿದ್ದಾರೆ.

  ಹೆಗಡೆ ಹಿಂಬಾಲಕರಾಗಿದ್ದುಕೊಂಡು ಪಟೇಲರ ಮಂತ್ರಿಮಂಡಲದಲ್ಲಿ ಸ್ಥಾನ ಗಿಟ್ಟಿಸಿದ - ತಮ್ಮ ರಾಜಕಾರಣ ಬದುಕಿನ ಉಜ್ವಲ ದಿನಗಳಲ್ಲಿ ಅನಂತನಾಗ್‌ ಹೆಚ್ಚೂ ಕಮ್ಮಿ ಸಿನಿಮಾದಿಂದ ಕಣ್ಮರೆಯಾಗಿದ್ದರು. ಸ್ಯಾಂಡಲ್‌ವುಡ್‌ ಅನಂತನಾಗ್‌ ಅವರ ನಿವೃತ್ತಿಯ ಬಗ್ಗೆ ಗಂಭೀರವಾಗಿ ಮಾತನಾಡಿದ್ದು ಆಗಲೇ. ನಟನೆ ಮಾತ್ರವಲ್ಲ , ಸಿನಿಮಾ ಮಂದಿಯನ್ನು ಕೂಡ ಅನಂತ್‌ ಮರೆತಂತೆ ವರ್ತಿಸುತ್ತಿದ್ದ ಕಾಲವದು. ಕನ್ನಡ ಸಿನಿಮಾಕ್ಕೆ ಅನಂತನಾಗ್‌ ಸಚಿವರಾಗಿ ಏನನ್ನಾದರೂ ಮಾಡುತ್ತಾರೆನ್ನುವ ನಿರೀಕ್ಷೆ ನಿಜವಾಗಲಿಲ್ಲ . ಆ ಮಟ್ಟಿಗೆ ಅವರು ಅಪ್ಪಟ ನಟ, ತೆರೆಯಾಚೆಗೂ.

  ಅನಂತನಾಗ್‌ ಸಿನಿಮಾದಿಂದ ನಿವೃತ್ತರಾಗಲಿಲ್ಲ . ಅವರ ಗುರು (ಹೆಗಡೆ ಪದಚ್ಯುತ ಗುರು) ಜೆ.ಹೆಚ್‌.ಪಟೇಲ್‌ ಕುರ್ಚಿಯಿಂದ ಕೆಳಗಿಳಿದು ಚುನಾವಣೆಯಲ್ಲಿ ಸೋತರು. ಗುರುವಿನ ದಾರಿಯನ್ನೇ ಅನುಸರಿಸಿದ ಅನಂತನಾಗ್‌ ಮಲ್ಲೇಶ್ವರದ ಮತದಾರರಿಂದ ಮುಖಕ್ಕೆ ಮಸಿ ಬಳಿಸಿಕೊಂಡರು. ಆನಂತರ ಅವರಿಗೆ ಮತ್ತೆ ನೆಲೆಯಾದದ್ದು ಸಿನಿಮಾ. ಅವರಿಗೆ ಸಿನಿಮಾ ಬೇಕಾಗಿತ್ತೋ ಇಲ್ಲವೋ, ನಿರ್ಮಾಪಕರಿಗೆ ಅನಂತ್‌ ಬೇಕಾಗಿದ್ದರು. ಅಲ್ಲಿಗೆ ಸಿನಿಮಾ ನಂಟು ಅನಂತ್‌ ಪಾಲಿಗೆ ಕಳಚುವಂತದ್ದಲ್ಲ ಎನ್ನುವುದು ಸಾಬೀತಾಯಿತು. ಚಿತ್ರರಂಗಕ್ಕೆ ಅವರ ಪುನರಾಗಮನದ ಹೊತ್ತಿನಲ್ಲೇ ತಮ್ಮ ಶಂಕರನ ಕೂಸು ಸಂಕೇತ್‌ ಬೀದಿ ಪಾಲಾಯಿತು. ಕೈ ಚೆಲ್ಲಿದ ಅನಂತ್‌, ಶಂಕರ್‌ ಗೆಳೆಯ- ಅಭಿಮಾನಿಗಳ ಕೋಪಕ್ಕೂ ತುತ್ತಾದರು. ಸಚಿವರಾಗಿದ್ದರೆ ಏನಾದರೂ ಮಾಡಬಹುದಿತ್ತು ಎಂದು ಆಗ ಅವರಿಗೆ ಅನ್ನಿಸಿರಲೂಬಹುದು.

  ರಾಜಕೀಯದಲ್ಲೀಗ ಅನಂತ್‌ ಸವಕಲು ನಾಣ್ಯ. ಮೊದಲಿನಂತೆ ಹಿಂಬಾಲಕರಿಲ್ಲ . ಪಟೇಲ್‌ ಇಲ್ಲದಿರುವುದರಿಂದ, ಹೆಗಡೆ ಕೃಪೆ ವಕ್ರವಾಗಿರುವುದರಿಂದ ‘ಗುರು ಕಟಾಕ್ಷ’ ವೂ ಬೆನ್ನಿಗಿಲ್ಲ . ಅವರು ತಾಂತ್ರಿಕವಾಗಿ ಸಂಯುಕ್ತ ಜನತಾದಳದಲ್ಲಿದ್ದರೂ, ಪಕ್ಷದ ಚಟುವಟಿಕೆಗಳಲ್ಲಿ ಅವರ ಪಾಲೂ ಏನೂ ಇಲ್ಲ . ಪರಿಸ್ಥಿತಿ ಇಂತಿರುವಾಗ ಅನಂತ್‌ ರಾಜಕೀಯದಿಂದ ನಿವೃತ್ತರಾಗುತ್ತಾರಾ ಅನ್ನುವ ಪ್ರಶ್ನೆ ಮತ್ತೆ ಜೀವಂತವಾಗುತ್ತದೆ.

  ಇತ್ತೀಚೆಗೆ ಮೈಸೂರಿನಲ್ಲಿ ನಡೆದ ‘ಚಿಟ್ಟೆ ’ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತನಾಗ್‌ ಮಾತುಗಳಲ್ಲಿ ರಾಜಕಾರಣದಿಂದ ಅವರು ದೂರವಾಗುವ ಇಂಗಿತವಿತ್ತು . ಆ ಹೊತ್ತು ಅನಂತ್‌ ಮಾತಾಡುವ ಮೂಡಲ್ಲಿದ್ದರು. ಅವರು ಮಾತುಗಳು ಎಷ್ಟು ಸ್ವಾರಸ್ಯಕರವಾಗಿದ್ದವೆಂದರೆ, ಸ್ಯಾಂಪಲ್‌ ನೋಡಿ-

  • ರಾಜಕೀಯ- ಸಿನಿಮಾ ಯಾವುದನ್ನೂ ಬಿಟ್ಟಿಲ್ಲ . ಆದರೆ, ದಳದ ಯಾವ ಬಣದೊಂದಿಗೂ ನಾನು ಗುರ್ತಿಸಿಕೊಂಡಿಲ್ಲ . ನನ್ನ ಪಾಡಿಗೆ ಸುಮ್ಮನಿದ್ದೇನೆ. ಪಕ್ಷವೇನೂ ನನ್ನನ್ನು ನಿರ್ಲಕ್ಷಿಸಿಲ್ಲ . ನಾನೇ ಪಕ್ಷದ ಬಗ್ಗೆ ಉದಾಸೀನದಿಂದಿದ್ದೇನೆ.
  • ಕಣ್ಣಿಗೆ ಕಾಣುತ್ತಿರುವುದು ಜಾತ್ಯತೀತ- ಸಂಯುಕ್ತ ದಳಗಳು ಮಾತ್ರ. ಇಂಗ್ಲೀಷ್‌ ವರ್ಣಮಾಲೆಯಲ್ಲಿನ ಎಲ್ಲ ಅಕ್ಷರಗಳನ್ನು ಸಂಕೇತಿಸುವ ದಳಗಳೂ ಅಲ್ಲಿವೆ.
  • ಕನ್ನಡ ಸಿನಿಮಾಕ್ಕೆ ಹೊಸಬರು ಬರುತ್ತಿದ್ದಾರೆ. ಅವರನ್ನು ಜನ ಸ್ವೀಕರಿಸುತ್ತಿದ್ದಾರೆ. ಇದೇ ರೀತಿ ರಾಜಕಾರಣಕ್ಕೂ ಹೊಸಬರು ಬರಬೇಕು. ಎರಡನೆಯ ಹಂತದ ನಾಯಕರೇ ಷಷ್ಟಾ ್ಯಬ್ಧಿ ಆಚರಿಸಿಕೊಳ್ಳುತ್ತಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡಬೇಕು.
  • ದೇಶದಲ್ಲಿ ರಾಜಕಾರಣದ ವಿಚಾರಧಾರೆ ಬದಲಾಗುತ್ತಿದೆ. ಕೇಂದ್ರದಲ್ಲಿ ಒಬ್ಬನೇ ವ್ಯಕ್ತಿ ಅಥಪಾ ಪಕ್ಷದ ಏಕಸ್ವಾಮ್ಯ ಸಾಧ್ಯವಿಲ್ಲ . ಸಮ್ಮಿಶ್ರ ಸರ್ಕಾರವೇ ಅನಿವಾರ್ಯ.
  ವಾರ್ತಾ ಸಂಚಯ
  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X