ನಾಗರ ಪಂಚಮಿ ಆಚರಿಸಿ ಅಭಿಮಾನಿಗಳ ಮನಗೆದ್ದ ನಟಿ ಪ್ರಣೀತಾ ಸುಭಾಷ್
ದೇಶದ ಹಲವೆಡೆ ಇಂದು (ಆಗಸ್ಟ್ 21) ನಾಗರ ಪಂಚಮಿ ಸಂಭ್ರಮ. ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಭಕ್ತರು ನಾಗರ ಕಲ್ಲಿಗೆ ಹಾಲೆರೆಯುವುದು, ನಾಗ ಬನಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಾರೆ.
ರಾಜ್ಯದಲ್ಲಿ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದ್ದು, ಚಂದನವನದಲ್ಲಿ ಮಿಂಚಿ ಈಗ ಹಲವು ಭಾಷೆಗಳಲ್ಲಿ ನಟಿಸುತ್ತಿರುವ ಕನ್ನಡದ ನಟಿ ಪ್ರಣೀತಾ ಸುಭಾಷ್ ಕೂಡ ನಾಗರ ಪಂಚಮಿ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ. ಹಬ್ಬದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ತಿಳಿ ಗುಲಾಬಿ, ಕೇಸರಿ, ಬಿಳಿ ಬಣ್ಣದ ಹೂಗಳಿರುವ ಚೂಡಿದಾರ್ ಧರಿಸಿ, ತಲೆಯ ತುಂಬಾ ಹೂ ಮುಡಿದು ಭಕ್ತಿಯಿಂದ ನಾಗ ದೇವತೆಗೆ ನಮಸ್ಕರಿಸುತ್ತಿರುವ ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ನಾಗರ ಕಲ್ಲುಗಳಿಗೆ ಪೂಜೆ ಮಾಡಿ, ನಂತರ ದೇವತೆಗೆ ಪೂಜೆ ಮಾಡಿಸುತ್ತಿರುವ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ನಾಗರ ಪಂಚಮಿಯನ್ನು ದೇಶದ ಹಲವು ಭಾಗಗಳಲ್ಲಿ ಆಚರಿಸಲಾಗುತ್ತದೆ. ಬಿಹಾರ, ಬಂಗಾಳ, ಒಡಿಶಾ, ರಾಜಸ್ಥಾನದ ಜನರು ಕೃಷ್ಣ ಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಉಳಿದ ರಾಜ್ಯಗಳು ಶುಕ್ಲ ಪಕ್ಷದ ಪಂಚಮಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಶ್ರಾವಣ ಸೋಮವಾರದಂದು ಪಂಚಮಿ ಬರುವ ಕಾರಣ ಇದರ ಮಹತ್ವ ಹೆಚ್ಚಿದೆ.

ನಟಿ ಪ್ರಣೀತಾ ಸುಭಾಷ್ ಅನೇಕ ಬಾರಿ ತಮ್ಮ ವೈಯಕ್ತಿಕ ಜೀವನದಲ್ಲಿ ಹಿಮದೂ ಧರ್ಮದ ಪೂಜಾ- ಪಾಠಗಳನ್ನು ಆಚರಿಸುವ ಮೂಲಕ, ಧಾರ್ಮಿಕ ಕೆಲಸಗಳನ್ನು ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ತಾವು ಸನಾತನ ಹಿಂದೂ ಧರ್ಮದ ಪ್ರಕಾರ ನಡೆಯುವುದಾಗಿಯೂ, ಅದರಲ್ಲಿ ಹೇಳಿರುವುದು ತಮ್ಮ ಒಳಿತಿಗಾಗಿ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ.
ಟ್ರೋಲ್‌ಗಳಿಗೆ ಸೆಡ್ಡು ಹೊಡೆದು ಭೀಮನ ಅಮವಾಸೆ ಆಚರಿಸಿದ್ದ ನಟಿ!
ಕಳೆದ ವರ್ಷ ನಟಿ ಪ್ರಣೀತಾ ಸುಭಾಷ್ ಭೀಮನ ಅಮಾವಾಸೆಯಂದು ತಮ್ಮ ಪತಿಯ ಪಾದ ಪೂಜೆ ಮಾಡಿ ಟ್ರೋಲ್‌ಗೆ ಒಳಗಾಗಿದ್ದರು. ಹಾಗಂತ ಈ ಬಾರಿ ಸುಮ್ಮನೆ ಇರಲಿಲ್ಲ. ಈ ಸಲಿಯೂ ತಮ್ಮ ಪತಿಯ ಪಾದ ಪೂಜೆ ಮಾಡಿ ನಿಮ್ಮ ನಂಬಿಕೆ ನಿಮ್ಮದು ನನ್ನ ನಂಬಿಕೆ ನನ್ನದು ಎಂದು ಹೇಳಿ, ಪೂಜೆ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು.
"ಇಂದು ಬೆಳಗ್ಗೆ ಭೀಮನ ಅಮವಾಸ್ಯೆಯಂದು ಪೂಜೆ ಸಲ್ಲಿಸಿದ್ದೇನೆ. ನಿಮಗೆ, ಇದು ಪಿತೃಪ್ರಭುತ್ವದ ಪ್ರದರ್ಶನವಾಗಿರಬಹುದು. ಆದರೆ ನನಗೆ ಇದು ಹೆಚ್ಚಿನ ಮಹತ್ವ ಹೊಂದಿದೆ. ಸನಾತನ ಧರ್ಮದಲ್ಲಿ, ಹೆಚ್ಚಿನ ಆಚರಣೆಗಳು ಏಕೆ ಮಹತ್ವದ್ದಾಗಿದೆ ಎಂಬುದನ್ನು ತಿಳಿಸಲು ಒಂದು ಕಥೆಯಿದೆ ಮತ್ತು ಹಿಂದೂ ಆಚರಣೆಗಳು ಪಿತೃಪ್ರಧಾನವೆಂದು ವಾದಿಸುವುದು ಸಂಪೂರ್ಣವಾಗಿ ಆಧಾರರಹಿತ. ಏಕೆಂದರೆ ಇದು ದೇವಿಯರನ್ನು ಸಮಾನವಾಗಿ ಪೂಜಿಸುವ ಕೆಲವು ನಂಬಿಕೆಗಳಲ್ಲಿ ಒಂದು" ಎಂದು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ್ದರು.
ನಟಿ ಪ್ರಣೀತಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 2010 ರಲ್ಲಿ ನಟ ದರ್ಶನ್ ಜೊತೆಗೆ ಪೊರ್ಕಿ ಚಿತ್ರದ ಮೂಲ ಸಿನಿರಂಗಕ್ಕೆ ಕಾಲಿಟ್ಟರು. 2012 ರಲ್ಲಿ ದುನಿಯಾ ವಿಜಯ್ ಜೊತೆಗೆ ಭೀಮಾ ತೀರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಇದಾದ ನಂತರ ತೆಲುಗು ಸಿನಿಮಾ ಬಾವ (2010), ಅತ್ತಾರಿಂಟಿಕಿ ದಾರೇದಿ (2013), ಮಸ್ಸು ಎಂಗಿರ ಮಸಿಲಮಣಿ (2015), ಮತ್ತು ಎನಕ್ಕು ವೈತ ಆದಿಮೈಗಳು (2017) ನಂತಹ ಹಲವಾರು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











