»   » ನಾಗಾಭರಣ ಸಂದರ್ಶನ : ‘ಇತ್ತೀಚೆಗೆ ನಾನುಸಿನಿಮಾನೇ ನೋಡಿಲ್ಲ’

ನಾಗಾಭರಣ ಸಂದರ್ಶನ : ‘ಇತ್ತೀಚೆಗೆ ನಾನುಸಿನಿಮಾನೇ ನೋಡಿಲ್ಲ’

Posted By: Staff
Subscribe to Filmibeat Kannada

'ಹೆಜ್ಜೆ ಹೆಜ್ಜೆ ಮಾತಾಡು.. ಗೆಜ್ಜೆ ಗೆಜ್ಜೆ ಮಾತಾಡು...' ಹಾಡಿಗೆ ಗಾಯತ್ರಿ ಎಂಬ ಹೊಸ ನಟಿ ಹಾಕಿದ ಹೆಜ್ಜೆಯ ಮಿಕ್ಸಿಂಗ್‌ ನಡೆಯುತ್ತಿದೆ. ಅದಕ್ಕೂ ಮುನ್ನ ಎತ್ತಿನ ಬಂಡಿಯಾಂದು ಜಲಪಾತಕ್ಕೆ ಬೀಳುವ ದೃಶ್ಯದ ಮಿಕ್ಸಿಂಗ್‌. ಸ್ಥಳ- ಕಂಠೀರವ ಸ್ಟುಡಿಯೋದ ಆವರಣದಲ್ಲಿರುವ ಪ್ರಸಾದ್‌ ಥಿಯೇಟರ್‌ ರೆಕಾರ್ಡಿಂಗ್‌ ಲ್ಯಾಬ್‌. ಚಿತ್ರದ ಹೆಸರು ನೀಲಾ. ಬಿಜಿಯಾಗಿದ್ದಾರೆ ನಿರ್ದೇಶಕ ನಾಗಾಭರಣ. ಕೆಲಸದ ನಡುವೆಯೇ ನಮ್ಮೊಟ್ಟಿಗೆ ಅವರು ಮಾತಾಡಿದ್ದಾರೆ.

ಟಿವಿ ಧಾರಾವಾಹಿ ಪ್ರಶಸ್ತಿ ವಿವಾದದೊಂದಿಗೇ ಈಗ ಮಾತು ಶುರುಮಾಡಬೇಕು. ಇದೆಲ್ಲಾ ಏನು ?
ಪ್ರಶಸ್ತಿ ವಿಷಯ ಕೇಳಿ ನನಗೆ ಆಶ್ಚರ್ಯ ಆಯಿತು. ನನಗೆ ಅದರ ಬಗ್ಗೆ ಗೊತ್ತೇ ಇರಲಿಲ್ಲ. ಯಾವುದೇ ಪ್ರಶಸ್ತಿ ಕೊಡೋದಕ್ಕೆ ಒಂದು module ಇರಬೇಕು. ಪ್ರಶಸ್ತಿ ಕೊಟ್ಟಿರೋ ರೀತಿ ಸರಿಯಿಲ್ಲ. 1999ರ ಧಾರಾವಾಹಿಯಿಂದಲೇ ಯಾಕೆ ಪ್ರಶಸ್ತಿ ಪ್ರಾರಂಭ ಅನ್ನೊದು ನಮ್ಮ ಪ್ರಶ್ನೆ.

ಈಗ 'ಮಾಯಾಮೃಗ'ಕ್ಕೆ ಪ್ರಶಸ್ತಿ ಬಂದಿದೆ. ವೈಯಕ್ತಿಕವಾಗಿ ಈ ಧಾರಾವಾಹಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಬಗೆಗಿನ ವಿರೋಧದ ಮಾತಿನ ನಡುವೆ ಕೆಲವರು ಒಂದು ತಪ್ಪು ಮಾತು ಆಡಿಬಿಟ್ಟರು. ವಾರ್ತಾ ಸಚಿವ ಬಿ.ಕೆ.ಚಂದ್ರಶೇಖರ್‌ ಅವರ ಹೆಂಡತಿ ಲಕ್ಷ್ಮಿ ಚಂದ್ರಶೇಖರ್‌ ಮಾಯಾಮೃಗ ಸೀರಿಯಲ್‌ನಲ್ಲಿ ಮಾಡಿರೋದಕ್ಕೇ ಪ್ರಶಸ್ತಿ ಕೊಟ್ಟಿದ್ದಾರೆ ಅಂತ. ಇದು ನನ್ನ ಅಭಿಪ್ರಾಯ ಅಲ್ಲ. ಲಕ್ಷ್ಮಿ ಚಂದ್ರಶೇಖರ್‌ ಒಬ್ಬ ಒಳ್ಳೆ ಕಲಾವಿದೆ.
ವೈಯಕ್ತಿಕವಾಗಿ ನಾನೂ ಮಾಯಾಮೃಗವನ್ನ ಮೆಚ್ಚಿಕೊಂಡಿದ್ದೀನಿ. ಟಿ.ಎನ್‌.ಸೀತಾರಾಂ ಕೆಲಸ ಚೆನ್ನಾಗಿದೆ. ಪಾತ್ರಗಳ ನಿರ್ವಹಣೆಯೂ ಮೆಚ್ಚುವಂಥದ್ದು. ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದು, ಮಾಯಾಮೃಗಕ್ಕೇ ಪ್ರಶಸ್ತಿ ಸಿಕ್ಕಿದ್ದರೆ ನಾವು ಮಾತಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಸೀತಾರಾಂ ಇದನ್ನ ಸ್ಪೋರ್ಟಿವ್‌ ಆಗಿ ತಗೋಬೇಕು. ಪ್ರಶಸ್ತಿಯನ್ನ ಸ್ವೀಕರಿಸಬೇಕು.


ಬಿ.ಕೆ.ಚಂದ್ರಶೇಖರ್‌ ಹೇಳಿದ್ದಾರೆ- ಎಲ್ಲಾ ಸೀರಿಯಲ್‌ಗಳ ಕೆಸೆಟ್‌ ತರಿಸಿಕೊಂಡು ನೋಡೋದು ತಡವಾಗುತ್ತದೆ ಎಂಬ ಕಾರಣಕ್ಕೆ ಶುರುವಿಗೆ ಡಿಡಿ 1ರ ಧಾರಾವಾಹಿಗಳನ್ನು ಮಾತ್ರ ಪ್ರಶಸ್ತಿಗೆ ಆರಿಸಿದ್ದೇವೆ ಎಂದು.
ಅದನ್ನು ಮೊದಲೇ ಹೇಳಬಹುದಿತ್ತು. ಪ್ರಶಸ್ತಿ ಪ್ರಕಟಿಸಿದಾಗಲೇ, ಈ ವಿಷಯ ಗೊತ್ತಾದದ್ದು. ಹಿಂದಿಯಲ್ಲಿ ಅಷ್ಟೆಲ್ಲಾ ಚಾನೆಲ್‌ಗಳಿವೆ. ಅಲ್ಲಿ ಹೇಗೆ ಪ್ರಶಸ್ತಿ ಕೊಡ್ತಾರೆ ? ನಮ್ಮಲ್ಲಿರೋದೇ ಮೂರು ಮತ್ತೊಂದು ಚಾನೆಲ್‌. ಅದರಲ್ಲೂ ಪ್ರಶಸ್ತಿ ಆಯ್ಕೆ ಕಷ್ಟ ಅಂದರೆ ಏನು ಹೇಳೋಕಾಗುತ್ತೆ ?

'ನೀಲಾ' ಯಾವಾಗ ಪೂರೈಸಲಿದೆ?
ಇನ್ನೊಂದು ತಿಂಗಳಲ್ಲಿ

'ನೀಲಾ'ಗೆ ಮಲೆಯಾಳಿ ಹುಡುಗಿ (ಶಾಲಿನಿ) ಯನ್ನು ಯಾಕೆ ಆಯ್ಕೆ ಮಾಡಿದಿರಿ. ನಾಯಕಿ ಗಾಯತ್ರಿಯೇ ಈ ಪಾತ್ರಕ್ಕೆ (ಮಿಕ್ಸಿಂಗ್‌ ಕಾರ್ಯದಲ್ಲಿ ಆಕೆಯ ಹಾಡಿನ ದೃಶ್ಯ ಕಾಣುತ್ತಿತ್ತು) ಯಾಕೆ ?
ಸರಿ, ಗಾಯತ್ರಿಗೆ ಒಂದು ಆಲ್ಟರ್ನೇಟಿವ್‌ ಹೇಳಿ ನೋಡೋಣ.

ವಿಜಯಲಕ್ಷ್ಮಿ
ಆಗಲ್ಲ ಬಿಡಿ

ತಾರಾ
ತಾರಾಗೆ ಡಾನ್ಸ್‌ ಮಾಡೋಕಾಗುತ್ತಾ ?

ಪ್ರೇಮ
ಪ್ರೇಮ ಎಷ್ಟು ಸಿನಿಮಾದಲ್ಲಿ ಅಂತ ಮಾಡ್ತಾರೆ ? ಜೊತೆಗೆ ನೀವು ಅನು ಪ್ರಭಾಕರ್‌ ಹಾಗೂ ಪ್ರೇಮ ಅವರನ್ನು ಸಾಕಷ್ಟು ಚಿತ್ರಗಳಲ್ಲಿ ನೋಡಿರೋದರಿಂದ ನನ್ನ ಚಿತ್ರದಲ್ಲಿ ಅದೇ ಇಮೇಜಿನಿಂದಲೇ ನೀವು ಅವರನ್ನು ನೋಡುತ್ತೀರಿ.

ಈ ಕಾರಣಕ್ಕೆ ಹೊರಗಿನ ನಟಿಯರೇ ಬೇಕಾಯ್ತ ?
ನಮ್ಮಲ್ಲಿ ಹೊರಗಿನಿಂದ ಕತೆ ತಂದು, ರೀಮೇಕ್‌ ಮಾಡ್ತಾರೆ. ನಾನು ಹೊರಗಿನವರನ್ನು ಕರೆದು ತಂದರೆ, ಅವರಲ್ಲಿ ನಮ್ಮ ಸಂಸ್ಕೃತಿಯನ್ನೇ ತೋರಿಸೋದು. ಜನುಮದ ಜೋಡಿಯಲ್ಲಿ ಜನ ಶಿಲ್ಪ ಅವರಲ್ಲಿ ನೋಡಿದ್ದು ನಮ್ಮೂರ ಹುಡುಗಿಯನ್ನು; ಮಲಯಾಳಿಯನ್ನಲ್ಲ. ಗಾಯತ್ರಿ ಹೊರಗಿನವರಲ್ಲ. ಆಕೆ ಗುಲ್ಬರ್ಗಾದವರು. ಕನ್ನಡ ಓದೋಕೆ- ಬರೆಯೋಕೆ ಬರುತ್ತೆ. ಈಗ ಮುಂಬೈನಲ್ಲಿ ನೆಲೆಸಿದ್ದಾರೆ. ರಾಹುಲ್‌ ರಾಯ್‌ ಜೊತೆ ಒಂದು ಹಿಂದಿ ಸಿನಿಮಾದಲ್ಲಿ , ಅಜಿತ್‌ ಜೊತೆ ಒಂದು ತಮಿಳು ಸಿನಿಮಾದಲ್ಲಿ ಆ್ಯಕ್ಟ್‌ ಮಾಡ್ತಿದಾರೆ.

'ನೀಲಾ' ನಿಮಗೆ ಪೂರ್ತಿ ತೃಪ್ತಿ ತಂದಿದೆಯೆ?
ಖಂಡಿತ. ನಾನು ಏನು ಹೇಳಬಯಸಿದ್ದೆನೋ, ಅದು ಈಡೇರಿದೆ. ಪಾತ್ರಗಳೂ ಚೆನ್ನಾಗಿ ಮೂಡಿವೆ.

ವ್ಯಾಸರಾಯ ಬಲ್ಲಾಳರ ಕಾದಂಬರಿ 'ಹೆಜ್ಜೆ'ಯನ್ನು ಕುಮಾರ ಸ್ವಾಮಿ ನಿರ್ಮಿಸಲು ಹೊರಟಿದ್ದಾರೆ. ನಿಮಗೇ ನಿರ್ದೇಶನದ ಕೆಲಸ ಸಿಕ್ಕಿದ್ದು ಹೇಗೆ?
ಕಾದಂಬರಿ ಓದಿದ ನಾನು ಬಲ್ಲಾಳರ ಹತ್ತಿರ ಹೋಗಿ, ಅದನ್ನು ಮೆಗಾ ಸೀರಿಯಲ್‌ ಮಾಡ್ತೀನಿ ಅಂದೆ. ಅವರು ಒಪ್ಪಿದರು. ನಂತರ ಕುಮಾರ ಸ್ವಾಮಿ ಬಲ್ಲಾಳರ ಹತ್ತಿರ ಹೋಗಿ, ಹೆಜ್ಜೆಯನ್ನು ಸಿನಿಮಾ ಮಾಡ್ತೀನಿ ಅಂದರಂತೆ. ಬಲ್ಲಾಳರು, ಇಲ್ಲ ನಾನು ನಾಗಾಭರಣ ಅವರಿಗೆ ಸೀರಿಯಲ್‌ ಮಾಡೋಕೆ ಅನುಮತಿ ಕೊಟ್ಟಿದೀನಿ ಅಂತ ಹೇಳಿದರಂತೆ. ನಾನೂ ಈ ಸಿನಿಮಾನ ಭರಣ ಅವರ ಕೈಲೇ ಮಾಡಿಸ್ಬೇಕು ಅಂದರಂತೆ ಕುಮಾರಸ್ವಾಮಿ. ಮಿಕ್ಕಿದ್ದು ನಿಮಗೆಲ್ಲಾ ಗೊತ್ತೇ ಇದೆ.

'ಹೆಜ್ಜೆ', ನಾನೂರಕ್ಕೂ ಹೆಚ್ಚು ಪುಟಗಳ ದೊಡ್ಡ ಕಾದಂಬರಿ. ಅದನ್ನು ಸಿನಿಮಾ ಮಾಡೋದು ಕಷ್ಟ ಆಗೋಲ್ವೆ. ಸಿನಿಮಾದಲ್ಲಿ ಕಾದಂಬರಿಯ ಯಾವುದಾದರೂ ಪಾತ್ರಗಳು ಎಲಿಮಿನೇಟ್‌ ಆಗುತ್ತವೆಯೇ?
ಹೆಜ್ಜೆಯಲ್ಲಿ ವಿದ್ಯಾಧರ ಹಾಗೂ ಸಾವಿತ್ರಿ ಎಂಬ ಪಾತ್ರಗಳು ಮುಖ್ಯವಾದವು. ಹಲವಾರು ಘಟನೆಯ ಆಳಕ್ಕೆ ಹೋಗಿ ಮತ್ತೆ ಕತೆಯ ಮುಖ್ಯ ಹಂದರಕ್ಕೇ ತಂದು ನಿಲ್ಲಿಸುತ್ತದೆ ಕಾದಂಬರಿಯ ನಿರೂಪಣೆ. ಹೀಗಾಗಿ ಖಂಡಿತ ಕಾದಂಬರಿಯ ಸಾರವನ್ನು ಸಿನಿಮಾದಲ್ಲಿ ಹಿಡಿದಿಡಲು ಸಾಧ್ಯ. ಈ ಹಂತದಲ್ಲಿ ಕೆಲವು ಪಾತ್ರಗಳನ್ನ ಎಲಿಮಿನೇಟ್‌ ಮಾಡಬೇಕಾಗುತ್ತೆ.

'ಹೆಜ್ಜೆ'ಗೆ ತಯಾರಿ ಹೇಗೆ ನಡೆದಿದೆ ?
ಸದ್ಯಕ್ಕೆ ಕಾದಂಬರಿಯ ಸಾರವನ್ನು ಸಂಕ್ಷಿಪ್ತ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಎಲ್‌.ಎಸ್‌.ಶೇಷಗಿರಿ ರಾವ್‌, ಚಿ.ಶ್ರೀನಿವಾಸ ರಾಜು ಹಾಗೂ ರಾಘವೇಂದ್ರ ರಾವ್‌, ಬಲ್ಲಾಳರ ಜೊತೆ ಈ ಬಗ್ಗೆ ಮಾತುಕತೆಯಲ್ಲಿ ತೊಡಗಿದ್ದಾರೆ. ಯಾವುದೋ ತುರ್ತು ಕೆಲಸದಲ್ಲಿ ಬಿಜಿಯಾಗಿರುವ ಜಯಂತ್‌ ಕಾಯ್ಕಿಣಿ ಕೂಡ ಈ ಕೆಲಸಕ್ಕೆ ಬಂದು ಕೂಡಲಿದ್ದಾರೆ.

'ಈ ಟಿವಿ'ಯಲ್ಲಿ ಇದ್ದಕ್ಕಿದ್ದಂತೆ ಧಾರಾವಾಹಿಗಳು ಎತ್ತಂಗಡಿಯಾಗುತ್ತಿವೆ. ಇದು ಯಾಕೆ?
ನನಗದು ಗೊತ್ತಿಲ್ಲ. ಆದರೆ ಈಟಿವಿ ಅವರು ಉದಯ ಟಿವಿ ಅಷ್ಟು ಫ್ಲೆಕ್ಸಿಬಲ್‌ ಆಗಿಲ್ಲ. ಧಾರಾವಾಹಿ ಮಾಡ್ತೀವಿ ಅಂತ ಹೋದ್ರೆ ಸ್ಕಿೃಪ್ಟ್‌ ಕೊಡಿ, ಕ್ವಾಲಿಟಿ ನಮ್ಮ ನಿರೀಕ್ಷೆಯಷ್ಟು ಬಾರದಿದ್ದರೆ ಅರ್ಧಕ್ಕೇ ನಿಲ್ಲಿಸುತ್ತೇವೆ ಅಂತಾರಂತೆ. ಜೊತೆಗೆ ನಿರ್ದೇಶಕರಿಗೆ ರಾಯಲ್ಟಿ ಎಷ್ಟು ಅಂತ ಬೇರೆ ಫಿಕ್ಸ್‌ ಮಾಡ್ತಾರಂತೆ. ಉದಯ ಟಿವಿಯೋರು ನನ್ನ ನಂಬ್ತಾರೆ. ನಾನು ಧಾರಾವಾಹಿ ಕೆಲಸವನ್ನ ಒಂದು ಪ್ರಾಜೆಕ್ಟ್‌ ಆಗಿ ತಗೋತೀನಿ. ಈಟೀವಿಗೆ ನಾನು ಯಾವ ಸೀರಿಯಲ್ಲನ್ನೂ ಮಾಡುತ್ತಿಲ್ಲ.

ಕಿರುತೆರೆಯ ಮೆಗಾ ಧಾರಾವಾಹಿಗಳಲ್ಲಿ ಸಿನಿಮಾ ನಿರ್ದೇಶಕರು ತಮ್ಮನ್ನು ತಾವು ಪ್ರಧಾನ ನಿರ್ದೇಶಕರಾಗಿ ಪ್ರೊಜೆಕ್ಟ್‌ ಮಾಡಿಕೊಳ್ತಾರೆ. ಆದರೆ ವಾಸ್ತವದಲ್ಲಿ ಸಂಚಿಕೆ ನಿರ್ದೇಶಕರೇ ಧಾರಾವಾಹಿಯ ನಿರ್ದೇಶಕರು. ಇದು ಪ್ರೇಕ್ಷಕರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂಬ ಮಾತಿದೆ. ಇದಕ್ಕೆ ನೀವೇನಂತೀರಿ?
ಬೇರೆಯೋರ ವಿಚಾರ ನನಗೆ ಗೊತ್ತಿಲ್ಲ . ಸಂಕ್ರಾಂತಿ ದೈನಿಕ ಧಾರಾವಾಹಿಯಲ್ಲಿ ನಾನು ಸಂಪೂರ್ಣವಾಗಿ ತೊಡಗಿಸಿಕೊಂಡೆ. ಮೆಗಾ ಧಾರಾವಾಹಿಗೆ ಸಂಚಿಕೆ ನಿರ್ದೇಶಕರು ಅತ್ಯಗತ್ಯ. ಅದು ಸಿನಿಮಾದಂತೆ ಅಲ್ಲ. ಇಂಥಾ ಸೀರಿಯಲ್‌ಗಳು ಚೆನ್ನಾಗಲು ಟೀಮ್‌ ವರ್ಕ್‌ ಮುಖ್ಯ. ಈಗ ನನಗೇನಾದರೂ ಹುಷಾರಿಲ್ಲದಂತಾದರೆ, ಸಂಚಿಕೆ ನಿರ್ದೇಶಕ ಆ ಕೊರತೆಯನ್ನು ತುಂಬಬಲ್ಲ. ಸಂಕ್ರಾಂತಿ ಒಂದೇ ವಾರಕ್ಕೆ ಏಳೂ ದಿನ ಪ್ರಸಾರ ಆಗ್ತಿರೋದು.

ನಿಮ್ಮ ಮುಂದಿನ ಯೋಜನೆಗಳು?
ಚದುರಂಗರ ವೈಶಾಖ, ನಿರಂಜನರ ಬನಶಂಕರಿ, ಪಂಚಕಜ್ಜಾಯ- ಇವನ್ನ ಧಾರಾವಾಹಿಯಾಗಿ ತರೋ ಯೋಜನೆಗಳಿವೆ. ಯಾವಾಗ ಶುರುವಾಗುತ್ತೋ ಗೊತ್ತಿಲ್ಲ.

ರೀಮೇಕ್‌ ವಿಷಯದಲ್ಲಿ ನೀವು ಏನಂತೀರಿ ?
ಅದು ಅಕ್ಷಮ್ಯ. ಇಂಡಸ್ಟ್ರಿ ಡೆವೆಲಪ್‌ ಆಗೋದಕ್ಕೆ ಎಲ್ಲೋ ಒಂದೋ ಎರಡೋ ರೀಮೇಕ್‌ ಸಹ್ಯ. ನೂರರಲ್ಲಿ ಅವೇ ಎಪ್ಪತ್ತಾದರೆ ?!

ನೀವು ಭೈರಪ್ಪನವರ 'ಮತದಾನ' ಮಾಡಬೇಕಿತ್ತಂತೆ. ನಿಜವೇ?
ಕೇಳೋಕೆ ಹೋಗಿದ್ದೆ. ಯಾಕೋ ಅವರಿಗೆ ನಾನು ಮಾಡೋದು ಸರಿ ಬೀಳಲಿಲ್ಲ. ಹೋಗಲಿ ಬಿಡಿ. ಸೀತಾರಾಂ ಅದೇ ಸಿನಿಮಾ ಮಾಡಿದರು. ನನಗೆ ಆ ಸಿನಿಮಾ ನೋಡೋಕೂ ಆಗ್ಲಿಲ್ಲ. ನೋಡಿದ್ದರೆ ಹೇಗಿದೆ ಅಂತ ಹೇಳಬಹುದಾಗಿತ್ತು.

ಇತ್ತೀಚಿನ ಯಾವ ಸಿನಿಮಾ ನಿಮಗೆ ಇಷ್ಟವಾಯಿತು?
ಯಾವ ಸಿನಿಮಾನೂ ನೋಡೋಕೆ ಪುರುಸೊತ್ತೇ ಆಗ್ಲಿಲ್ಲ. ಶೂಟಿಂಗ್‌ಗೆ ಅಂತ ಸವದತ್ತಿ ಅಲ್ಲಿ ಇಲ್ಲಿ ಸುತ್ತೋದೇ ಆಯ್ತು. ಬೆಳಗ್ಗೆ ಏಳು ಏಳೂವರೆಗೆ ಮನೆ ಬಿಟ್ಟರೆ ವಾಪಸ್ಸಾಗೋದು ರಾತ್ರಿ ಒಂಬತ್ತು, ಒಂಬತ್ತೂವರೆ ಗಂಟೆಗೆ.

ಹಾಗಾದರೆ 'ಹೆಜ್ಜೆ'ಯಂಥಾ ದೊಡ್ಡ ಪುಸ್ತಕ ಓದಲು ಸಮಯ ಎಲ್ಲಿಂದ ತರುತ್ತೀರಿ?
ಶೂಟಿಂಗ್‌ನಿಂದ ಹೊರತಾದ ಸಮಯಾನ ಪುಸ್ತಕ ಓದೋಕೆ ಬಳಸಿದ್ದರಿಂದಲೇ ಸಿನಿಮಾ ನೋಡೋಕೆ ಆಗಿಲ್ಲ.

ನಾಗಾಭರಣ ನೀಲಾ ಸಿನಿಮಾದ ಮಿಕ್ಸಿಂಗ್‌ ಕೆಲಸದಲ್ಲಿ ತುಂಬಾ ಬಿಜಿಯಾದರು. ಮತ್ತೆ ಗಾಡಿಯ ಓಟ, ಹೆಜ್ಜೆ ಹೆಜ್ಜೆ ... ಮುಂದುವರೆಯಿತು.

English summary
kannada.filmibeat.com exclusive- interview with sandalwood director t.s.nagabharana
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada