»   » ಬೆಂಗಳೂರು ಸುತ್ತಮುತ್ತಲೆಲ್ಲಾ ಹರಿದಾಡುತ್ತಿದೆ ‘ನಾಗರಹಾವು’

ಬೆಂಗಳೂರು ಸುತ್ತಮುತ್ತಲೆಲ್ಲಾ ಹರಿದಾಡುತ್ತಿದೆ ‘ನಾಗರಹಾವು’

Posted By: Super
Subscribe to Filmibeat Kannada
Nagarahavu
ಈ ಹೊತ್ತು ಬೆಂಗಳೂರು ನಗರ ಹಾಗೂ ಸುತ್ತಮುತ್ತ 'ನಾಗರಹಾವು" ಹರಿದಾಡುತ್ತಿದೆ. ಮೊನ್ನೆ ಜಯನಗರ ಶಾಪಿಂಗ್‌ ಕಾಂಪ್ಲೆಕ್ಸ್‌ಗೂ ಇದು ಲಗ್ಗೆ ಇಟ್ಟಿತ್ತು. ಏನು ಜಯನಗರ ಕಾಂಪ್ಲೆಕ್ಸ್‌ನಲ್ಲಿ ನಾಗರಹಾವೇ? ಎಂದು ಹುಬ್ಬು ಹಾರಿಸುತ್ತಿದ್ದೀರಾ.. ಇದು ರಾಕ್‌ಲೈನ್‌ ನಿರ್ಮಾಣದ 'ನಾಗರಹಾವು".

ಪುಟ್ಟಣ್ಣ ಕಣಗಾಲರ ಚಿರಸ್ಮರಣೀಯ ಚಿತ್ರದ 'ನಾಗರಹಾವು" ಹೆಸರಿನಲ್ಲೇ ಧೀರ ರಾಕ್‌ಲೈನ್‌ ಮತ್ತೊಂದು ಚಿತ್ರ ನಿರ್ಮಿಸುತ್ತಿದ್ದಾರೆ. ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸಿದ್ಧವಾಗುತ್ತಿರುವ ಮುಯ್ಯಿಗೆ ಮುಯ್ಯಿ ಕಥೆಯ ನಾಗರಹಾವನ್ನು ಎಂ. ನೀಲಕಂಠ ನಾಯ್ಡು ಅರ್ಪಿಸುತ್ತಿದ್ದಾರೆ.

ಈ ಚಿತ್ರದ ನಾಯಕ ಉಪೇಂದ್ರ. ನಾಯಕಿ ಜ್ಯೋತಿಕಾ. ಈಗಾಗಲೇ 'ನಾಗರಹಾವು" ಎರಡು ಸುತ್ತಿನ ಚಿತ್ರೀಕರಣದಲ್ಲಿ ಹರಿದಾಡಿದ್ದು, ಮೂರನೇ ಹಂತದ ಚಿತ್ರೀಕರಣದಲ್ಲಿ ವೇಗವಾಗಿ ಸಂಚರಿಸುತ್ತಿದೆ. ಈ ಹೊತ್ತು ಬೆಂಗಳೂರು ನಗರದ ಸುತ್ತ ಮುತ್ತ ಎಲ್ಲೆಲ್ಲೂ ನಾಗರಹಾವಿನ ತಂಡವೇ ಕಾಣಿಸುತ್ತಿದೆ.

ಇತ್ತೀಚೆಗೆ ನಟಿ ಜ್ಯೋತಿಕಾ - ಉಪೇಂದ್ರ ಅಭಿನಯದ ದೃಶ್ಯವೊಂದನ್ನು ಜಯನಗರದ ಶಾಂಪಿಗ್‌ ಕಾಂಪ್ಲೆಕ್ಸ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯ್ತು. ಶ್ರೀನಾಥ್‌, ಅಂಬಿಕಾ, ರಾಜೀವ್‌ ಅಭಿನಯದ ಹಲವಾರು ಹೃದಯಂಗಮ ಸನ್ನಿವೇಶಗಳಚಿತ್ರೀಕರಣ ಮೈಸೂರು ರಸ್ತೆಯಲ್ಲಿರುವ ಮನೆಯಲ್ಲಿ ನಡೆಯಿತು. ಈ ಎಲ್ಲ ದೃಶ್ಯಗಳನ್ನೂ ಯುವ ನಿರ್ದೇಶಕ ಮುರಳಿ ಅವರ ನಿರ್ದೇಶನದಂತೆ ಗಿರಿ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರು.

ಮೂರನೇ ಹಂತದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ನಾಲ್ಕನೆ ಹಾಗೂ ಕೊನೆ ಹಂತದ ಚಿತ್ರೀಕರಣ ಫೆಬ್ರವರಿಯಲ್ಲಿ ಆರಂಭವಾಗಲಿದೆ. ಚಿತ್ರದ ಎರಡು ಗೀತೆಗಳಿಗೆ ಕಣಗಾಲರ 'ನಾಗರಹಾವು" ಚಿತ್ರೀಕರಣಗೊಂಡ ಐತಿಹಾಸಿಕ ಸ್ಥಳ ಚಿತ್ರದುರ್ಗ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಸಲು ರಾಕ್‌ಲೈನ್‌ ಸಿದ್ಧತೆ ನಡೆಸಿದ್ದಾರೆ.

ಲೇಟೆಸ್ಟ್‌ 'ನಾಗರಹಾವು" ಚಿತ್ರದಲ್ಲಿ ಉಪೇಂದ್ರ, ಜ್ಯೋತಿಕಾ (ದ್ವಿಪಾತ್ರ) ಮನ್‌ದೀಪ್‌ ರಾಯ್‌, ಸಾಧು ಕೋಕಿಲಾ, ದೊಡ್ಡಣ್ಣ, ಎಂ.ಎಸ್‌. ಸುರೇಶ್‌, ಶಂಕರ್‌ರಾವ್‌, ರಾಕ್‌ಲೈನ್‌ ವೆಂಕಟೇಶ್‌ ಇದ್ದಾರೆ. ಹಂಸಲೇಖರ ಸಾಹಿತ್ಯ - ಸಂಗೀತ, ಶ್ಯಾಂ ಸಂಕಲನ, ಸಂಪತ್‌ರಾಜ್‌ ನೃತ್ಯ ಇದೆ. ಮುರಳಿ ಮೋಹನ್‌ ಚಿತ್ರಕತೆ- ಸಂಭಾಷಣೆ ಬರೆದು 'ನಾಗರಹಾವ"ನ್ನು ನಿರ್ದೇಶಿಸುತ್ತಿದ್ದಾರೆ.

English summary
Nagarahavu third round of shooting is in final stage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada