»   » ತೆಲುಗಿಗೆ ಹೊರಟಳು ನಾಗತಿಹಳ್ಳಿ ಹುಡುಗಿ

ತೆಲುಗಿಗೆ ಹೊರಟಳು ನಾಗತಿಹಳ್ಳಿ ಹುಡುಗಿ

Posted By: Staff
Subscribe to Filmibeat Kannada

ಚೌಲ್ಟರಿಯನ್ನು ಹೋಲುವ ಕಪಾಲಿಯಂಥ ಥಿಯೇರ್‌ನಲ್ಲಿ ಕನ್ನಡ ಸಿನಿಮಾವೊಂದು, ಅದೂ ಹೊಸಬರಿಂದಲೇ ಕೂಡಿದ ಸಿನಿಮಾ ನೂರು ದಿನ ಓಡುವುದೆಂದರೆ ಸುಮ್ಮನೆ ಮಾತಲ್ಲ . ಆದರೆ ಹುಡುಗಿಯ ಆಕರ್ಷಣೆ ದೊಡ್ಡದು. ನಾಗತಿಹಳ್ಳಿ ಹುಡುಗಿಯನ್ನು ಪ್ರೇಕ್ಷಕರು ತಮ್ಮ ಹುಡುಗಿಯಂತೆಯೇ ಕಂಡರು. ಆ ಅಭಿಮಾನ ಅವರಿಗೆ ಅರ್ಥವಾಗಿದೆ. ಆದ್ದರಿಂದಲೇ 'ನನ್ನ ಪ್ರೀತಿಯ ಹುಡುಗಿ"ಯನ್ನು 'ನಿಮ್ಮೆಲ್ಲರ ಪ್ರೀತಿಯ ಹುಡುಗಿ" ಎಂದು ಅವರು ಒಪ್ಪಿಕೊಂಡಿದ್ದಾರೆ, ಪ್ರೇಕ್ಷಕರಿಗೆ ಒಪ್ಪಿಸಿದ್ದಾರೆ.

ಮೊನ್ನೆಯಷ್ಟೇ ಉಪೇಂದ್ರ ನಾಯಕತ್ವದ 'ಸೂಪರ್‌ ಸ್ಟಾರ್‌" ಸಿನಿಮಾ ನಿರ್ದೇಶಿಸುವ ಅವಕಾಶವನ್ನು ನಾಗತಿಹಳ್ಳಿ ಗಿಟ್ಟಿಸಿಕೊಂಡಿರುವುದು, ಆ ಸಿನಿಮಾ ನೂರು ದಿನ ಓಡಿಯೇ ತೀರುತ್ತದೆಂದು ನಾಯಕ- ನಿರ್ದೇಶಕ ಘೋಷಿಸಿಕೊಂಡಿರುವುದೂ ಹಳೆಯ ಕಥೆ. ಸದ್ಯಕ್ಕೆ ಉಪೇಂದ್ರ ಸೂಪರ್‌ ಸ್ಟಾರ್‌ ಆದರೆ, ನಾಗತಿಹಳ್ಳಿ ಸೂಪರ್‌ ನಿರ್ದೇಶಕ. ಎಲ್ಲವೂ ಹುಡುಗಿಯ ಮಹಿಮೆ. ಈ ಖುಷಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಮರಳಿ ತೆರೆಗೆ ಪರಿಚಯಿಸುವ ಅವಕಾಶ(ರಾಜ್‌ ಕ್ಯಾಂಪ್‌) ಕೈ ತಪ್ಪಿರುವ ಬಗ್ಗೆ ಮೇಷ್ಟ್ರು ಅಷ್ಟಾಗಿ ತಲೆ ಕೆಡಿಸಿಕೊಂಡಿಲ್ಲ .

ನನ್ನ ಪ್ರೀತಿಯ ಹುಡುಗಿ ನೂರು ದಿನ ಓಡಿದ ಸಂಭ್ರಮ ದುಪ್ಪಟ್ಟಾಗಲಿಕ್ಕೆ ನಾಗತಿಹಳ್ಳಿ ಅವರಿಗೆ ಬೇರೆಯ ಕಾರಣಗಳೂ ಇವೆ. ಹುಡುಗಿಯ ಇಂಗ್ಲೀಷ್‌ ಅವತರಣಿಕೆ My favorite Girl ವಿಶ್ವಾದ್ಯಂತ ತೆರೆ ಕಾಣಲೀಗ ಸಿದ್ಧವಾಗಿದೆ. ಮಾತ್ರವಲ್ಲದೆ ಹುಡುಗಿ ತೆಲುಗಿಗೆ ಹೊರಟಿದ್ದಾಳೆ. ಅರ್ಥಾತ್‌ 'ನನ್ನ ಪ್ರೀತಿಯ ಹುಡುಗಿ" ತೆಲುಗಿಗೆ ರೀಮೇಕಾಗುತ್ತಿದೆ.

ತೆಲುಗಿನಲ್ಲೂ ಕೂಡ ಹುಡುಗಿಯನ್ನು ನಿರ್ದೇಶಿಸುವ ಹೊಣೆಗಾರಿಕೆ ನಾಗತಿಹಳ್ಳಿಯವರಿಗೇ ಸಿಕ್ಕಿದೆ. ತಾರಾಗಣ ಇನ್ನೂ ಅಂತಿಮವಾಗಿಲ್ಲ . ಒಟ್ಟಿನಲ್ಲಿ ನಾಗತಿಹಳ್ಳಿಯವರಿಗೆ ತೆಲುಗಿಗೆ ಸವಾರಿ ಬೆಳೆಸುವ ಯೋಗ. ಮೇಷ್ಟ್ರು ಚೆನ್ನಾಗಿರಲಿ.

ಬಾಲಂಗೋಚಿ :
ಇತರ ಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್‌ ಮಾಡುವ ಕುರಿತು ನಾಗತಿಹಳ್ಳಿ ಹಾಗೂ ಇನ್ನೊಂದಿಬ್ಬರು ನಿರ್ದೇಶಕರು ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ನನ್ನ ಪ್ರೀತಿಯ ಹುಡುಗಿ ನಿರ್ಮಿಸುತ್ತಿರುವ ತೆಲುಗು ನಿರ್ಮಾಪಕರಿಗೆ ಗೊತ್ತಾ ? ಅಂದಹಾಗೆ, ಕನ್ನಡದಲ್ಲಿ ಬಿಟ್ಟು ಬೇರೆ ಭಾಷೆಯಲ್ಲಾದರೆ ರೀಮೇಕ್‌ ಮಾಡಬಹುದಾ ? ಸೃಜನಶೀಲತೆಯ ಬಗ್ಗೆ ಮಾತನಾಡುವ ಮೇಷ್ಟ್ರು ಪ್ರತಿಕ್ರಿಯೆ ಸಿಕ್ಕಿಲ್ಲ .

English summary
Nanna preethiya Hudugi will be My Favourite Girl in English

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada