»   » ಅಪರ ನಿರ್ದೇಶಕನ ಮಿಚಿಗನ್‌ ಯಾತ್ರೆ

ಅಪರ ನಿರ್ದೇಶಕನ ಮಿಚಿಗನ್‌ ಯಾತ್ರೆ

Posted By: Super
Subscribe to Filmibeat Kannada

ಹೂಮಳೆ ಚಿತ್ರದ ಬಳಿಕ ನಾಗತಿಹಳ್ಳಿ ಚಂದ್ರಶೇಖರ್‌ ಆಸ್ಟ್ರೇಲಿಯಾದಲ್ಲಿ ಚಿತ್ರ ಮಾಡ್ತಾರಂತೆ ಎಂಬ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸುಳಿದಾಡುತ್ತಿತ್ತು. ಇಲ್ಲ , ಮತ್ತೆ ಅಮೆರಿಕಾಕ್ಕೇ ಹೋಕ್ತಾರಂತೆ ಅಂತ ಯಾರೋ ಅಂದಾಗ, ಅಲ್ರಿ ಅಮೆರಿಕಾ ಅಮೆರಿಕಾ ಚಿತ್ರೀಕರಣ ಅಮೆರಿಕಾದಲ್ಲೇ ಮಾಡಿರೋವಾಗ ಮತ್ತೇಕೆ ನಾಗತಿಹಳ್ಳಿ ಅಮೆರಿಕಾಕ್ಕೆ ಹೋಕ್ತಾರೆ, 100 ಪರ್ಸೆಂಟ್‌ ಈ ಸಾರಿ ಆಸ್ಟ್ರೇಲಿಯಾದಲ್ಲೇ ಷೂಟಿಂಗ್‌ ಅಂತ ಬೆಟ್‌ ಮಾಡಿದೋರೂ ಇದ್ದಾರೆ.

ಈ ಮಧ್ಯೆ ಮೊನ್ನೆ ನಾಗತಿಹಳ್ಳಿ ಚಂದ್ರಶೇಖರ್‌ ಅಮೆರಿಕಾದಲ್ಲಿ ಮತ್ತೊಂದು ಸಿನಿಮಾ ಮಾಡಿದ್ದೀನಿ, ಹೊಸವರ್ಷಕ್ಕೆ ಬಹುಶಃ ಇದು ನಾನು ಹೇಳಬಹುದಾದ ಶುಭಾಶಯ ಈ ಸಿನಿಮಾ.... ನನ್ನ ಹೊಸ ಚಿತ್ರದ ಹೆಸರು ನನ್ನ ಪ್ರೀತಿಯ ಹುಡುಗಿ. ಈ ಚಿತ್ರ ತಂಡದೊಂದಿಗೆ ನಿಮ್ಮನ್ನು ಭೇಟಿ ಮಾಡಬೇಕು ಎಂದುಕೊಂಡಿದ್ದೇನೆ.... ಎಂಬ ಸ್ವಹಸ್ತಾಕ್ಷರದ ಆಮಂತ್ರಣ ಕಳಿಸಿದ್ರು.

ಪ್ರೀತಿಯ ಹುಡುಗಿ ಹೆಸರೇ ಹೇಳುವಂತೆ ನೂರಕ್ಕೆ ನೂರು ಪ್ರೇಮ ಕಥಾ. ನಾಗತಿಹಳ್ಳಿ ಅವರ ಮಲೆನಾಡ ಹುಡುಗಿಯೂ, ಬಯಲುಸೀಮೆ ಹುಡುಗನೂ ಕಥೆಯ ಹಂದರವನ್ನೇ ಹಿಡಿದ ಈ ಚಿತ್ರದಲ್ಲಿ ಬಯಲು ಸೀಮೆ, ಮಲೆನಾಡ ಬದಲಿಗೆ ಭಾರತ - ಅಮೆರಿಕಾ ಮೇಳೈಸಿದೆ ಅಷ್ಟೇ.

ಪ್ರೀತಿಯ ಹುಡುಗಿ ಚಿತ್ರೀಕರಣ ಮುಗಿದಿದೆ. ಮಾತಿನ ಧ್ವನಿ ಮುದ್ರಣವೂ ಮುಕ್ತಾಯವಾಗಿದೆ. ಚಿತ್ರ ಬಹುತೇಕ ಯುಗಾದಿ ವೇಳೆಗೆ ಬಿಡುಗಡೆ ಆಗುವ ಸೂಚನೆ ಇದೆ. ಇದನ್ನು ನಾಗತಿಹಳ್ಳಿಯವರ ಮತ್ತೊಂದು ಅಮೆರಿಕಾ ಸ್ಪೆಷಲ್‌ ಎನ್ನಲು ಅಡ್ಡಿ ಇಲ್ಲ. ಈ ಚಿತ್ರದಲ್ಲಿ ಚಂದ್ರಶೇಖರ್‌ ಹಲವು ಸಾಹಸ ಮಾಡಿದ್ದಾರೆ.

ಧ್ಯಾನ್‌ ಎಂಬ ಹೊಸ ನಾಯಕ ನಟನನ್ನು ಕನ್ನಡಕ್ಕೆ ಪರಿಚಯಿಸುತ್ತಿರುವುದು ಮೊದಲ ಸಾಹಸ. ಎರಡನೇ ಸಾಹಸ ಚಿತ್ರದ ನಾಯಕಿಯೂ ಹೊಸ ಮುಖ. ಈಕೆಯ ಹೆಸರು ದೀಪಾಲಿ. ಬೆಂಗಳೂರು ಚಾಮರಾಜಪೇಟೆಯಿಂದ ಕ್ಯಾಲಿಫೋರ್ನಿಯಾಗೆ ತೆರಳಿ ಅಲ್ಲೇ ನೆಲಸಿರುವ ಹುಡುಗಿ. ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ಅಮೆರಿಕಾದಲ್ಲೇ ನಡೆದಿದೆಯಂತೆ. ಸರೋವರಗಳ ರಾಜ್ಯ ಎಂದು ಹೆಸರುವಾಸಿಯಾದ ಮಿಚಿಗನ್‌ ಸುತ್ತ ಮುತ್ತ ಹಲವು ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ಕತೆಯಲ್ಲಿ ಅಮೆರಿಕನ್‌ ಕ್ಯಾಂಪಸ್‌ನಲ್ಲಿ ನಡೆಯುವ ಹದಿಹರೆಯದ ಪ್ರೇಮಕಥೆಯೂ ಒಳಗೊಂಡಿದೆ. ಮಿಚಿಗನ್‌ ವಿ.ವಿ.ಯ ಕ್ಯಾಂಪಸ್‌, ಗ್ರಂಥಾಲಯ, ಸಭಾಂಗಣಗಲ್ಲೂ ಚಿತ್ರೀಕರಣ ಮಾಡಲಾಗಿದೆ. ಅಮೆರಿಕದ ಕಾರುಗಳ ಸಂಸ್ಕೃತಿಯ ಮೇಲೆ ಹಾಡಿನ ಚಿತ್ರೀಕರಣವೂ ನಡೆದಿದೆ. ವಿವಿಧ ನಮೂನೆಯ ಹೊಸ ಕಾರುಗಳನ್ನು ಚಿತ್ರದ ಮೂಲಕ ಕನ್ನಡಿಗರಿಗೆ ಚಂದ್ರಶೇಖರ್‌ ದರ್ಶನ ಮಾಡಿಸುತ್ತಿದ್ದಾರೆ.

ಸಾಹಸ ಪ್ರಧಾನವಾದ ವೈಟ್‌ ವಾಟರ್‌ ರಾಫ್ಟಿಂಗ್‌ ಸಹ ಚಿತ್ರದಲ್ಲಿದೆ. ಇದೊಂದು ಜಲ ಸಾಹಸ ಕ್ರೀಡೆ. ಈ ಎಲ್ಲದರ ನಡುವೆ ಕರ್ನಾಟಕದ ಕರಾವಳಿ ತೀರದ ಸುವರ್ಣ ನದಿಯ ತಟದಲ್ಲೂ ಷೂಟಿಂಗ್‌ ಮಾಡಲಾಗಿದೆ.

ಬಹಳ ವರ್ಷಗಳಿಂದ ಕಣ್ಮರೆಯಾಗಿದ್ದ ಕನ್ನಡದ ನಟಿ ಭವ್ಯ ಮತ್ತೆ ಈ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಲೋಕೇಶ್‌ ಪ್ರಧಾನ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಸುರೇಶ್‌ ಹೆಬ್ಳೀಕರ್‌, ವಿಜಯಲಕ್ಷ್ಮೀ ಸಿಂಗ್‌, ಚಿತ್ರಾ ಶೆಣೈ ತಾರಾಬಳಗದಲ್ಲಿದ್ದಾರೆ. ಅಮೆರಿಕದ ನಿವಾಸಿಗಳಾದ ಜ್ಯೋತಿ ಶಂಕರ್‌ ಹಾಗೂ ಉಮಾ ಶಂಕರ್‌ ಈ ಚಿತ್ರದ ನಿರ್ಮಾಪಕರು. ಚಿನ್ನಿಪ್ರಕಾಶ್‌, ಮದನ್‌ - ಹರಿಣಿ ನೃತ್ಯ ನಿರ್ದೇಶನ, ರಾಜೇಶ್‌ - ನಂದಿತಾರ ಹಿನ್ನೆಲೆ ಗಾಯನ, ಮನೋಮೂರ್ತಿ ಸಂಗೀತ ಸಂಯೋಜನೆ, ಪಿ. ರಾಜನ್‌ ಛಾಯಾಗ್ರಹಣ ಚಿತ್ರಕ್ಕಿದೆ.

English summary
nagatihalli chandrashekher announces new film preetiya hudugi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada