ನಗ್ಮಾ ದಕ್ಷಿಣ ಆಫ್ರಿಕಕ್ಕೆ ಹೋಗಿಲ್ಲ.

By Super

ನಗ್ಮಾ ಈಗ ಎಲ್ಲಿ ಸಿಗುತ್ತಾರೆ?
ಚೆನ್ನೈನ ಓಣಿಗಳಲ್ಲಾಗಲೀ, ಹೈದರಾಬಾದ್‌ ಗಲ್ಲಿಗಳಲ್ಲಾಗಲೀ ಅವರ ಪತ್ತೆ ಅಸಾಧ್ಯ. ಯಾಕೆಂದರೆ ದಕ್ಷಿಣ ಭಾರತದ ಸಿನಿಮಾಗಳಿಗೆ ಹೆಚ್ಚೂಕಮ್ಮಿ ಅವರು ಗುಡ್‌ ಬೈ ಹೇಳಿದ್ದು ಆಗಿದೆ. ಅದರ ಜೊತೆಜೊತೆಗೇ ಕ್ಯಾಬರೇ ಡ್ಯಾನ್ಸರ್‌ ಪಟ್ಟ ಕಟ್ಟಿಕೊಳ್ಳುವ ಹಾದಿಯನ್ನೂ ಹಿಡಿದದ್ದಾಗಿದೆ.

'ಭಾಗಿ" ಹಿಂದಿ ಚಿತ್ರದ ನಾಯಕಿಯಾಗಿದ್ದ ಇದೇ ನಗ್ಮಾ ಇದೀಗ ಚಿತ್ರದ ಒಂದೇ ಒಂದು ಹಾಡಿಗೆ ಕುಣಿಯಮ್ಮನಾಗಿರುವುದಾದರೂ ಯಾತಕ್ಕೆ? ನಗ್ಮಾ ತಮ್ಮ ಸುತ್ತಲ ಕಿಚಾಯಿಸುವಿಕೆಯಿಂದ ದೂರಾಗಬಯಸಿದ್ದಾರಂತೆ. ಪ್ರಸ್ತುತ ಹಿಂದಿ ಚಿತ್ರದ ಎಂಥದೇ ಆಫರಾದರೂ ಸರಿ, ಹಿಂದೂಮುಂದು ನೋಡದೆ ಸಹಿ ಹಾಕುತ್ತಿರುವ ಈಕೆಯದು ಶಾಂತಿ ಮಾರ್ಗ. ಶಾಂತಿಗಾಗಿಯೇ ನೃತ್ಯ. ನೃತ್ಯದ ನಡುವೆ ಧ್ಯಾನ. ಸಿನಿಮಾದಲ್ಲಿ ತುಂಡು ಬಟ್ಟೆ ತೊಟ್ಟು ಇವರು ಕುಣಿದರೂ, ಮನಸ್ಸಲ್ಲಿ ಕ್ಯಾಬರೆ ಕುಣಿತದ ಹುಮ್ಮಸ್ಸು ಇರದು. ಕಾರಣ ಬದುಕುವ ಕಲೆ ಇದೀಗ ಕರಗತ. ಕೃಪೆ- ಆರ್ಟ್‌ ಆಫ್‌ ಲಿವಿಂಗ್‌.

ನಗ್ಮಾ ಒಂದೋ ಶೂಟಿಂಗ್‌ನಲ್ಲಿ ಬ್ಯುಸಿ. ಇಲ್ಲವಾದಲ್ಲಿ ಧ್ಯಾನವೇ ಖುಷಿ. ಮುಂಬೈನ ತಾರಾ ವಠಾರಗಳಲ್ಲೂ ನಗ್ಮಾ ಅಲಭ್ಯ. ಯಾಕೆಂದರೆ, ಸಿನಿಮಾ ಕೆಲಸ ಇಲ್ಲವಾದಲ್ಲಿ ಇವರು ಸೀದಾ ಹೋಗುವುದು ಆರ್ಟ್‌ ಆಫ್‌ ಲಿವಿಂಗ್‌ಗೆ. ನಗ್ಮಾ ಮೊಗದಲ್ಲಿ ಸಾತ್ವಿಕ ಕಳೆ ಇಣುಕುತ್ತಿರಲು ಇದೇ ಕಾರಣ. ಗಂಗೂಲಿ ಜೊತೆ ಸುತ್ತಾಡುವ ಮುನ್ನವೇ ನಗ್ಮಾ ಇದರ ಗೀಳು ಹತ್ತಿಸಿಕೊಂಡಿದ್ದರು. ಆದರೆ ಗಂಗೂಲಿ ಕಿರಿಕೆಟ್ಟು ಇವರ ಬದುಕುವ ಕಲೆಯ ದಿಕ್ಕನ್ನೇ ಬದಲಿಸಿತ್ತು.

ಪ್ರಾಯಶಃ ಕಾಳಹಸ್ತಿಯಲ್ಲಿ ನಾಗದೋಷ ಪರಿಹಾರ ಪೂಜೆ ಮಾಡಿದ್ದು ಆರ್ಟ್‌ ಆಫ್‌ ಲಿವಿಂಗ್‌ ಬೋಧನೆಯೇ ಇರಬೇಕು. ಆದರೆ ಅದೇ ಗಂಗೂಲಿಗೆ ಮುಳುವಾಗಬೇಕೆ? ಕಳಪೆ ಆಟದಲ್ಲಿ ಗಂಗೂಲಿ ಕಳೆದುಹೋಗುತ್ತಿದ್ದ ಆ ಹೊತ್ತಲ್ಲಿ ಪುಕಾರುಗಳಿಂದಾಗಿಯೇ ನಗ್ಮಾಗೆ ಕೊಂಚ ಮೈಲೇಜ್‌ ಸಿಕ್ಕಿದ್ದೂ ನಿಜ. 'ಬಂಗಾಳ ಹುಲಿಯನ್ನು ಬೋನಿಗೆ ಹಾಕಿಕೊಂಡ ಮಾಯಾಂಗನೆ" ಅಂತ ಪತ್ರಿಕೆ- ನಿಯತಕಾಲಿಕಗಳು ಬಣ್ಣಿಸಿದವು. ಮರೆತಿದ್ದ ಬಾಲಿವುಡ್‌ ಈಕೆಯನ್ನು ನೆನಪಿಸಿಕೊಂಡದ್ದೇ ಆಗ. 'ಏ ತೇರಾ ಘರ್‌ ಹೈ ಮೇರಾ ಘರ್‌" ಅನ್ನುವ ಚಿತ್ರದಲ್ಲಿ ಒಂದು ಹಾಡಿಗೆ ಕುಣಿಯುವ ಪಾತ್ರವನ್ನೂ ಕೊಟ್ಟುಬಿಟ್ಟಿತು. ಇನ್ನು ಮುಂದೆ ದಕ್ಕುವ ಪಾತ್ರಗಳೂ ಇಂಥವೇ ಅಂತ ಬೇರೆಯಾಗಿ ಹೇಳುವ ಅಗತ್ಯವಿಲ್ಲ.

ಅಂದಹಾಗೆ, ನಗ್ಮಾಗೆ ಆರ್ಟ್‌ ಆಫ್‌ ಲಿವಿಂಗ್‌ ಗೀಳು ಹತ್ತಿಸಿದವರು ಯಾರು ಗೊತ್ತೆ ? ವಯಸ್ಸಿನಲ್ಲಿದ್ದಾಗ ಬಂದೂಕು, ಡ್ರಗ್ಸ್‌ ಜೊತೆಯಲ್ಲಿಯೇ ಆಟವಾಡಿಕೊಂಡು ಬೆಳೆದ, ಆಗಾಗ ಸೆರೆಮನೆಗೂ ಭೇಟಿ ಕೊಡುವ ನಟ ಸಂಜಯ್‌ ದತ್‌ ಇದ್ದಾರಲ್ಲ, ಅವರ ಹೆಂಡತಿ ರಿಯಾ. ಗಂಡನ ತುಂಟಾಟಗಳ ನಡುವೆ ರಿಯಾ ಕಳಕಳೆಯಾಗಿ ಇದ್ದದ್ದು ಆರ್ಟ್‌ ಆಫ್‌ ಲಿವಿಂಗ್‌ ಕೃಪೆಯಿಂದ. ಈಗ ಗಂಗೂಲಿ ಬ್ಯಾಟ್‌ ಗ್ರಿಪ್ಪಿನ ಗರಿ, ತಂಗಿ ಜ್ಯೋತಿಕಾ ಯಶಸ್ಸಿನ ಝರಿ... ಈ ಕುರಿತ ಸುದ್ದಿಗಾರರ ಉಪಟಳದಿಂದ ನಗ್ಮಾಗೆ ನೆಮ್ಮದಿ ಸಿಕ್ಕಿರುವುದೂ ಆರ್ಟ್‌ ಆಫ್‌ ಲಿವಿಂಗ್‌ನಿಂದ.

ಗಂಗೂಲಿ ದಕ್ಷಿಣ ಆಫ್ರಿಕಕ್ಕೆ ಹೋದರೂ, ನಗ್ಮಾ ಮುಂಬಯಿಯಲ್ಲೇ ಇದ್ದಾರೆ. ಆರ್ಟ್‌ ಆಫ್‌ ಲಿವಿಂಗ್‌ ಪಾಠ ಕಲಿಸಿದೆ. ಮರ ಸುತ್ತೋದು, ದೇವಸ್ಥಾನದ ಗಂಟೆ ಹೊಡೆಯೋದೆಲ್ಲಾ ಬೇಡ. ನಮ್ಮೊಳಗೇ ಇದ್ದಾನೆ ದೇವರು ನೋಡ ಅಂತಾರೆ ನಗ್ಮಾ. ಈಗ ಅವರೇನಿದ್ದರೂ ಕ್ಯಾಬರೆ ಡ್ಯಾನ್ಸ್‌ ಅಥವಾ ಧ್ಯಾನ ಎರಡನ್ನೇ ಕಣಪ್ಪಾ ಮಾಡೋದು !

English summary
Is Nagma becoming a cabaret dancer?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X