Ramayana: The Introduction: 'ರಾಮಾಯಣ' ಫಸ್ಟ್ ಗ್ಲಿಂಪ್ಸ್; ಈ ಅಂಶಗಳನ್ನು ಗಮನಿಸಿದ್ರಾ?
ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಅನೌನ್ಸ್‌ಮೆಂಟ್ ಟೀಸರ್ ರಿಲೀಸ್ ಆಗಿದೆ. ಮೊದಲ ನೋಟದಲ್ಲೇ ಹುಬ್ಬೇರಿಸುವಂತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ರಾಮ- ರಾವಣರಾಗಿ ರಣ್‌ಬೀರ್- ಯಶ್ ಮುಖಾಮುಖಿ ನೋಡಲು ಸಿನಿರಸಿಕರು ಕಾತರದಿಂದ ಕಾಯುವಂತಾಗಿದೆ.
ಇವತ್ತಿನ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನಮ್ಮ 'ರಾಮಾಯಣ' ಕಾವ್ಯವ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಅಂದಾಜ 800 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಮುಂದಿನ ವರ್ಷ ದೀಪಾವಳಿ ಸಂಭ್ರಮದಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆ ಆಗಲಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ತಾರಾಗಣದ ಬಗ್ಗೆ ಈಗಾಗಲೇ ಮಾಹಿತಿ ಸಿಕ್ಕಿತ್ತು. ಇದೀಗ ಅಧಿಕೃತವಾಗಿ ಈ ವಿಚಾರ ಖಚಿತವಾಗಿದೆ.

ಅಂದಹಾಗೆ ಇದು ಸಿನಿಮಾ ಟೀಸರ್ ಅಲ್ಲ. ಬರೀ ಅನೌನ್ಸ್‌ಮೆಂಟ್ ವೀಡಿಯೋ ಮಾತ್ರ. ಆದರೆ ಸಣ್ಣ ಗ್ಲಿಂಪ್ಸ್ ಮಾತ್ರ ನಡುವೆ ಬಂದು ಹೋಗುತ್ತದೆ. ರಾಮ- ರಾವಣರ ಆರ್ಭಟದ ಸಣ್ಣ ಝಲಕ್ ಬಂದು ಹೋಗುತ್ತದೆ. ಇದು ಅಭಿಮಾನಿಗಳ ಗಮನ ಸೆಳೆದಿದೆ. ರಾಮನಾಗಿ ರಣ್‌ಬೀರ್ ಲುಕ್, ಬಿಲ್ವಿದ್ಯೆ ಪ್ರದರ್ಶನದ ಜೊತೆಗೆ ರಾವಣನ ರೋಷಾವೇಷದ ಸಣ್ಣ ತುಣುಕನ್ನು ನೋಡಬಹುದು. ಲಂಕಾಸುರನಾಗಿ ಯಶ್ ಬರೀ ಕಣ್ಣಲ್ಲೇ ಕೊಲ್ಲಲು ಬರ್ತಿದ್ದಾರೆ.
ಇತ್ತೀಚೆಗೆ 'ರಾಮಾಯಣ' ಚಿತ್ರದ ಮೇಕಿಂಗ್ ಫೋಟೊಗಳು ಹೊರ ಬಂದಿತ್ತು. 'ಮ್ಯಾಡ್ ಮ್ಯಾಕ್ಸ್' ಸ್ಟಂಟ್ ನಿರ್ದೇಶಕ ಗೈ ನೋರಿಸ್ (guy Norris) ನಿರ್ದೇಶನದಲ್ಲಿ ಯಶ್ ಆಕ್ಷನ್ ಸನ್ನಿವೇಶಗಳಲ್ಲಿ ನಟಿಸಿದ್ದರು. ಆ ಫೋಟೊಗಳಲ್ಲಿ ಯಶ್ ಲುಕ್, ಮೀಸೆ, ಗಡ್ಡ ಎಲ್ಲವೂ ಗಮನ ಸೆಳೆದಿತ್ತು. ಅದೇ ಲುಕ್‌ನಲ್ಲಿ ಇಡೀ ಸಿನಿಮಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಸುಕುಧಾರಿಯಾಗಿ ರಾವಣನನ್ನು ತೋರಿಸಲಾಗಿದೆ. ಹಾಗಾಗಿ ಕಂಪ್ಲೀಟ್ ಲುಕ್ ರಿವೀಲ್ ಆಗಿಲ್ಲ. ಈ ಅಂಶಗಳನ್ನು ಪಕ್ಕಕ್ಕಿಟ್ಟರೆ ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೊತ್ತಾಗುತ್ತಿದೆ.
'ಗೇಮ್ ಆಫ್ ಥ್ರೋನ್ಸ್' ಶೈಲಿಯಲ್ಲಿ ಟೈಟಲ್ ಕಾರ್ಡ್ ಡಿಸೈನ್ ಮಾಡಲಾಗಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಿಗಾಗಿ ಸಿನಿಮಾ ಚಿತ್ರೀಕರಿಸಿದ್ದೇವೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಅಂದರೆ ಹಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳ ರೀತಿ ಈ ಸಿನಿಮಾ ತೆರೆಮೇಲೆ ಅಪ್ಪಳಿಸಲಿದೆ. ಇದು ರಾಮ- ರಾವಣರ ಅಮರ ಕಥೆಯನ್ನು ಬಹಳ ರೋಚಕವಾಗಿ ತೆರೆಗೆ ತರಲಾಗುತ್ತಿದೆ.
'ರಾಮಾಯಣ' ಟೀಸರ್ ಆರಂಭದಲ್ಲಿ ಪುರಾಣಗಳಲ್ಲಿರುವಂತೆ ಬ್ರಹ್ಮ, ವಿಷ್ಣು, ಶಿವನ ಪಾತ್ರಗಳ ಪರಿಚಯಿಸಿ ಬಳಿಕ ರಾವಣ ಹಾಗೂ ರಾಮರ ಕಥೆಯ ಮುನ್ನೋಟ ಕೊಡಲಾಗಿದೆ. ತ್ರಿಮೂರ್ತಿಗಳ ಸೃಷ್ಟಿಗೆ ರಾವಣನಿಂದ ಸಮಸ್ಯೆ ಎದುರಾದಾಗ ರಾಮ ಬರ್ತಾನೆ. ಇಬ್ಬರ ನಡುವೆ ಯುದ್ಧ ನಡೆಯುತ್ತದೆ. ಇದು ರಾಮ vs ರಾವಣರ ಅಮರ ಕಥೆ ಎಂದು ವಿಶ್ಲೇಷಿಸಿದ್ದಾರೆ. ಶಕ್ತಿ ಹಾಗೂ ಸೇಡು ಅಂದ್ರೆ ರಾವಣ. ಧರ್ಮ ಮತ್ತು ತ್ಯಾಗ ಅಂದ್ರೆ ರಾಮ ಎಂದು ಇಬ್ಬರ ಗುಣಗಳ ಬಗ್ಗೆ ಹೇಳಿದ್ದಾರೆ.
ಇನ್ನು ಲಕ್ಷ್ಮಣನಾಗಿ ರವಿ ದುಬೆ ನಟಿಸುವ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಶ್ರೀಧರ್ ರಾಘವನ್ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದಲ್ಲಿ 'ರಾಮಾಯಣ' ಸಿನಿಮಾ ಮೂಡಿ ಬರ್ತಿದೆ. ತಲಾ ಎರಡು ಆಸ್ಕರ್ ಪ್ರಶಸ್ತಿ ಪಡೆದಿರುವ ಹ್ಯಾನ್ಸ್ ಜಿಮ್ಮರ್ ಹಾಗೂ ಎ. ಆರ್ ರಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. 8 ಆಸ್ಕರ್ ಗೆದ್ದಿರುವ DNEG ಸಂಸ್ಥೆ ಚಿತ್ರಕ್ಕೆ ವಿಎಫ್‌ಎಕ್ಸ್ ಮಾಡ್ತಿದೆ.
ವಾಲ್ಮೀಕಿ ರಾಮಾಯಣ ಕಾವ್ಯವನ್ನೇ ಆಧರಿಸಿ ನಿತೇಶ್ ತಿವಾರಿ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತಿದೆ. 2027ರ ದೀಪಾವಳಿಗೆ 'ರಾಮಾಯಣ- 2' ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











