'ನಮ್ಮ ಪ್ರೀತಿಯ ರಾಮು' ಚಿತ್ರದ ಬಜೆಟ್, ಕಲೆಕ್ಷನ್, ದರ್ಶನ್ ಸಂಭಾವನೆ ಎಷ್ಟಾಗಿತ್ತು?
ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ನಮ್ಮ ಪ್ರೀತಿಯ ರಾಮು' ಸಿನಿಮಾ ಮರುಬಿಡುಗಡೆ ಆಗುತ್ತಿದೆ. 22 ವರ್ಷಗಳ ಬಳಿಕ ರಾಜ್ಯಾದ್ಯಂತ ದೊಡ್ಡದಾಗಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಮಲಯಾಳಂನದಲ್ಲಿ ಯಶಸ್ಸು ಕಂಡಿದ್ದ 'ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ಜಾನುಂ' ಚಿತ್ರದ ರೀಮೆಕ್ ಇದಾಗಿತ್ತು. ಚಿತ್ರದಲ್ಲಿ ದರ್ಶನ್ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
'ನಮ್ಮ ಪ್ರೀತಿಯ ರಾಮು' ಸಿನಿಮಾ ತೆರೆಕಂಡ ಮರುವಾರವೇ ದರ್ಶನ್ ನಟಿಸಿದ್ದ 'ದಾಸ' ಸಿನಿಮಾ ಕೂಡ ತೆರೆಗೆ ಬಂದಿತ್ತು. ಎರಡೂ ಸಿನಿಮಾಗಳ ನಡುವೆ ಸಹಜವಾಗಿಯೇ ಪೈಪೋಟಿ ಏರ್ಪಡುವಂತಾಗಿತ್ತು. ಹಾಗಾಗಿ 'ನಮ್ಮ ಪ್ರೀತಿಯ ರಾಮು' ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಗೆಲ್ಲಲಿಲ್ಲ. ಆದರೂ ಸಿನಿಮಾ ನಷ್ಟ ಮಾಡಲಿಲ್ಲ, ನಿರ್ಮಾಪಕರು ಖುಷಿಯಾಗಿದ್ದರು. ಬೆಂಗಳೂರಿನಲ್ಲಿ ಶತದಿನೋತ್ಸವ ಆಚರಿಸಿದೇ ಇದ್ದರೂ ಮೈಸೂರಿನಲ್ಲಿ ಸಿನಿಮಾ 100 ದಿನ ಪ್ರದರ್ಶನ ಕಂಡಿತ್ತು.

ನಂದಕುಮಾರ್ ಹಾಗೂ ರಾಮೇಗೌಡ 'ನಮ್ಮ ಪ್ರೀತಿಯ ರಾಮು' ಚಿತ್ರಕ್ಕೆ ಹಣ ಹೂಡಿದ್ದರು. ಸಂಜಯ್- ವಿಜಯ್ ಚಿತ್ರವನ್ನು ತಿದ್ದಿ ತೀಡಿದ್ದರು. ಇಳಯರಾಜ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಇನ್ನು ಅಂಧ ರಾಮು ಪಾತ್ರದಲ್ಲಿ ದರ್ಶನ್ ನಟನೆ ಮೋಡಿ ಮಾಡಿತ್ತು. ಬಹಳ ರಿಸ್ಕ್ ತೆಗೆದುಕೊಂಡು ಆ ಚಿತ್ರದಲ್ಲಿ ಅವರು ನಟಿಸಿದ್ದರು. ಇದರಿಂದ ಕಣ್ಣಿಗೆ ಸಮಸ್ಯೆ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು.
ಶಿವರಾಜ್‌ಕುಮಾರ್ ಅಥವಾ ಸುದೀಪ್ ಅವರ ಜೊತೆ ಈ ಸಿನಿಮಾ ಮಾಡಲು ಚಿತ್ರತಂಡ ಮುಂದಾಗಿತ್ತು. ಸುದೀಪ್ ಅವರಿಗೆ ಅಡ್ವಾನ್ಸ್ ಸಹ ಕೊಟ್ಟಿದ್ದರು. ಅದಕ್ಕೂ ಮುನ್ನ ಶಿವಣ್ಣ ಜೊತೆಗೂ ಚರ್ಚೆ ಆಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಅಂತಿಮವಾಗಿ ದರ್ಶನ್ ಅವರನ್ನು ನಿರ್ದೇಶಕರು ಹುಡುಕಿ ಹೋಗಿದ್ದರು. ದರ್ಶನ್ ಮಲಯಾಳಂನಲ್ಲಿ ಬಂದಿದ್ದ 'ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ಜಾನುಂ' ಸಿನಿಮಾ ನಟಿಸೋಕೆ ಒಪ್ಪಿದ್ದರು. ಅಂಧರ ವಸತಿ ಶಾಲೆಗೆ ಭೇಟಿ ನೀಡಿ ಅವರ ಆಂಗಿಕ ಭಾಷೆ, ನಡೆ-ನುಡಿ ಎಲ್ಲವನ್ನು ನೋಡಿ ಪಾತ್ರಕ್ಕಾಗಿ ತಯಾರಿ ಮಾಡಿಕೊಂಡಿದ್ದರು.

ಅವತ್ತಿನ ಕಾಲಕ್ಕೆ ಅಂದಾಜು 1 ಕೋಟಿ ರೂ. ಬಜೆಟ್‌ನಲ್ಲಿ 'ನಮ್ಮ ಪ್ರೀತಿಯ ರಾಮು' ಸಿನಿಮಾ ನಿರ್ಮಾಣವಾಗಿತ್ತು. 1 ಕೋಟಿ 80 ಲಕ್ಷದವರೆಗೆ ಕಲೆಕ್ಷನ್ ಆಗಿತ್ತು. 22 ವರ್ಷಗಳ ಹಿಂದೆ ಇದು ದೊಡ್ಡ ಮೊತ್ತವೇ ಆಗಿತ್ತು. ಅವತ್ತಿನ ಕಾಲಕ್ಕೆ ದೊಡ್ಡ ಬಜೆಟ್ ಕೂಡ ಹೌದು. ಇನ್ನು ಹೀರೊ ಆಗಿ ನಟಿಸೋಕೆ ದರ್ಶನ್ ಅವರಿಗೆ 3 ಲಕ್ಷ ರೂ. ಸಂಭಾವನೆ ಕೊಟ್ಟಿದ್ದರು. ಅದು ದರ್ಶನ್ ಹೀರೊ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದ ಆರಂಭದ ವರ್ಷಗಳು. ಅವರ ಸಿನಿಮಾ ಕರಿಯರ್‌ನಲ್ಲಿ ಅವತ್ತಿಗೆ ಅದೇ ದೊಡ್ಡ ಮೊತ್ತದ ಸಂಭಾವನೆ ಆಗಿತ್ತು.
2003 ನವೆಂಬರ್ 14ರಂದು 'ನಮ್ಮ ಪ್ರೀತಿಯ ರಾಮು' ಸಿನಿಮಾ ಬಿಡುಗಡೆ ಆಗಿತ್ತು. ನವೆಂಬರ್ 21 ರಂದು 'ದಾಸ' ಸಿನಿಮಾ ಬಂದು ಹಿನ್ನಡೆ ಆಗುವಂತಾಗಿತ್ತು. ಮಾಸ್ ಸಿನಿಮಾ 'ದಾಸ' ದೊಡ್ಡಾಗಿಯೇ ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಇಳಯರಾಜ ಸಿನಿಮಾ ನೋಡಿ ಭಾವುಕರಾಗಿದ್ದರು ಎಂದು ಚಿತ್ರದ ನಿರ್ದೇಶಕ ಸಂಜಯ್ ಇತ್ತೀಚೆಗೆ ನೆನಪಿಸಿಕೊಂಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಕೂಡ ಸಿನಿಮಾ ನೋಡಿ ತಂಡಕ್ಕೆ ಶ್ರಮಕ್ಕೆ ಬೆನ್ನು ತಟ್ಟಿದ್ದರು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಎರಡು ದಶಕಗಳ ಹಿಂದಿನ ಚಿತ್ರವನ್ನು ಡಿಜಿಟಲ್ ರೂಪದಲ್ಲಿ ಡಿಟಿಎಸ್ ಸೌಂಡ್ ಜೊತೆ ಈ ವಾರ ತೆರೆಗೆ ತರಲಾಗುತ್ತಿದೆ. ದರ್ಶನ್ ಅಭಿಮಾನಿಗಳು ಕೂಡ 'ನಮ್ಮ ಪ್ರೀತಿಯ ರಾಮು' ಚಿತ್ರವನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಈ ಚಿತ್ರದ ಜೊತೆಗೆ ದರ್ಶನ್ ನಟನೆಯ 'ಚಿಂಗಾರಿ' ಚಿತ್ರವನ್ನು ಕೂಡ ಈ ವಾರ ರಾಜ್ಯದಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ.


Click it and Unblock the Notifications











