ಈ ವಾರ ಸಿನಿಪ್ರೇಮಿಗಳ ಮುಂದೆ ಬರ್ತಿರೋ ಕನ್ನಡ ಚಿತ್ರಗಳ ಪಟ್ಟಿ ಇಲ್ಲಿದೆ ನೋಡಿ
ಮತ್ತೊಂದು ವೀಕೆಂಡ್ ಹತ್ತಿರವಾಗುತ್ತಿದೆ. ಕನ್ನಡದಲ್ಲಿ ನಾಲ್ಕೈದು ಸಿನಿಮಾಗಳು ಈ ವಾರ ಬಿಡುಗಡೆಗೆ ಸಜ್ಜಾಗಿದೆ. ಒಂದು ಸಿನಿಮಾ ರೀ-ರಿಲೀಸ್ ಕೂಡ ಆಗುತ್ತಿದೆ. ವ್ಯಾಲಂಟೈನ್ಸ್ ಸಂಭ್ರಮದಲ್ಲಿ ಇಂಟ್ರೆಸ್ಟಿಂಗ್ ಚಿತ್ರಗಳು ಸಿನಿಪ್ರೇಮಿಗಳು ಮುಂದೆ ಬರ್ತಿದೆ.
ಈ ವರ್ಷ ಕನ್ನಡ ಚಿತ್ರರಂಗ ದೊಡ್ಡ ಸಿನಿಮಾಗಳ ಬರ ಎದುರಿಸುತ್ತಿದೆ. 'ಕೆಡಿ' ಬಿಟ್ಟರೆ ಮತ್ಯಾವುದೇ ದೊಡ್ಡ ಸಿನಿಮಾ ಸದ್ಯಕ್ಕೆ ಬಿಡುಗಡೆ ಆಗುವಂತೆ ಕಾಣುತ್ತಿಲ್ಲ. ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಬಹಳ ತಡವಾಗಿಯೇ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನುಳಿದಂತೆ ಹೊಸಬರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿವೆ.

1. ರಾಜು ಜೇಮ್ಸ್ ಬಾಂಡ್
ದೀಪಕ್ ಮಧುವನಹಳ್ಳಿ ನಿರ್ದೇಶನದ 'ರಾಜು ಜೇಮ್ಸ್ ಬಾಂಡ್' ಸಿನಿಮಾ ಈ ವಾರ ತೆರೆಗೆ ಬರಲಿದೆ. ಗುರುನಂದನ್ ಹಾಗೂ ಮೃದುಲಾ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್ ಚಿತ್ರದ ತಾರಾಗಣದಲ್ಲಿದ್ದಾರೆ. ಅನೂಪ್ ಸಿಳೀನ್ ಸಂಗೀತ, ಮನೋಹರ್ ಜೋಶಿ ಛಾಯಾಗ್ರಹಣ ಚಿತ್ರಕ್ಕಿದೆ. ಇತ್ತೀಚೆಗೆ ಶ್ರೀಮುರಳಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಶುಭ ಕೋರಿದ್ದರು.
2. ನಮ್ಮ ಪ್ರೀತಿಯ ರಾಮು
ದರ್ಶನ್ ನಟಿಸಿದ್ದ 'ನಮ್ಮ ಪ್ರೀತಿಯ ರಾಮು' ಸಿನಿಮಾ 22 ವರ್ಷಗಳ ಹಿಂದೆ ತೆರೆಗೆ ಬಂದಿತ್ತು. ಈ ಚಿತ್ರವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಫೆಬ್ರವರಿ 16ರಂದು ದರ್ಶನ್ ಹುಟ್ಟುಹಬ್ಬ. ಅದಕ್ಕಿಂತ ಎರಡು ದಿನ ಮುನ್ನ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. M/S KNWOOD ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡುತ್ತಿದೆ. ಚಿತ್ರದಲ್ಲಿ ದರ್ಶನ್ ಅಂಧನ ಪಾತ್ರದಲ್ಲಿ ನಟಿಸಿದ್ದರು. ಮಲಯಾಳಂ ಸಿನಿಮಾ ರೀಮೆಕ್ ಆಗಿದ್ದರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆದ್ದಿರಲಿಲ್ಲ.

3. ಸಿದ್ಲಿಂಗು- 2
ಸತತ ಸೋಲಿನಿಂದ ಕಂಗೆಟ್ಟಿರುವ ಲೂಸ್ ಮಾದ ಯೋಗಿ ಮತ್ತೆ ಎದ್ದು ಬರುವ ಲೆಕ್ಕಚಾರದಲ್ಲಿದ್ದಾರೆ. ತಮ್ಮದೇ ಸೂಪರ್ ಹಿಟ್ 'ಸಿದ್ಲಿಂಗು' ಚಿತ್ರದ ಕಥೆಯನ್ನು ಈ ಬಾರಿ ಮುಂದುವರೆಸುತ್ತಿದ್ದಾರೆ. ಪೆಟ್ರೊಮ್ಯಾಕ್ಸ್ ಹಾಗೂ ತೋತಾಪುರಿ ಸಿನಿಮಾಗಳನ್ನು ಮಾಡಿ ವಿಜಯ ಪ್ರಸಾದ್ ಕೂಡ ಸೋತಿದ್ದಾರೆ. ಹಾಗಾಗಿ ಸೋತವರೆಲ್ಲಾ ಸೇರಿ ಈ ಬಾರಿ ಗೆಲ್ಲುವ ಹಠಕ್ಕೆ ಬಿದ್ದಿದ್ದಾರೆ. ಕಾಮಿಡಿ ಎಂಟರ್‌ಟೈನರ್ 'ಸಿದ್ಲಿಂಗು- 2' ಇದೇ ಶುಕ್ರವಾರ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದಲ್ಲಿ ಯೋಗಿ ಜೊತೆ ಸೋನು ಗೌಡ ನಟಿಸಿದ್ದಾರೆ.
4. ಭುವನಂ ಗಗನಂ
ಈ ಮೂರು ಸಿನಿಮಾಗಳ ಜೊತೆಗೆ 'ಭುವನಂ ಗಗನಂ' ಹಾಗೂ 'ನಿಮಿತ್ತ ಮಾತ್ರಂ' ಎಂಬ ಮತ್ತೆರಡು ಸಿನಿಮಾಗಳು ತೆರೆಗೆ ಬರಲಿದೆ. ಪೃಥ್ವಿ ಅಂಬರ್ ಹಾಗೂ ಪ್ರಮೋದ್ 'ಭುವನಂ ಗಗನಂ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಗಿರೀಶ್ ಮೂಲಿಮನಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕ ಎಂ ಮುನೇಗೌಡ ತಮ್ಮ ಎಸ್‌ವಿಸಿ ಫಿಲಂಸ್ ಪ್ರೊಡಕ್ಷನ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಜಿ ಟಿ ಮಾಲ್‌ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಮಾಡಲಾಯಿತು.
5. ನಿಮಿತ್ತ ಮಾತ್ರ
ಪೂರ್ಣಚಂದ್ರ ಮೈಸೂರು, ಸಂಗೀತಾ ರಾಜೀವ್ ಮತ್ತು ಅರವಿಂದ್ ಕುಪ್ಳಿಕರ್ ನಟನೆಯ 'ನಿಮಿತ್ತ ಮಾತ್ರ' ಸಿನಿಮಾ ಕೂಡ ಶುಕ್ರವಾರ ತೆರೆಗೆ ಬರಲಿದೆ. ರೋಶನ್ ಡಿ'ಸೋಜಾ ಚಿತ್ರ ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. ಸಂಗೀತಾ ರಾಜೀವ್ ಸಂಗೀತ ಚಿತ್ರಕ್ಕಿದೆ.


Click it and Unblock the Notifications











