ನೋಟ್ ಬ್ಯಾನ್ ಚರಿತ್ರೆ ಹೇಳುತ್ತಿದೆ 'ನಮೋ' ವೆಂಕಟೇ'ಶಾ' ಹಾಡು.!
ನವೆಂಬರ್ ಅಂದ್ರೆ ನೋಟ್ ಬ್ಯಾನ್ ಅಂತಾರೆ ಭಾರತೀಯರು. ನವೆಂಬರ್ 8, 2016ರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಅಂತ ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು. ಅಲ್ಲಿಂದ ಆಯ್ತು ನೋಡಿ ಜನಸಾಮನ್ಯರ ಪರದಾಟ, ಶ್ರೀಮಂತರ ಕಳ್ಳಾಟ.
ನೋಟು ಅಮಾನ್ಯೀಕರಣ ಆದ್ಮೇಲೆ ದೇಶದಲ್ಲಿ ಜನ ಎಷ್ಟೆಲ್ಲಾ ಒದ್ದಾಡಿದ್ರು, ಎಂಬ ಎಳೆಯ ಮೇಲೆ, ನೋಟು ಬ್ಯಾನ್ ನಂತರ ಆದ ಪರಿಣಾಮವನ್ನ ಕೇಂದ್ರವನ್ನಾಗಿಟ್ಟುಕೊಂಡು ಇಲ್ಲೊಂದು ಸಿನಿಮಾ ತಯಾರಾಗಿದೆ. ಅದೇ ಮಟಾಶ್.!
ಈ ಚಿತ್ರದ ಹೊಸ ಹಾಡು ಈಗ ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ. ನೋಟ್ ಬ್ಯಾನ್ ಬಳಿಕ ಏನಾಯ್ತು ಎಂಬುದನ್ನ ಒಂದೇ ಹಾಡಿನಲ್ಲಿ ಚಿತ್ರೀಸಿದ್ದಾರೆ. ಕೇಳೋದಕ್ಕೆ ತುಂಬಾ ಮಜಾ ಕೊಡೋ ಈ ಹಾಡು ನೋಡೋದಕ್ಕೂ ಅಷ್ಟೇ ಕಲರ್ ಫುಲ್ ಆಗಿದೆ. ಅದೇ ನಮೋ ವೆಂಕಟೇಶ ಹಾಡು.

ಅಂದ್ಹಾಗೆ, ನಮೋ ವೆಂಕಟೇಶ ಹಾಡಿನಲ್ಲಿ ಕುತೂಹಲಕಾರಿ ಸಂಗತಿಗಳಿವೆ. ನಮೋ ಅಂದ್ರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನ ಕರೆಯುವ ಹೆಸರು. ವೆಂಕಟೇಶಾ ಪದದ ಕೊನೇ ಅಕ್ಷರ ಶಾ..ಅಂದ್ರೆ ಬಿಜೆಪಿ ರಾಷ್ಟಾಧಕ್ಷ ಅಮಿತ್ 'ಶಾ' ಎಂಬ ಅರ್ಥವನ್ನೊಳಗೊಂಡಿದೆ.
ಇಡೀ ಚಿತ್ರವೇ ನೋಟು ಅಮಾನ್ಯೀಕರಣದ ಸುತ್ತ ಸುತ್ತುತ್ತದೆ. ಹೀಗಾಗಿ ಹಾಡು ವಿಶೇಷವಾಗಿ ಡಿಮಾನಿಟೈಸೇಷನ್ ಬಗ್ಗೆಯೇ ಇದೆ. ಖ್ಯಾತ ಸಾಹಿತಿ ಕವಿರಾಜ್ ಹಾಡಿನ ಸಾಹಿತ್ಯ ಬರೆದಿದ್ದು. ಎಲ್ ಆರ್ ರಾಮಾನುಜಂ ಹಾಡಿಗೆ ಧ್ವನಿಯಾಗಿದ್ದಾರೆ. ಎಸ್ ಡಿ ಅರವಿಂದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಮಟಾಶ್ ಚಿತ್ರವನ್ನ 'ಜುಗಾರಿ', 'ಲಾಸ್ಟ್ ಬಸ್' ಅಂತ ಹಿಟ್ ಚಿತ್ರಗಳನ್ನ ನೀಡಿರುವ ನರಸಿಂಹರಾಜು ಅವರ ಮೊಮ್ಮಗ ಎಸ್.ಡಿ ಅರವಿಂದ್ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಗೀತ ಮತ್ತು ನಿರ್ಮಾಣದಲ್ಲೂ ತಮ್ಮ ಕೈ ಜೋಡಿಸಿದ್ದಾರೆ.
ಈಗಾಗಲೇ ಮಟಾಶ್ ಚಿತ್ರದ ಹಾಡುಗಳು ಸದ್ದು ಮಾಡ್ತಿದೆ. ಪುನೀತ್ ರಾಜ್‌ಕುಮಾರ್ ಹಾಡಿದ್ದ ಉತ್ತರ ಕರ್ನಾಟಕ ಶೈಲಿಯ ಚಜ್ಜಿ ರೊಟ್ಟಿ ಚವಳೀಕಾಯಿ... ಸಾಂಗ್ ಸಖತ್ ಸೌಂಡ್ ಮಾಡ್ತಿದೆ. ಜೊತೆಗೆ ಸಂಚಿತ್ ಹೆಗಡೆ ಹಾಡಿರೋ ಆಕಾಶಕ್ಕೆ ಏಣಿ ಹಾಕುವ.... ಹಾಡು ಕೂಡ ಗಮನ ಸೆಳೆದಿದೆ. ಬಹುಶಃ ಈ ಸಿನಿಮಾ ನೋಡಿದ್ಮೇಲೆ ನೋಟ್ ಬ್ಯಾನ್ ಆದ ದಿನವನ್ನ ಮಟಾಶ್ ಡೇ ಅಂತ ಕರೆದ್ರು ಆಶ್ಚರ್ಯವಿಲ್ಲ.

ಅಂದ್ಹಾಗೆ, ಗೋಲ್ಸ್ ಅಂಡ್ ಡ್ರೀಮ್ಸ್, ಕ್ರೋಮ್ಸ್ ಅಂಡ್ ಬಲ್ಮಾನಿ ಬ್ಯಾನರ್ ನಡಿಯಲ್ಲಿ ಸತೀಶ್ ಪಾತಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಮನೂರ್, ಎಸ್.ಡಿ ಅರವಿಂದ್, ಆನಂದ್ ಚಿಟ್ಟವಾಡಗಿ, ರೂಪಾ ಬಡಿಗೇರ್, ಉಮೇಶ್ ಸುರೇಬಾನ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಕಷ್ಟು ಪ್ರತಿಭಾವಂತ ಕಲಾವಿದ್ರು ಈ ಚಿತ್ರದಲ್ಲಿ ನಟಿಸಿದ್ದು, ಕ್ವಾಲಿಟಿ ತಂತ್ರಜ್ಞರ ಕೈಚಳಕವಿದೆ. ಎಲ್ಲಾ ರೀತಿಯಲ್ಲೂ ಭರವಸೆ ಹುಟ್ಟಿಸ್ತಿರೋ ಈ ಸಿನಿಮಾ ಇದೇ ನವೆಂಬರ್ ನಲ್ಲೇ ಪ್ರೇಕ್ಷಕರ ಎದುರು ಬಲ್ಲಿದೆ.


Click it and Unblock the Notifications











