ಪತ್ನಿಗೆ ಕಿರುಕುಳ ನೀಡಿ ನಾಪತ್ತೆಯಾದ 'ನಂದಿನಿ' ಧಾರಾವಾಹಿ ನಾಯಕ ನಟ: ಅರೆಸ್ಟ್ ವಾರಂಟ್ ಜಾರಿ
ಕನ್ನಡ ಮತ್ತು ತಮಿಳು ಕಿರುತೆರೆ ಲೋಕದಿಂದ ಆಘಾತಕಾರಿ ಸುದ್ದಿಯೊಂದು ಬಂದಿದ್ದು, ಜನಪ್ರಿಯ ಧಾರಾವಾಹಿ 'ನಂದಿನಿ'ಯಲ್ಲಿ ನಾಯಕ ನಟನಾಗಿ ಹೆಸರುವಾಸಿಯಾಗಿರುವ ರಾಹುಲ್ ರವಿ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ನಟನ ವಿರುದ್ಧ ಪತ್ನಿ ದೂರು ದಾಖಲಿಸಿದ್ದು ರಾಹುಲ್ ರವಿ ನಾಪತ್ತೆಯಾಗಿದ್ದಾರೆ.
ರಾಹುಲ್ ರವಿ ವಿರುದ್ಧ ಪತ್ನಿ ಲಕ್ಷ್ಮಿ ಕಿರುಕುಳದ ದೂರು ನೀಡಿದ ಕೆಲವೇ ದಿನಗಳಲ್ಲಿ ಈ ಸುದ್ದಿ ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಚೆನ್ನೈ ಪೊಲೀಸರು ನಟನಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ಜೊತೆಗೆ ಅವರ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ್ದಾರೆ. ಬಂಧನದ ಭೀತಿಯಿಂದ ನಟ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಪತ್ನಿಗೆ ಕಿರುಕುಳ ನೀಡಿದರಾ 'ನಂದಿನಿ' ನಾಯಕ ನಟ!?
ನಂದಿನಿ ಧಾರಾವಾಹಿಯಿಂದ ಖ್ಯಾತಿ ಪಡೆದು ಹಲವು ಸಿನಿಮಾಗಳು ಮತ್ತು ಕಿರುರೆತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರುವ ರಾಹುಲ್ ರವಿ ಡಿಸೆಂಬರ್ 2020 ರಲ್ಲಿ ಲಕ್ಷ್ಮಿ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರ ಇಬ್ಬರ ನಡುವೆ ಜಗಳಗಳು ಆರಂಭವಾಗಿವೆ. ನಟ ರಾಹುಲ್ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು ಎಂದು ವರದಿಯಾಗಿದೆ.
ವರದಿ ಪ್ರಕಾರ ರಾಹುಲ್ ರವಿ ಮದುವೆಯಾಗಿದ್ದರೂ ಕೂಡ ಮತ್ತೊಬ್ಬ ಯುವತಿಯ ಜೊತೆಗೆ ಒಡನಾಟ ಇಟ್ಟುಕೊಂಡಿದ್ದರು. ಈ ಬಗ್ಗೆ ಲಕ್ಷ್ಮಿ ಅವರಿಗೆ ಸುಳಿವು ಸಿಕ್ಕ ನಂತರ ದಂಪತಿ ನಡುವೆ ಜಗಳಗಳು ಆರಂಭವಾದವು. ಪತಿಯ ಮತ್ತೊಂದು ಸಂಬಂದದ ಬಗ್ಗೆ ತಿಳಿದ ಲಕ್ಷ್ಮಿ ಸೀದಾ ಅವರ ಅಪಾರ್ಟ್ಮೆಂಟ್‌ಗೆ ಭೇಟಿ ನೀಡಿದ್ದರು. ಏಪ್ರಿಲ್ 26 ರ ಮಧ್ಯರಾತ್ರಿ ಸುಳಿವು ಆಧರಿಸಿ ಲಕ್ಷ್ಮಿ ಅವರು ಪೊಲೀಸರು ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯರೊಂದಿಗೆ ಅವರ ಅಪಾರ್ಟ್ಮೆಂಟ್‌ಗೆ ಹೋಗಿದ್ದರು.
ಹೆಂಡತಿಯೇ ಹುಚ್ಚಿ ಎಂದಿದ್ದ ನಟ ರಾಹುಲ್ ರವಿ!
ಈ ವೇಳೆ ಆತನ ಬೆಡ್‌ರೂಂನಲ್ಲಿ ಯುವತಿ ಇರುವುದು ನೋಡಿದ್ದರು. ಇದರಿಂದ ಸಿಟ್ಟಿಗೆದ್ದ ನಟ ರಾಹುಲ್ ಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದ ಸಂಬಂಧ ನಟನ ಪತ್ನಿ ಲಕ್ಷ್ಮಿ ಕೇಸು ದಾಖಲಿಸಿದ್ದರು. ಇದಕ್ಕೆ ರಾಹುಲ್ ರವಿ ತನ್ನ ಹೆಂಡತಿ ಮಾನಸಿಕ ಸ್ಥಿತಿ ಸರಿಯಿಲ್ಲ. ಅವರು ಮಾನಸಿಕವಾಗಿ ಸದೃಢವಾಗಿಲ್ಲ ಎಂದು ಆರೋಪಿಸಿದ್ದರು.

ಆದರೆ, ಅವರ ವಾದವನ್ನು ತಳ್ಳಿಹಾಕಿದ್ದ ಮದ್ರಾಸ್ ಹೈಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಕಳೆದ ನವೆಂಬರ್ 3 ರಂದು ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ. ನಟನ ವಿರುದ್ಧ ಬಂಧನ ವಾರಂಟ್ ಸಹ ಹೊರಡಿಸಲಾಗಿದೆ. ಆದರೆ, ರಾಹುಲ್ ರವಿ ನಾಪತ್ತೆಯಾಗಿದ್ದು, ಆತನನ್ನು ಹಿಡಿಯಲು ಪೊಲೀಸರು ಇನ್ನೂ ಪ್ರಯತ್ನಿಸುತ್ತಿದ್ದಾರೆ.
ನಟ, ಮಾಡೆಲ್ ರಾಹುಲ್ ರವಿ
ಮಾಡೆಲ್, ನಟ ಆಗಿರುವ ರಾಹುಲ್ ರವಿ, ಪೊನ್ನಂಬಿಲಿ ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿದರು. ಅವರು ಇಂಡಿಯನ್ ಲವ್ ಸ್ಟೋರಿ ಮತ್ತು ಕಟ್ಟುಮ್ ಮಕನ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆದರೆ, ಅವರಿಗೆ ಹೆಚ್ಚು ಜನಪ್ರಿಯ ನಾಯಕನನ್ನಾಗಿಸಿದ್ದು, ಕನ್ನಡ ಮತ್ತು ತಮಿಳಿನಲ್ಲಿ ಪ್ರಸಾರವಾಗುವ 'ನಂದಿನಿ' ಧಾರಾವಾಹಿ. ನಂದಿನಿ ಧಾರಾವಾಹಿಯು ಉದಯ ಟಿವಿ ಮತ್ತು ಸನ್ ಟಿವಿ ನೆಟ್‌ವರ್ಕ್‌ಗಳಲ್ಲಿ ಪ್ರಸಾರವಾಗುವ ಬಹುಭಾಷಾ ಧಾರಾವಾಹಿ. ರಾಹುಲ್ ಸನ್ ಟಿವಿಯ ಕಣ್ಣಕ್ಕನನ್ನೇ ಕಾರ್ಯಕ್ರಮದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.


Click it and Unblock the Notifications











